ಯಳಸೂರು ನಾಡಕಚೇರಿಯಲ್ಲಿ ಸರ್ವರ್ ಸಮಸ್ಯೆ

ಸಕಲೇಶಪುರ: ತಾಲೂಕಿನ ಯಸಳೂರು ಹೋಬಳಿ ಕೇಂದ್ರದಲ್ಲಿರುವ ನಾಡಕಚೇರಿಯಲ್ಲಿ ಸರ್ವರ್ ಸಮಸ್ಯೆಯಿಂದ ಕೆಲಸಗಳಾಗದೆ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ತಾಲೂಕಿನ ಗಡಿ ಭಾಗದಲ್ಲಿರುವ ಹೋಬಳಿ ಕೇಂದ್ರ ತಾಲೂಕು ಕೇಂದ್ರದಿಂದ 30 ಕಿ.ಮೀ.ದೂರದಲ್ಲಿದೆ. ಹೀಗಾಗಿ ಸರ್ಕಾರಿ ಕೆಲಸಗಳಿಗೆ ಸುತ್ತಲಿನ ಗ್ರಾಮಸ್ಥರು ಯಸಳೂರಿಗೆ ಬರಬೇಕು. ಆದರೆ ನಾಡಕಚೇರಿಯ ಸರ್ವರ್ ಸಮಸ್ಯೆ ಜನರನ್ನು ಹೈರಾಣಾಗಿಸಿದೆ. ನಿರಂತರ ಮಳೆ ಬೀಳುವ ಪ್ರದೇಶವಾಗಿದ್ದು ಅತಿವೃಷ್ಟಿ ಪರಿಹಾರಕ್ಕೆ ಅರ್ಹರಾಗಲು ದಾಖಲೆ ಪತ್ರ ಪಡೆಯಲು ಕಚೇರಿಗೆ ಭೇಟಿ ನೀಡುವುದು ಅನಿವಾರ್ಯವಾಗಿದೆ.

ಕಚೇರಿ ಬದಲಾವಣೆಗೆ ಒತ್ತಾಯ:
ಖಾಸಗಿ ಕಟ್ಟಡದಲ್ಲಿ ನಾಡಕಚೇರಿ ಕಾರ್ಯ ನಿರ್ವಹಿಸುತ್ತಿದ್ದು ಜತೆಗೆ ತಗ್ಗು ಪ್ರದೇಶದಲ್ಲಿರುವುದರಿಂದ ಇಂಟರ್ನೆಟ್ ಸಂಪರ್ಕ ಸಿಗುತ್ತಿಲ್ಲ. ಆದ್ದರಿಂದ ಸೂಕ್ತ ಸ್ಥಳಕ್ಕೆ ಕಚೇರಿ ವರ್ಗಾಯಿಸಬೇಕು. ಕಚೇರಿ ಬದಲಾವಣೆಗೆ ಸಾಕಷ್ಟು ಬಾರಿ ಆಗ್ರಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ಆರೋಪಿಸಿದರು.

ಕಿರಿದಾದ ಕಚೇರಿ: ನಾಡಕಚೇರಿ ಒಳಾಂಗಣ ಕಿರಿದಾಗಿದ್ದು ಗಾಳಿ, ಬೆಳಕು ಸಮರ್ಪಕವಾಗಿ ಬರುವುದಿಲ್ಲ. ಹಗಲಿನಲ್ಲಿಯೂ ವಿದ್ಯುತ್ ದೀಪಗಳನ್ನೇ ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ವ್ಯತ್ಯಯವಾದರೆ ಕಚೇರಿಯಲ್ಲಿ ಬಹುತೇಕ ಕೆಲಸಗಳು ನಡೆಯದೆ ಸಂಕಷ್ಟಕ್ಕೆ ಸಿಲುಕಿಸಿದೆ.

 ಯಸಳೂರು ನಾಡಕಚೇರಿಯಲ್ಲಿ ಸರ್ವರ್ ಸಮಸ್ಯೆಯಿಂದ ಯಾವುದೇ ಕೆಲಸಗಳೂ ಆಗುತ್ತಿಲ್ಲ. ಚಿಕ್ಕ ಕೆಲಸವಾಗಬೇಕಾದರೂ ದಿನಗಟ್ಟಲೇ ಕಾಯಬೇಕು. ಗಡಿಭಾಗದಲ್ಲಿ ಇರುವ ಕಾರಣಕ್ಕೇನೋ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿ, ಜನಪ್ರತಿನಿಧಿಗಳು ಕ್ರಮ ವಹಿಸಿಲ್ಲ. ಕೂಡಲೇ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರಿಸಿ ಸಮಸ್ಯೆ ಸರಿಪಡಿಸಬೇಕು.
ಶೋಭಾ ಬ್ಯಾಗಡಹಳ್ಳಿ, ರೈತ ಮಹಿಳೆ

ಯಸಳೂರಿನಲ್ಲಿ ಸ್ವಂತ ನಾಡಕಚೇರಿ ಹೊಂದಲು ಜಾಗ ಗುರುತಿಸಿದ್ದು ಅನುದಾನ ಬಿಡುಗಡೆಯಾದ ತಕ್ಷಣ ಕಾಮಗಾರಿ ಪ್ರಾರಂಭವಾಗಲಿದೆ. ಸರ್ವರ್ ಸಮಸ್ಯೆಗೆ ಸಂಬಂಧಪಟ್ಟಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
ರಕ್ಷಿತ್, ಸಕಲೇಶಪುರ ತಹಸೀಲ್ದಾರ್

 

Leave a Reply

Your email address will not be published. Required fields are marked *