ಖಾನಾಪುರದಲ್ಲಿ ಸರಣಿ ಕಳ್ಳತನ

ಖಾನಾಪುರ: ಪಟ್ಟಣದ ಜನನಿಬಿಡ ಪ್ರದೇಶದಲ್ಲಿರುವ ನಾಲ್ಕು ಅಂಗಡಿಗಳ ಶೆಟರ್ಸ್ ಮುರಿದು ಕನ್ನ ಹಾಕಿದ ಕಳ್ಳರು ಅಂಗಡಿಯಲ್ಲಿದ್ದ ನಗದು ಸೇರಿ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿರುವ ಘಟನೆ ಬುಧವಾರ ರಾತ್ರಿ ಸಂಭವಿಸಿದ್ದು, ಗುರುವಾರ ಬೆಳಕಿಗೆ ಬಂದಿದೆ.

ಬೆಳಗಾವಿ-ಪಣಜಿ ಹೆದ್ದಾರಿ ಪಕ್ಕದ ಸಹರಾ ಸ್ಟೀಲ್ ಅಂಗಡಿಯ ಬೀಗ ಮುರಿದು ಶೇಟರ್ ಎಳೆದು ಒಳ ಪ್ರವೇಶಿಸಿದ ಕಳ್ಳರು ಅಂಗಡಿಯಲ್ಲಿದ್ದ 16 ಸಾವಿರ ನಗದು ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ಕಳ್ಳರ ಕೃತ್ಯ ಸಿಸಿ ಕಾಮೆರಾದಲ್ಲಿ ಸೆರೆಯಾಗಿವೆ. ಆದರೆ ಕಳ್ಳರು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರಿಂದ ಪತ್ತೆ ಕಾರ್ಯದಲ್ಲಿ ಅಡಚಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಇದೇ ಮಾದರಿಯಲ್ಲಿ ಕಳ್ಳರು ಪಟ್ಟಣದ ಮತ್ತೆ ಮೂರು ಅಂಗಡಿಗಳ ಬೀಗ ಮುರಿದು ಕಳ್ಳತನ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಖಾನಾಪುರ ಠಾಣೆಯ ಪೊಲೀಸರು ಕಳ್ಳರ ಪತ್ತೆಗೆ ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಮಲಪ್ರಭಾ ನದಿಯಲ್ಲಿ ಶವ ಪತ್ತೆ

ಖಾನಾಪುರ: ಪಟ್ಟಣದ ಹಳೆ ಸೇತುವೆ ಬಳಿಯ ಮಲಪ್ರಭಾ ನದಿಯಲ್ಲಿ ಗುರುವಾರ ತಾಲೂಕಿನ ನೇರಸಾ ಗ್ರಾಮದ ನಿವಾಸಿ ರಮೇಶ ದೇಸಾಯಿ (60) ಅವರ ಶವ ಪತ್ತೆಯಾಗಿದೆ. ಕಳೆದ ಹತ್ತು ದಿನಗಳಿಂದ ದೇಸಾಯಿ ಕಾಣೆಯಾಗಿದ್ದರು. ಘಟನಾ ಸ್ಥಳಕ್ಕೆ ಖಾನಾಪುರ ಠಾಣೆಯ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.