Wednesday, 12th December 2018  

Vijayavani

Breaking News

ಕಿಡ್ನ್ಯಾಪ್ ಸೀರಿಯಲ್ಸ್

Tuesday, 20.03.2018, 3:05 AM       No Comments

 

ನಿಮಗೆ ಯಾರ ಮೇಲಾದರೂ ದ್ವೇಷವಿದೆಯೇ, ಅವರ ಮೇಲೆ ಸೇಡು ತೀರಿಸಿಕೊಳ್ಳಬೇಕೆ? ಸಿಂಪಲ್, ಅವರ ಮನೆಯ ಹೆಣ್ಣು ಮಗುವನ್ನು, ಅದರಲ್ಲೂ ಆಗ ತಾನೇ ಜನಿಸಿದ ಹಸುಗೂಸನ್ನು ಅಪಹರಿಸಿರಿ! ಬೇರೆಲ್ಲೋ ಇಟ್ಟು ಹಿಂಸೆ ನೀಡಿ ಬೆಳೆಸಿರಿ! ಆ ಮೂಲಕ ಆ ಮನೆಯವರು ನೋವು ಅನುಭವಿಸುವಂತೆ ಮಾಡಿ!! ನೀವು ಕಿರುತೆರೆ ಧಾರಾವಾಹಿಗಳ ವೀಕ್ಷಕರಾಗಿದ್ದಲ್ಲಿ, ಇಂತಹ ಸಂದೇಶ ಸಾರುವ ಧಾರಾವಾಹಿಗಳನ್ನು ಒಂದಾದರೂ ನೋಡಿಯೇ ಇರುತ್ತೀರಿ. ಇತ್ತೀಚೆಗಂತೂ ಪ್ರೖೆಮ್ ಟೈಮ್ ಧಾರಾವಾಹಿಗಳಲ್ಲಿ ಹೆಣ್ಣು ಮಕ್ಕಳ ಸೆಂಟಿಮೆಂಟ್​ಗಳು ಹಾಗೂ ಕಿಡ್ನ್ಯಾಪ್​ಗಳದ್ದೇ ಪಾರುಪತ್ಯ.

|ಸುಪ್ರೀತಾ ಹೆಬ್ಬಾರ್

ಹೆಣ್ಣು ಮಕ್ಕಳು ಮುದ್ದು ಮುದ್ದಾಗಿ ನಟಿಸುತ್ತವೆ. ಅವುಗಳ ಮುಗ್ಧತೆಗೆ ಜನರು ಮಾರು ಹೋಗುತ್ತಾರೆ. ಮಕ್ಕಳ ನಗುವಿನೊಂದಿಗೆ ನಗುತ್ತಾರೆ, ಅಳುವಿನೊಂದಿಗೆ ಅಳುತ್ತಾರೆ. ಆ ಹೆಣ್ಣುಮಕ್ಕಳಿಗೆ ಹಿಂಸೆಯಾದರೆ, ತಮ್ಮ ಮನೆಯ ಮಗುವಿಗೆ ನೋವಾದಂತೆ ಮರುಗುತ್ತಾರೆ. ನೋವು ನೀಡಿದವರಿಗೆ ಹಿಡಿ ಶಾಪ ಹಾಕುತ್ತಾರೆ. ಎಷ್ಟೋ ಬಾರಿ ಧಾರಾವಾಹಿಗಳ ಅಂದಿನ ಸಂಚಿಕೆ ಮುಗಿದ ಮೇಲೂ ಜನರು ಆ ಮಕ್ಕಳಿಗಾಗಿಯೇ ಮರುಗುತ್ತಾರೆ. ಅದೇ ಕಾತುರದಿಂದ ಮುಂದಿನ ಸಂಚಿಕೆಗಾಗಿ ಕಾಯುತ್ತಾರೆ. ಜನರ ಈ ಭಾವನೆಗಳನ್ನೇ ಎನ್​ಕ್ಯಾಷ್ ಮಾಡಿಕೊಳ್ಳುವ ನಿರ್ದೇಶಕರು ಹಾಗೂ ವಾಹಿನಿಗಳು ಹೆಣ್ಣು ಮಕ್ಕಳನ್ನು ಬಳಸಿಕೊಂಡು ಧಾರಾವಾಹಿಗಳಿಗೆ ಟಿಆರ್​ಪಿ ಗಿಟ್ಟಿಸಿಕೊಳ್ಳುವುದು ಎಂದಿನಿಂದಲೂ ಇರುವ ಪದ್ಧತಿ. ಈಗ ಅದು ಇನ್ನೊಂದು ಉತ್ತುಂಗಕ್ಕೆ ತಲುಪಿದೆ. ಬಹುತೇಕ ಎಲ್ಲ ಧಾರಾವಾಹಿಗಳಲ್ಲಿ ಹೆಣ್ಣುಮಕ್ಕಳನ್ನು ಕಿಡ್ನ್ಯಾಪ್ ಮಾಡುವ ಸನ್ನಿವೇಶ ಇತ್ತೀಚೆಗೆ ಸಾಮಾನ್ಯವಾಗುತ್ತಿದೆ. ಈ ಮೂಲಕ ಟಿಆರ್​ಪಿ ಗಿಟ್ಟಿಸಿಕೊಳ್ಳುವಲ್ಲಿ ನಿರ್ದೇಶಕರು ಯಶಸ್ಸು ಕಾಣುತ್ತಾರೆ. ಇಂತಹ ಒಂದು ಕಥೆಗೆ ಜನರು ಸ್ಪಂದಿಸಿದರೆಂದರೆ ಮುಗಿಯಿತು. ಗೆದ್ದತ್ತಿನ ಬಾಲ ಹಿಡಿಯುವಂತೆ ಇತರ ನಿರ್ದೇಶಕರು ಸಹ ಅದೇ ದಾರಿ ಹಿಡಿಯುತ್ತಾರೆ. ಪರಿಣಾಮವಾಗಿ ನಾಯಿಕೊಡೆಗಳಂತೆ ಅಂತಹುದೇ ಸೀರಿಯಲ್​ಗಳು ಒಂದರ ಹಿಂದೊಂದರಂತೆ ಪ್ರಸಾರವಾಗುತ್ತವೆ.

ಸಂಜೆ ಆರರಿಂದ 10ರವರೆಗೆ ನಿರಂತರವಾಗಿ ಸಾಗುವ ಪ್ರೖೆಮ್ ಟೈಮ್ ಧಾರಾವಾಹಿಗಳಲ್ಲಿ ಪ್ರತಿಯೊಂದರಲ್ಲೂ ಒಂದಿಲ್ಲೊಂದು ಬಗೆಯಲ್ಲಿ ಎಳೆಯ ಹೆಣ್ಣು ಮಕ್ಕಳೇ ಗಮನ ಸೆಳೆಯುತ್ತಾರೆ. ಅದೇ ಗಂಡು ಮಗುವಾದರೆ, ಭಾವನಾತ್ಮಕ ಪ್ರತಿಕ್ರಿಯೆ ಈ ಮಟ್ಟದ್ದಿರುವುದಿಲ್ಲ. ಹೆಣ್ಣು ಮಕ್ಕಳೆಂದರೆ ಸಹಜವಾಗಿಯೇ ಜನರ ಕರುಳು ಬೇಗ ಮಿಡಿಯುತ್ತದೆ ಎಂಬುದು ವಾಹಿನಿ ಹಾಗೂ ನಿರ್ದೇಶಕರ ಗೇಮ್ ಪ್ಲಾನ್.

ಈ ಸಮಯದಲ್ಲಿ ಪ್ರಸಾರವಾಗುವ ಧಾರಾವಾಹಿಗಳನ್ನು ಗಮನಿಸಿದರೆ, ಅವುಗಳೆಲ್ಲ ತನಿಖಾ ಸಂಸ್ಥೆಗಳಾಗಿ ಬದಲಾಗಿವೆಯಲ್ಲವೇ ಎಂಬ ಅನುಮಾನ ಬರುತ್ತದೆ. ಸಾಮಾನ್ಯವಾಗಿ ಎಲ್ಲ ಧಾರಾವಾಹಿಗಳಲ್ಲಿ ಮನೆ ಮಕ್ಕಳನ್ನು ಮನೆಯವರೇ ಯಾರಾದರೂ ಅಪಹರಿಸಿರುತ್ತಾರೆ. ಅವರನ್ನು ಕಥಾ ನಾಯಕಿ ಹುಡುಕುತ್ತಿರುತ್ತಾಳೆ. ಆಕೆಯ ಪತ್ತೆದಾರಿಕೆಗೆ ಇನ್ಯಾರೋ ನೆರವಾಗಲು ಮುಂದಾಗುತ್ತಾರೆ. ಅವರ ಮೇಲೆ ಕೂಡ ಆ ವಿಲನ್ ಕಣ್ಣು ಬೀಳುತ್ತದೆ. ವಿಷಯ ಹೇಳದಂತೆ ತಡೆಯಲು, ನೆರವಾಗಲು ಬಂದವರ ಕುಟುಂಬ ಸದಸ್ಯರನ್ನು, (ಅಲ್ಲಿಯೂ ಮಕ್ಕಳೇ ಪ್ರಧಾನ) ಮಕ್ಕಳನ್ನು ವ್ಯವಸ್ಥಿತವಾಗಿ ಅಪಹರಿಸಿ ಅವರ ಬಾಯಿ ಮುಚ್ಚಿಸಲಾಗುತ್ತದೆ. ಬಹುತೇಕ ಎಲ್ಲ ಧಾರಾವಾಹಿಗಳಲ್ಲೂ ಇದೇ ಟ್ರೆಂಡ್ ಪಾಲಿಸಲಾಗುತ್ತಿದೆ.

ಲೇಡಿ ವಿಲನ್​ಗಳು: ಒಂದು ದೊಡ್ಡ ಸಂಸಾರ. ಅದರೊಳಗಿದ್ದುಕೊಂಡು, ಎಲ್ಲ ವಿಶ್ವಾಸ ಗಳಿಸಿಕೊಂಡೇ, ಮನೆಯವರ ಮೇಲೆ ವಿಷಕಾರುವ, ಆಸ್ತಿಯ ಮೇಲೆ ಕಣ್ಣು ಹಾಕುವ ಒಬ್ಬ ಲೇಡಿ ವಿಲನ್. ಇದೇ ಇಂದು ಮನೆ ಮನೆಗಳನ್ನು ತಲುಪುತ್ತಿರುವ ಧಾರಾವಾಹಿಗಳ ಮುಖ್ಯ ಪಾತ್ರ. ಇದನ್ನು ಒಳಗೊಂಡೇ ಕಥಾ ಹಂದರ. ಇದುವೇ ಮುಖ್ಯ ತಿರುಳು. ನೆಗೆಟಿವ್ ಪಾತ್ರಗಳಲ್ಲಿರುವ ಮಹಿಳೆಯರು ಇನ್ನಿಲ್ಲದ ಹಾಗೆ ಭಾವನಾತ್ಮಕ ನಾಟಕಗಳನ್ನಾಡಿ ಮನೆಯವರನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡಿರುತ್ತಾರೆ. ಮನೆಯ ಸದಸ್ಯರು ಸ್ವಲ್ಪ ಅತಿ ಅನಿಸುವಷ್ಟೇ ಅವರನ್ನು ನಂಬಿರುತ್ತಾರೆ. ಇಂತಹ ಪಾತ್ರಗಳಲ್ಲಿರುವ ಮಹಿಳೆಯರ ಉಡುಪು, ಅಲಂಕಾರಗಳು ಕೂಡ ಇತರರಿಗಿಂತ ವಿಶೇಷವಾಗಿಯೇ ಇರುತ್ತವೆ. ಗಾಢ ಬಣ್ಣದ ಸೀರೆಗಳು, ಚಿತ್ರವಿಚಿತ್ರ ಕಿವಿಯೋಲೆ, ಸರಗಳನ್ನು ಧರಿಸಿ ಅತಿಯಾದ ಮೇಕಪ್ ಇವರ ಸ್ಟೈಲ್ ಸ್ಟೇಟ್​ವೆುಂಟ್ ಆಗಿರುತ್ತದೆ. ಇದರಿಂದ ಜನರಲ್ಲಿ ವಿಲನ್ ಅಂದರೆ ಹೀಗೆ ಇರಬೇಕು ಎಂಬ ಭಾವನೆ ಮೂಡುತ್ತಿದ್ದು, ನಕಾರಾತ್ಮಕ ಧೋರಣೆ ಮೂಡುತ್ತಿದೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.

ಟಿಆರ್​ಪಿ ಗೇಮ್ ಸಾಮಾನ್ಯವಾಗಿ ಟಿವಿ ಧಾರಾವಾಹಿಗಳ ಟಿಆರ್​ಪಿಯನ್ನು ಪ್ರತಿ ವಾರಕ್ಕೊಮ್ಮೆ ಅಳೆಯಲಾಗುತ್ತದೆ. ಆಗ ಟಿಆರ್​ಪಿ ಆಧಾರದ ಮೇಲೆ ಕಥೆಯ ದಿಕ್ಕನ್ನು ಬದಲಿಸಲಾಗುತ್ತದೆ. ಆದರೆ, ಹೆಣ್ಣು ಮಕ್ಕಳ ಅಸಹಾಯಕತೆ, ಕಣ್ಣೀರು ಹಾಕುವ ದೃಶ್ಯಗಳಿಗೆ ಅತಿ ಹೆಚ್ಚು ಟಿಆರ್​ಪಿ ದೊರೆಯುವುದರಿಂದ ಅದರ ಮೇಲೆಯೇ ಹೆಚ್ಚಾಗಿ ಅವಲಂಬಿಸಲಾಗುತ್ತದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈಗ ಹೆಣ್ಣು ಮಕ್ಕಳನ್ನು ಅಪಹರಿಸುವ ಕಥೆಗಳಿಗೆ ಹೆಚ್ಚಿನ ಟಿಆರ್​ಪಿ ದೊರೆಯುತ್ತಿರುವುದರಿಂದ ವಾಹಿನಿಗಳು ಹಾಗೂ ನಿರ್ದೇಶಕರು ಅದೇ ಕಥೆಯ ಮೊರೆ ಹೋಗುತ್ತಿದ್ದಾರೆ ಎನ್ನುತ್ತಾರೆ ಖಾಸಗಿ ವಾಹಿನಿಯ ಉದ್ಯೋಗಿಯೊಬ್ಬರು.

ಧಾರಾವಾಹಿಗಳು ಜನರ ಭಾವನೆಗಳ ಜತೆ ಆಟವಾಡುತ್ತಿರುವುದು ನಿಜ. ಆದರೆ, ಕಲಾವಿದರು ಈ ನಿಟ್ಟಿನಲ್ಲಿ ಏನೂ ಮಾಡಲಾಗದ ಸ್ಥಿತಿಯಲ್ಲಿರುತ್ತಾರೆ. ಕಥಾಹಂದರ ನಿರ್ಧಾರ ನಿರ್ದೇಶಕರು, ಕಥೆಗಾರರು ಹಾಗೂ ವಾಹಿನಿಯ ಸ್ಯಾಟಲೈಟ್ ಮಾಲೀಕತ್ವ ಹೊಂದಿರುವರದ್ದಾಗಿರುತ್ತದೆ. ಮನರಂಜನೆ ಕೂಡ ಉದ್ಯಮವಾಗಿ ಬದಲಾಗಿರುವುದರಿಂದ ಅದನ್ನು ಸುಧಾರಿಸಲು ಒಂದಿಬ್ಬರಿಂದ ಸಾಧ್ಯವಿಲ್ಲ. ಇದನ್ನು ತಡೆಯಲು ಕೇಂದ್ರ ಸರ್ಕಾರ ಸಾರ್ವತ್ರಿಕ ನೀತಿ ಜಾರಿಗೆ ತರಬೇಕಷ್ಟೆ. ಕೇವಲ ಧಾರಾವಾಹಿಗಳಷ್ಟೇ ಅಲ್ಲದೆ, ಮನರಂಜನೆ ಹಾಗೂ ಸುದ್ದಿ ಮಾಧ್ಯಮಗಳಿಗೆ ಕೂಡ ನಿರ್ದಿಷ್ಟ ಇತಿಮಿತಿ ಹಾಗೂ ನಿಯಂತ್ರಣ ಹೇರಬೇಕಿದೆಯಷ್ಟೆ.

| ಮುಖ್ಯಮಂತ್ರಿ ಚಂದ್ರು ಹಿರಿಯ ನಟರು

ಮಕ್ಕಳ ಕಲ್ಯಾಣ ಸಮಿತಿಗೆ ಪತ್ರ

ಧಾರಾವಾಹಿಗಳು ಹೆಣ್ಣು ಮಕ್ಕಳನ್ನು ತೀರಾ ದುರ್ಬಲರನ್ನಾಗಿ ತೋರಿಸಿ, ಸಮಾಜಕ್ಕೆ ನಕಾರಾತ್ಮಕ ಸಂದೇಶ ನೀಡುತ್ತಿವೆ ಎಂಬುದರ ಕುರಿತು ಸಾಕಷ್ಟು ದೂರುಗಳು ಬಂದಿವೆ. ಅದಕ್ಕಾಗಿಯೇ ನಾವು ಪ್ರತಿಯೊಂದೂ ಧಾರಾವಾಹಿಗಳಲ್ಲಿ ಹೆಣ್ಣು ಮಕ್ಕಳನ್ನು ಚಿತ್ರಿಸುವ ಕುರಿತು ಗಮನಹರಿಸಲು ಪ್ರತ್ಯೇಕ ಸಮಿತಿಯನ್ನು ರಚಿಸಲಾಗಿದೆ. ಈಗಾಗಲೇ ಹೆಣ್ಣು ಮಕ್ಕಳನ್ನು ಶೋಷಿಸುವ ದೃಶ್ಯಗಳಿದ್ದ ಒಂದೆರಡು ಧಾರಾವಾಹಿಗಳ ವಿರುದ್ಧ ರಾಜ್ಯ ಮಕ್ಕಳ ಕಲ್ಯಾಣ ಸಮಿತಿಗೆ ಪತ್ರ ಬರೆಯಲಾಗಿದೆ. ಅವರ ಸಂಬಂಧಪಟ್ಟವರಿಗೆ, ಕಥಾ ಹಂದರವನ್ನು ಬದಲಾಯಿಸುವಂತೆ ನಿರ್ದೇಶನ ನೀಡಿದ್ದಾರೆ. ರಾಷ್ಟ್ರೀಯ ವಾಹಿನಿಯಲ್ಲಿ ಇಂತಹ ದೃಶ್ಯಗಳು ಬಂದಲ್ಲಿ ರಾಷ್ಟ್ರೀಯ ಮಕ್ಕಳ ಕಲ್ಯಾಣ ಸಮಿತಿಗೆ ಪತ್ರ ಬರೆಯುತ್ತೇವೆ. ಸೀರಿಯಲ್ ನಿರ್ವಿುಸುವ ಕೆಲ ಸ್ಟುಡಿಯೋಗಳಿಗೆ ಕೂಡ ನಾವು ಪತ್ರ ಬರೆದಿದ್ದೇವೆ. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎನ್ನುತ್ತಾರೆ ಚೈಲ್ಡ್ ರೈಟ್ ಟ್ರಸ್ಟ್​ನ ನಿರ್ದೇಶಕ ಜಿ. ನಾಗಸಿಂಹ ರಾವ್.

ಖಾಸಗಿ ವಾಹಿನಿಗಳಲ್ಲಿ ಬರುವ ಧಾರಾವಾಹಿಗಳು ಕೇವಲ ಟಿಆರ್​ಪಿಯನ್ನಷ್ಟೇ ನೆಚ್ಚಿಕೊಂಡಿದ್ದು, ನೀತಿ ನಿಯಮಗಳನ್ನೆಲ್ಲ ಗಾಳಿಗೆ ತೂರಿವೆ. ವಾಹಿನಿ ಮತ್ತು ಧಾರಾವಾಹಿಗಳ ನಿರ್ದೇಶಕರು ತಮ್ಮ ಸಾಮಾಜಿಕ ಬಾಧ್ಯತೆಯನ್ನು ಅರಿಯಬೇಕಷ್ಟೇ. ಒತ್ತಡ ಹೇರಲು ಸಾಧ್ಯವಿಲ್ಲ.

| ನಾಗಸಿಂಹ ರಾವ್ ಚೈಲ್ಡ್ ರೈಟ್ ಟ್ರಸ್ಟ್ ನಿರ್ದೇಶಕರು

 

Leave a Reply

Your email address will not be published. Required fields are marked *

Back To Top