ಸಿನಿಮಾ

ನೆಮ್ಮದಿ ಜೀವನಕ್ಕೆ ಪರೋಪಕಾರ ಸಹಕಾರಿ: ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅಭಿಮತ

ಚಿತ್ರದುರ್ಗ: ಪರೋಪಕಾರಿ ಆಗಿರುವ ಗಿಡ-ಮರ, ಪ್ರಾಣಿ, ಪಕ್ಷಿಗಳಂತೆ ನೆಮ್ಮದಿಯ ಜೀವನಕ್ಕೆ ಮನುಷ್ಯನೂ ಪರೋಪಕಾರಿಯಾಗಿ ಜೀವನ ಸಾಗಿಸ ಬೇಕಿದೆ ಎಂದು ಧಾರವಾಡ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.

ಮುರುಘರಾಜೇಂದ್ರ ಮಠದಲ್ಲಿ ಶುಕ್ರವಾರ ಏರ್ಪಡಿಸಿದ್ದ 33ನೇ ವರ್ಷದ 5ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿ, ಶ್ರೀಮಠವು ಅನೇಕ ಸಮಾಜಮುಖಿ ಕಾರ್ಯಗಳೊಂದಿಗೆ ಮುನ್ನೆಡೆದಿದೆ. ಅವುಗಳಲ್ಲಿ ಕಲ್ಯಾಣ ಮಹೋತ್ಸವ ಬಹುದೊಡ್ಡದು ಎಂದರು.

ಸತಿ-ಪತಿಗಳೊಂದಾದ ಭಕ್ತಿ ಶಿವಂಗೆ ಹಿತ. ಮನಸ್ತಾಪವಿಲ್ಲದ ದಾಂಪತ್ಯ ಆದರ್ಶ ಬದುಕೆನಿಸಿಕೊಳ್ಳುತ್ತದೆ ಎಂದು ಹೇಳಿದರು.

ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಲಿಂ. ಮಲ್ಲಿಕಾರ್ಜುನ ಶ್ರೀಗಳು 17ನೇ ಜಗದ್ಗುರುಗಳಾಗಿ ಶ್ರೀಮಠವನ್ನು ಮುನ್ನಡೆಸಿದರು. ಮಠದ ಪಕ್ಕದಲ್ಲಿ ತೆಂಗಿನ ತೋಟವನ್ನು ಅಭಿವೃದ್ಧಿ ಪಡಿಸಿದ್ದರು ಎಂದು ಸ್ಮರಿಸಿದರು.

ಶ್ರೀಮಠವು ಅನುಭವ ಮಂಟಪವನ್ನು ನಿರ್ಮಿಸಿ ಸರ್ವ ಸಮಾಜದ ಸಾವಿರಾರು ಜನರಿಗೆ ನಿತ್ಯ ಅನ್ನದಾಸೋಹ ಮಾಡುತ್ತಿದೆ. ಪ್ರತಿ ತಿಂಗಳು ಸಾಮೂಹಿಕ ಕಲ್ಯಾಣ ಮಹೋತ್ಸವ ಏರ್ಪಡಿಸುತ್ತಿರುವುದು ಸಾಮಾಜಿಕ ಕಳಕಳಿಯ ಪ್ರತೀಕವಾಗಿದೆ ಎಂದರು.

ಶ್ರೀ ಬಸವನಾಗಿದೇವ ಸ್ವಾಮೀಜಿ ಮಾತನಾಡಿ, ಇನ್ನೊಬ್ಬರಿಗೆ ಕೇಡನ್ನು ಬಯಸದೆ ಬದುಕಿನ ದಾರಿಯಲ್ಲಿ ಸಾಗಬೇಕು. ಹಿಂದೆ ನಾವು ಒಳ್ಳೆಯದನ್ನು ಮಾಡಿದ್ದರೆ, ಇಂದು ಅದರ ಫಲವನ್ನು ಉಣ್ಣುತ್ತೇವೆ. ನಾವು ಯಾವುದೇ ದುರ್ಬುದ್ಧಿಗೆ ಒಳಗಾಗಬಾರದು. ಅಂತಹ ಗುಣಗಳು ಬರಬಾರದು ಎಂದು ಹೇಳಿದರು.

ಶ್ರೀ ಬಸವ ಬೀರೇಶ್ವರ ಸ್ವಾಮೀಜಿ, ಪೈಲ್ವಾನ್ ತಿಪ್ಪೇಸ್ವಾಮಿ ಮತ್ತಿತರರು ಇದ್ದರು. ವಿವಾಹ ಮಹೋತ್ಸವದಲ್ಲಿ 10 ಜೋಡಿಗಳ ದಾಂಪತ್ಯಕ್ಕೆ ಕಾಲಿಟ್ಟರು. ಉಮೇಶ್ ಪತ್ತಾರ್ ಸಂಗಡಿಗರು ಪ್ರಾರ್ಥಿಸಿದರು. ವೀರಭದ್ರಯ್ಯ ಸ್ವಾಗತಿಸಿದರು. ಚಿನ್ಮಯಿ ದೇವರು ನಿರೂಪಿಸಿದರು.

Latest Posts

ಲೈಫ್‌ಸ್ಟೈಲ್