ವಾಷಿಂಗ್ಟನ್: ವಿಶ್ವದ ನಂ.1 ಟೆನಿಸ್ ಆಟಗಾರ್ತಿಯಾಗಿದ್ದ ಸೆರೆನಾ ವಿಲಿಯಮ್ಸ್ ಈ ವರ್ಷದ ಕೊನೆಯಲ್ಲಿ ತನ್ನ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕುತೂಹಲದ ಸಂಗತಿ ಎಂದರೆ ಈ ಬಲಾಡ್ಯ ಆಟರಾರ್ತಿ ಮಗುವಿಗೆ ಜನ್ಮ ನೀಡಿದ ಒಂದು ತಿಂಗಳ ತರುವಾಯ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.
35 ವರ್ಷದ ಸೆರೆನಾ ಮತ್ತು ಆಕೆಯ ಪತಿ ರೆಡ್ಡಿಟ್ ಸಹ ಸಂಸ್ಥಾಪಕ ಅಲೆಕ್ಸಿಸ್ ಓಹಿಯನ್ ಇಬ್ಬರೂ ತಮ್ಮ ಮೊದಲ ಮಗುವಿನ ಆಗಮನಕ್ಕೆ ಸ್ವಾಗತ ಕೋರಲು ಉತ್ಸುಕರಾಗಿದ್ದಾರೆ. 23 ಬಾರಿ ಗ್ರ್ಯಾಂಡ್ ಸ್ಲಾಮ್ನಲ್ಲಿ ಗೆದ್ದಿರುವ ಸೆರೆನಾ, 2017ರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಗೆ ಸಿದ್ಧತೆಯಲ್ಲಿದ್ದಾರಂತೆ.
ಸುದ್ದಿ ಸಂಸ್ಧೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಸೆರೆನಾ, ಇದೊಂದು ಹುಚ್ಚಾಟದ ನಿರ್ಧಾರವಾಗಿದೆ. ಇನ್ನೇನು ಮೂರು ತಿಂಗಳಲ್ಲಿ ತನ್ನ ಮಗುವಿಗೆ ಜನ್ಮ ನೀಡಲಿದ್ದು, ಆ ಬಳಿಕ ಕೆಲ ತಿಂಗಳ ನಂತರವೇ ಹಿಂತಿರುಗಲಿದ್ದೇನೆ. ಇನ್ನಷ್ಟು ಉತ್ಸುಕತೆಯಿಂದಲೇ ಅಂಗಳಕ್ಕೆ ಇಳಿಯಲಿದ್ದೇನೆ. ಒಮ್ಮೆ ಕ್ರೀಡೆಯಲ್ಲಿ ಸೋತರೂ ಜಗ್ಗುವುದಿಲ್ಲ. ಸದ್ಯಕ್ಕಂತೂ ನಾನೇನು 20 ವರ್ಷದವಳಲ್ಲ. ಮಾಡು ಇಲ್ಲವೆ ಮಡಿ ಎನ್ನುವಂತೆ ಸಾಧ್ಯವಾದಷ್ಟೂ ವಿಜಯಿಯಾಗಲೂ ಪ್ರಯತ್ನಿಸುತ್ತೇನೆ ಎಂದಿದ್ದಾರೆ.
ಇನ್ನು ತಾಯಿಯಾದ ನಂತರ ಟೆನಿಸ್ಗೆ ಮರಳಿರುವವರ ಪಟ್ಟಿಯಲ್ಲಿ ಸೆರೆನಾ ಮೊದಲಿಗರಲ್ಲ. ವಿಶ್ವದ ಮಾಜಿ ನಂ.1 ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾ ಕೂಡ ಮಗುವಿಗೆ ಜನ್ಮ ನೀಡಿದ ನಂತರ ಟೆನ್ನಿಸ್ಗೆ ಮರಳಿದ್ದರು. 2005ರ ಯುಎಸ್ ಓಪನ್ ಚಾಂಪಿಯನ್ಗೆ ಆಟಗಾರ್ತಿ ಕಿಮ್ ಕ್ಲಿಜ್ಸ್ಟರ್ಸ್ ಮರಳಿದ್ದರು. (ಏಜೆನ್ಸೀಸ್)