ಹೊರಬೀಳುವ ರಿಸ್ಕ್​ನಿಂದ ಪಾರಾದ ಸೆರೇನಾ

ಲಂಡನ್: ಮಾಜಿ ವಿಶ್ವ ನಂ. 1 ಆಟಗಾರ್ತಿಯರಾದ ಸೆರೇನಾ ವಿಲಿಯಮ್್ಸ, ಸಿಮೋನಾ ಹಲೆಪ್ ಮತ್ತು 8ನೇ ಶ್ರೇಯಾಂಕಿತೆ ಎಲಿನಾ ಸ್ವಿಟೋಲಿನಾ ವಿಂಬಲ್ಡನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಹಂತಕ್ಕೇರಿದ್ದಾರೆ. ಅಮೆರಿಕದ ಅನುಭವಿ ಆಟಗಾರ್ತಿ ಸೆರೇನಾ, ದೇಶಬಾಂಧವೆ ಅಲಿಸನ್ ರಿಸ್ಕೆ ವಿರುದ್ಧ ಹೊರಬೀಳುವ ಅಪಾಯದಿಂದ ಪಾರಾದರೆ, ರೊಮೇನಿಯಾ ತಾರೆ ಹಲೆಪ್ ಚೀನಾ ಆಟಗಾರ್ತಿ ಶುಯಿ ಜಾಂಗ್ ಎದುರು ಸುಲಭ ಗೆಲುವಿನೊಂದಿಗೆ ಮುನ್ನಡೆದರು. 24ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಿನ ಮೂಲಕ ಸಾರ್ವಕಾಲಿಕ ದಾಖಲೆ ಸರಿಗಟ್ಟುವ ತವಕದಲ್ಲಿರುವ 37 ವರ್ಷದ ಸೆರೇನಾ ಸೆಂಟರ್ ಕೋರ್ಟ್​ನಲ್ಲಿ ಮಂಗಳವಾರ ನಡೆದ ಕ್ವಾರ್ಟರ್​ಫೈನಲ್ ಪಂದ್ಯದಲ್ಲಿ ಅಲಿಸನ್ ರಿಸ್ಕೆ ವಿರುದ್ಧ 6-4, 4-6, 6-3 ಸೆಟ್​ಗಳಿಂದ ಜಯಿಸಿ 12ನೇ ಬಾರಿ ವಿಂಬಲ್ಡನ್ ಸೆಮಿಫೈನಲ್​ಗೇರಿದರು. ಇದು ವಿಂಬಲ್ಡನ್​ನಲ್ಲಿ ಸೆರೇನಾಗೆ 97ನೇ ಗೆಲುವಾಗಿದೆ.

ಭಾರತದ ಮಾಜಿ ಡೇವಿಸ್ ಕಪ್ ಆಟಗಾರ ಹಾಗೂ ತಂಡದ ನಾಯಕರಾಗಿದ್ದ ಆನಂದ್ ಅಮೃತ್​ರಾಜ್ ಪುತ್ರ ಸ್ಟೀಫನ್ ಅಮೃತ್​ರಾಜ್ ಸದ್ಯದಲ್ಲಿಯೇ ವಿವಾಹವಾಗಲಿರುವ 29 ವರ್ಷದ ಅಲಿಸನ್ ರಿಸ್ಕೆ 2ನೇ ಸೆಟ್ ಗೆದ್ದು ಸೆರೇನಾಗೆ ತಿರುಗೇಟು ನೀಡಲು ಪ್ರಯತ್ನಿಸಿದರು. ಆದರೆ ಗ್ರಾಂಡ್ ಸ್ಲಾಂ ಟೂರ್ನಿಯೊಂದರಲ್ಲಿ ಇದೇ ಮೊದಲ ಬಾರಿಗೆ ಅಂತಿಮ 8ರ ಘಟ್ಟದ ಪಂದ್ಯ

ದಲ್ಲಿ ಆಡಿದ ಶ್ರೇಯಾಂಕ ರಹಿತ ಆಟಗಾರ್ತಿ ರಿಸ್ಕೆ, ಸೆರೇನಾ ಅನುಭವಿ ಆಟ ದೆದುರು ಅಂತಿಮ ಸೆಟ್​ನಲ್ಲಿ ಶರಣಾದರು. ಸೆರೇನಾ ಉಪಾಂತ್ಯದಲ್ಲಿ ಜೆಕ್ ಗಣರಾಜ್ಯದ

ಬಾರ್ಬರಾ ಸ್ಟ್ರೈಕೋವಾರನ್ನು ಎದುರಿಸಲಿದ್ದಾರೆ. ಸ್ಟ್ರೈಕೋವಾ 8ರ ಘಟ್ಟದಲ್ಲಿ ಬ್ರಿಟನ್​ನ ಜೊಹಾನ್ನಾ ಕೊಂಟಾಗೆ 7-6, 6-1ರಿಂದ ಸೋಲುಣಿಸಿದರು.

ಸೆಮಿಫೈನಲ್​ಗೇರಿದ ಹಲೆಪ್

ಏಳನೇ ಶ್ರೇಯಾಂಕಿತೆ ಸಿಮೋನಾ ಹಲೆಪ್ ಕ್ವಾರ್ಟರ್​ಫೈನಲ್ ಪಂದ್ಯದಲ್ಲಿ ಅನುಭವಿ ಆಟಗಾರ್ತಿ ಶುಯಿ ಜಾಂಗ್ ವಿರುದ್ಧ 7-6, 6-1 ನೇರಸೆಟ್​ಗಳಿಂದ ಗೆಲುವು ಸಂಪಾದಿಸಿದರು. 1 ಗಂಟೆ 27 ನಿಮಿಷಗಳಲ್ಲೇ ಗೆಲುವು ಒಲಿಸಿಕೊಂಡ ಹಲೆಪ್ 2014ರ ಬಳಿಕ ಮೊದಲ ಬಾರಿ ವಿಂಬಲ್ಡನ್​ನಲ್ಲಿ ಸೆಮಿಫೈನಲ್​ಗೇರಿದರು. ಕಳೆದ ವರ್ಷ ಫ್ರೆಂಚ್ ಓಪನ್ ಜಯಿಸಿದ ಬಳಿಕ 27 ವರ್ಷದ ಹಲೆಪ್ ಮೊದಲ ಬಾರಿಗೆ ಗ್ರಾಂಡ್ ಸ್ಲಾಂ ಟೂರ್ನಿಯಲ್ಲಿ ಉಪಾಂತ್ಯಕ್ಕೇರಿದರು. ಹಲೆಪ್ ಪ್ರಶಸ್ತಿ ಸುತ್ತಿಗೇರಲು ಉಕ್ರೇನ್​ನ ಎಲಿನಾ ಸ್ವಿಟೋಲಿನಾ ಸವಾಲು ಎದುರಿಸಲಿದ್ದಾರೆ. ಸ್ವಿಟೋಲಿನಾ ಎಂಟರ ಘಟ್ಟದಲ್ಲಿ ಜೆಕ್ ಗಣರಾಜ್ಯದ ಕರೋಲಿನಾ ಮುಚೋವಾ ವಿರುದ್ಧ 7-5, 6-4ರಿಂದ ಗೆಲುವು ದಾಖಲಿಸಿದರು.

ಭಾರತದ ಸವಾಲು ಅಂತ್ಯ

ಪುರುಷರ ಡಬಲ್ಸ್ ವಿಭಾಗದ ಪ್ರಿ ಕ್ವಾರ್ಟರ್​ಫೈನಲ್​ನಲ್ಲಿ ದಿವಿಜ್ ಶರಣ್ ಜೋಡಿ ಸೋಲು ಕಾಣುವುದರೊಂದಿಗೆ ವಿಂಬಲ್ಡನ್​ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಬ್ರೆಜಿಲ್​ನ ಮಾರ್ಸೆಲೊ ಡಿಮೊಲೈನರ್ ಜತೆಗೂಡಿ ಆಡಿದ ದಿವಿಜ್, ಅಗ್ರ ಶ್ರೇಯಾಂಕಿತ ಲುಕಾಸ್ ಕಬೊಟ್ ಮತ್ತು ಮರ್ಸೆಲೊ ಮೆಲೊ ಜೋಡಿಗೆ 5-7, 7-6, 6-7, 3-6ರಿಂದ ಶರಣಾದರು.

ಸೆರೇನಾಗೆ 6.86 ಲಕ್ಷ ರೂ. ದಂಡ

ಆಲ್ ಇಂಗ್ಲೆಂಡ್ ಕ್ಲಬ್​ನ ಕೋರ್ಟ್ ಒಂದಕ್ಕೆ ರ್ಯಾಕೆಟ್​ನಿಂದ ಹಾನಿ ಮಾಡಿದ ಪ್ರಕರಣದಲ್ಲಿ 7 ಬಾರಿಯ ಚಾಂಪಿಯನ್ ಸೆರೇನಾ ವಿಲಿಯಮ್ಸ್​ಗೆ ಸಂಘಟಕರು 6.86 ಲಕ್ಷ ರೂ. ದಂಡ ವಿಧಿಸಿದ್ದಾರೆ. ಟೂರ್ನಿಗೆ ಮುನ್ನ ಅಭ್ಯಾಸದ ವೇಳೆ ಸೆರೇನಾ ಈ ರೀತಿಯ ಅಶಿಸ್ತಿನ ವರ್ತನೆ ತೋರಿದ್ದರು. ಇಂಥ ಕ್ರೀಡಾಸ್ಪೂರ್ತಿ ರಹಿತ ವರ್ತನೆಯನ್ನು ನಾವು ಸಹಿಸುವುದಿಲ್ಲ ಎಂದು ಟೂರ್ನಿಯ ವಕ್ತಾರರು ತಿಳಿಸಿದ್ದಾರೆ.

ಇಂದು ಪುರುಷರ ಸಿಂಗಲ್ಸ್ ಕ್ವಾರ್ಟರ್​ಫೈನಲ್ಸ್

=ನೊವಾಕ್ ಜೋಕೊವಿಕ್-ಡೇವಿಡ್ ಗೊಫಿನ್ =ಕೀ ನಿಶಿಕೋರಿ-ರೋಜರ್ ಫೆಡರರ್ =ಗುಯಿಡೊ ಪೆಲ್ಲಾ-ಬೌಟಿಸ್ಟಾ ಅಗುಟ್ =ರಾಫೆಲ್ ನಡಾಲ್-ಸ್ಯಾಮ್ ಕ್ವೆರ್ರಿ =ಆರಂಭ: ಸಂಜೆ 5.30 =ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್1 ಸೆಲೆಕ್ಟ್

Leave a Reply

Your email address will not be published. Required fields are marked *