ಗರ್ಭಿಣಿಯರಿಗೆ ಮೆಟ್ರೋ ಪ್ರತ್ಯೇಕ ಪ್ರವೇಶ

ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್​ಫಾಮ್ರ್ ಪ್ರವೇಶಿಸಲು ಮುಂದಿನ ದಿನಗಳಲ್ಲಿ ಗರ್ಭಿಣಿಯರು ಸ್ವಯಂಚಾಲಿತ ಟೋಕನ್ ಸಂಗ್ರಹ (ಎಎಫ್​ಸಿ) ಗೇಟ್ ಮುಖಾಂತರ ಹೋಗಬೇಕಾಗಿಲ್ಲ. ಬದಲಾಗಿ ಸಿಬ್ಬಂದಿ ಗೇಟ್ ಬಳಸಲು ಬಿಎಂಆರ್​ಸಿಎಲ್ ಅವಕಾಶ ಕಲ್ಪಿಸಲಿದೆ.

ನಿಲ್ದಾಣಗಳಲ್ಲಿ ಸ್ಮಾರ್ಟ್​ಕಾರ್ಡ್​ನಲ್ಲಿ ಪ್ರಯಾಣಿಸುವ ಪ್ರಯಾಣಿಕರಾಗಲಿ ಅಥವಾ ಟೋಕನ್ ಪಡೆದ ಪ್ರಯಾಣಿಕರಾಗಲಿ ಎಲ್ಲರೂ ಎಎಫ್​ಸಿ ಗೇಟ್ ಮುಖಾಂತರವೇ ಪ್ಲಾಟ್​ಫಾಮರ್್​ಗೆ ಪ್ರವೇಶಿಸಬೇಕು. ಸ್ಮಾರ್ಟ್​ಕಾರ್ಡ್, ಟೋಕನ್ ಒಂದನ್ನು ಇಂತಹ ಗೇಟ್ ಮೇಲೆ ಇರಿಸಿದ ತಕ್ಷಣದಲ್ಲೇ ಗೇಟ್ ಬಾಗಿಲು ತೆರೆಯುತ್ತವೆ. ವ್ಯಕ್ತಿ ಇದನ್ನು ದಾಟಿ ಹೋದ ತಕ್ಷಣದಲ್ಲೇ ಮುಚ್ಚುತ್ತದೆ. ಹಲವು ನಿಲ್ದಾಣಗಳಲ್ಲಿ ಗರ್ಭಿಣಿಯರು ಈ ಗೇಟ್ ಬಳಸಲು ಹಿಂದೇಟು ಹಾಕುತ್ತಿದ್ದಾರೆ.

ದಾಟುವ ಮೊದಲೇ ಗೇಟ್ ಮುಚ್ಚಿದರೆ ಏನಾದರೂ ಅಪಾಯ ಸಂಭವಿಸಬಹುದು ಎಂಬ ಆತಂಕ ಬಹುತೇಕ ವೃದ್ಧರಲ್ಲಿ ಹಾಗೂ ಗರ್ಭಿಣಿಯರಲ್ಲಿದೆ. ರಾಜಾಜಿನಗರ, ಟ್ರಿನಿಟಿ ಸೇರಿ ಹಲವು ನಿಲ್ದಾಣಗಳಲ್ಲಿ ಗರ್ಭಿಣಿಯರು ಈ ಬಗೆಯ ಸಮಸ್ಯೆ ಎದುರಿಸಿದ್ದಾರೆ. ಈ ವಿಷಯವನ್ನು ಅಧಿಕಾರಿಗಳಿಗೆ ಸಿಬ್ಬಂದಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿಗಮ ಮುಂದಿನ ದಿನಗಳಲ್ಲಿ ಗರ್ಭಿಣಿಯರು ಎಎಫ್​ಸಿ ಗೇಟ್ ಪಕ್ಕದಲ್ಲೇ ಇರುವ ಗಾಜಿನ ಬಾಗಿಲಿನ ಮೂಲಕ ಪ್ಲಾಟ್​ಫಾಮ್ರ್ ಪ್ರವೇಶಿಸಲು ಅನುವು ಮಾಡಲಿದೆ.

ಸ್ಕ್ಯಾನ್​ಗೂ ಭೀತಿ: ನಿಲ್ದಾಣಕ್ಕೆ ಪ್ರವೇಶಿಸುವ ಮೊದಲು ಪುರುಷ ಪ್ರಯಾಣಿಕರು ಮೆಟಲ್ ಡಿಟೆಕ್ಟರ್ (ಲೋಹ ಶೋಧಕ) ಮೂಲಕ ಹಾದು ಹೋಗಬೇಕು. ಉಳಿದಂತೆ ಮಹಿಳೆಯರನ್ನು ಮಹಿಳಾ ಸಿಬ್ಬಂದಿಯೇ ಪ್ರತ್ಯೇಕವಾದ ಕೊಠಡಿಯಲ್ಲಿ ಮೆಟಲ್ ಡಿಟೆಕ್ಟರ್ ಮೂಲಕ ಪರೀಕ್ಷಿಸುತ್ತಿದ್ದಾರೆ. ಹಲವು ಗರ್ಭಿಣಿಯರು ಈ ಕುರಿತೂ ಆತಂಕ ವ್ಯಕ್ತಪಡಿಸಿದ್ದಾರೆ.

ಸೇವಿಸುವ ಆಹಾರಕ್ಕೆ ಹಾನಿಯಿಲ್ಲ

ನಿಲ್ದಾಣಕ್ಕೆ ಪ್ರವೇಶಿಸಿದ ನಂತರ ಪ್ರತಿಯೊಬ್ಬ ಪ್ರಯಾಣಿಕರ ಬ್ಯಾಗ್​ಗಳನ್ನು ಎಕ್ಸ್​ರೇ  ಸ್ಕ್ಯಾನ್​ ಮೂಲಕ ಸಿಬ್ಬಂದಿ ಪರಿಶೀಲಿಸುತ್ತಾರೆ. ಅನೇಕರು ಊಟ, ತಿಂಡಿಯನ್ನು ಬ್ಯಾಗ್​ನಲ್ಲಿ ಒಯ್ಯುತ್ತಾರೆ. ಸ್ಕ್ಯಾನ್​ ಮಾಡಿದ ಸಂದರ್ಭದಲ್ಲಿ ಸೇವಿಸುವ ಆಹಾರಕ್ಕೆ ಸಮಸ್ಯೆಯಾಗುತ್ತದೆಯೇ ಎನ್ನುವ ಅನುಮಾನವೂ ಪ್ರಯಾಣಿಕರಲ್ಲಿದೆ. ಆದರೆ ಸ್ಕ್ಯಾನಿಂಗ್​ ಯಂತ್ರ, ಲೋಹಶೋಧಕ ಯಂತ್ರದಿಂದ ದೇಹದ ಭಾಗಗಳಿಗೆ ಅಥವಾ ಆಹಾರಕ್ಕೆ ಹಾನಿಯಾಗುವುದಿಲ್ಲ ಎಂದು ಟ್ವಿಟ್ಟರ್ ಮೂಲಕ ಸಾರ್ವಜನಿಕ ಸಂಪರ್ಕಾಧಿಕಾರಿ ಸ್ಪಷ್ಟಪಡಿಸಿದ್ದಾರೆ.