ವಿಶ್ವ ದಾಖಲೆಗೆ ಪ್ರತ್ಯೇಕ ಯೋಗ ತಾಲೀಮು

ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನದಂದು ಮತ್ತೊಂದು ವಿಶ್ವ ದಾಖಲೆ ಬರೆಯಲು ಸಾಂಸ್ಕೃತಿಕ ನಗರಿ ಮುಂದಾಗಿದ್ದು, ಭಾನುವಾರ ನಗರದ ಮೂರು ಕಡೆ ಪ್ರತ್ಯೇಕವಾಗಿ ಯೋಗ ತಾಲೀಮು ನಡೆಯಿತು.

ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವಾಗಿದ್ದು, ಅಂದು ರೇಸ್‌ಕೋರ್ಸ್ ಮೈದಾನದಲ್ಲಿ 1.50 ಲಕ್ಷಕ್ಕೂ ಹೆಚ್ಚು ಯೋಗಾಸಕ್ತರು ಸಾಮೂಹಿಕ ಯೋಗ ಪ್ರದರ್ಶಿಸಿ, ವಿಶ್ವ ದಾಖಲೆ ಮಾಡಲು ಕಂಕಣ ತೊಟ್ಟಿದ್ದಾರೆ. ಜಿಲ್ಲಾಡಳಿತ, ಪ್ರವಾಸೋದ್ಯಮ, ಆಯುಷ್ ಇಲಾಖೆ ಹಾಗೂ ವಿವಿಧ ಯೋಗ ಸಂಘಟನೆಗಳು ಮೈಸೂರು ಯೋಗ ಫೆಡರೇಷನ್ ಅಡಿಯಲ್ಲಿ ಯೋಗ ದಾಖಲೆ ನಿರ್ಮಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿವೆ.

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಎಲ್ಲೆಡೆ ಒಂದೇ ಪ್ರಕಾರದ ಯೋಗವನ್ನು ಅನುಸರಿಸಲು ಶಿಷ್ಟಾಚಾರ ರೂಪಿಸಲಾಗಿದೆ. ಆ ಪ್ರಕಾರವೇ ಅಂದು ಯೋಗಾಭ್ಯಾಸಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಪೂರ್ವಾಭ್ಯಾಸವೂ ಶಿಷ್ಟಾಚಾರದ ಪ್ರಕಾರವಾಗಿಯೇ ಜರುಗಿತು. ಮೊದಲಿಗೆ ಪ್ರಾರ್ಥನೆ, ಚಾಲನಾ ಕ್ರಿಯೆ, ಆಸನಗಳು, ಪ್ರಾಣಾಯಾಮ, ಧ್ಯಾನ ಮತ್ತು ಸಂಕಲ್ಪದೊಂದಿಗೆ ಪೂರ್ವಾಭ್ಯಾಸ ಪ್ರಕ್ರಿಯೆ ಅಂತ್ಯಗೊಂಡಿತು.
ಕಳೆದ ಭಾನುವಾರ ಕುವೆಂಪು ನಗರದ ಉದ್ಯಾನದಲ್ಲಿ ಯೋಗ ತಾಲೀಮು ನಡೆಸಿದ್ದರು. ಈ ಭಾನುವಾರ ಕುವೆಂಪು ನಗರದ ಸೌಗಂಧಿಕ ಉದ್ಯಾನ, ವಿಜಯನಗರದ ಪುಷ್ಕರಣಿ ಶಾಲೆಯ ಆವರಣ ಮತ್ತು ವಿಜಯ ನಗರದಲ್ಲಿರುವ ಚೌಡೇಶ್ವರಿ ಸಪ್ತಮಾತೃಕಾ ದೇವಸ್ಥಾನದ ಉದ್ಯಾನದಲ್ಲಿ ಪೂರ್ವಭಾವಿ ತಾಲೀಮು ನಡೆಸಲಾಯಿತು.

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಜಿಎಸ್‌ಎಸ್ ಯೋಗ, ಮೈಸೂರು ಯೋಗ ಒಕ್ಕೂಟ, ಯೋಗ ಫೌಂಡೇಶನ್, ಬಾಬಾ ರಾಮ್‌ದೇವ್ ಪತಂಜಲಿ ಯೋಗ ಸಮಿತಿಗಳ ಸಹಯೋಗದಲ್ಲಿ 45 ನಿಮಿಷ ಯೋಗ ತಾಲೀಮು ನಡೆಸಲಾಯಿತು. ಕುವೆಂಪು ನಗರದ ಸೌಗಂಧಿಕ ಉದ್ಯಾನದಲ್ಲಿ ಉದ್ಯಮಿ ವೆಂಕಟೇಶ್, ಜಿಎಸ್‌ಎಸ್ ಸಂಸ್ಥೆಯ ಶ್ರೀಹರಿ, ಶ್ರೀಯೋಗ ಶಿಕ್ಷಣ ಸಮಿತಿಯ ನಾಗಭೂಷಣ ಯೋಗ ತಾಲೀಮು ನಡೆಸಿಕೊಟ್ಟರು.

ವಿಜಯ ನಗರದ ಸಪ್ತಮಾತೃಕಾ ಚೌಡೇಶ್ವರಿ ದೇವಸ್ಥಾನ ಆವರಣದಲ್ಲಿ ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಬಿ.ಪಿ.ಮೂರ್ತಿ, ಪುಷ್ಕರಣಿ ಶಾಲಾ ಆವರಣದಲ್ಲಿ ಬಾಬಾ ರಾಮ್‌ದೇವ್ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಶಶಿಕುಮಾರ್ ಮಾರ್ಗದರ್ಶನದಲ್ಲಿ ಯೋಗ ತಾಲೀಮು ನಡೆಯಿತು. ಪೂರ್ವಾಭ್ಯಾಸ ಯೋಗ ಕುರಿತು ಮಾತನಾಡಿದ ಜಿಲ್ಲಾ ಮಹಿಳಾ ಪತಾಂಜಲಿ ಯೋಗ ಸಮಿತಿ ಮುಖ್ಯಸ್ಥೆ ಕಲಾವತಿ, ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನದಂದು 1.50 ಲಕ್ಷಕ್ಕೂ ಹೆಚ್ಚು ಯೋಗಾಸಕ್ತರು ಸಾಮೂಹಿಕವಾಗಿ ಯೋಗ ಪ್ರದರ್ಶಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಪಣ ತೊಟ್ಟಿದ್ದು, ಸಾರ್ವಜನಿಕರು ಹೆಚ್ಚಾಗಿ ಭಾಗವಹಿಸುವಂತೆ ಮಾಡಲು ಜಾಗೃತಿ ಮೂಡಿಸುವಲ್ಲಿ ಯೋಗಬಂಧುಗಳು ಪ್ರಯತ್ನಿಸಬೇಕೆಂದು ಮನವಿ ಮಾಡಿದರು.

ಪಾಲಿಕೆ ಸದಸ್ಯ ಸುಬ್ಬಯ್ಯ, ಪತಂಜಲಿ ಯೋಗ ಸಮಿತಿ ಮುಖ್ಯಸ್ಥ ದೇವಯ್ಯ, ಉದ್ಯಮಿ ಎಸ್.ಆರ್. ರಘುರಾಂ, ಪತಂಜಲಿ ಮುಖ್ಯಸ್ಥೆ ರತ್ನಾ ರಾವ್, ಜಿಎಸ್‌ಎಸ್ ಯೋಗ ಕೇಂದ್ರದ ಅಂತಾರಾಷ್ಟ್ರೀಯ ಯೋಗ ತರಬೇತುದಾರ ರಂಗನಾಥ್, ರೂಪಾ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *