ಉತ್ತರಕ್ಕೆ ಅಭಿವೃದ್ಧಿಯ ಸಾಂತ್ವನ

ಬೆಂಗಳೂರು: ಪ್ರತ್ಯೇಕ ರಾಜ್ಯದ ಹೆಸರಿನಲ್ಲಿ ಉತ್ತರ ಕರ್ನಾಟಕದಲ್ಲಿ ಎದ್ದಿರುವ ಆಕ್ರೋಶವನ್ನು ತಣ್ಣಗಾಗಿಸುವ ಪ್ರಯತ್ನವಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆಗಳ ಉತ್ತರ ನೀಡಿದ್ದಾರೆ. ಓರ್ವ ಉಪಲೋಕಾಯುಕ್ತ, ಮೂವರು ಮಾಹಿತಿ ಆಯುಕ್ತರ ಜತೆಯಲ್ಲೇ ಕೃಷ್ಣ ಜಲಭಾಗ್ಯ ನಿಗಮ ಕಚೇರಿಯನ್ನು ಬೆಂಗಳೂರಿ ನಿಂದ ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸುವ ಸೂತ್ರ ಪ್ರಕಟಿಸಿದ್ದಾರೆ. ಈ ಭರವಸೆಗೆ ಸ್ಪಂದಿಸಿರುವ ಪ್ರತ್ಯೇಕ ರಾಜ್ಯ ಹೋರಾಟ ಗಾರರು ಸರ್ಕಾರ ಮಾತು ತಪ್ಪಿದಲ್ಲಿ ನ.1ರಂದು ಪ್ರತ್ಯೇಕ ರಾಜ್ಯದ ಧ್ವಜ ಹಾರಿಸುವ ಎಚ್ಚರಿಕೆ ರವಾನಿಸಿದ್ದಾರೆ.

ಉತ್ತರ ಕರ್ನಾಟಕದ ಬಗ್ಗೆ ತಾವಾಡಿದ ಮಾತಿನಿಂದ ಸೃಷ್ಟಿಯಾಗಿರುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಗಳವಾರ ವಿಧಾನಸೌಧದಲ್ಲಿ ಕರೆದಿದ್ದ ಉತ್ತರ ಕರ್ನಾಟಕದ ನಿಯೋಗದೊಂದಿಗಿನ ಸಭೆಯಲ್ಲಿ ಈ ಬೆಳವಣಿಗೆ ನಡೆಯಿತು.

ಹಂಗಿನಲ್ಲಿ ಸರ್ಕಾರ: ‘ಮೈಸೂರು ಪ್ರಾಂತ್ಯಕ್ಕಿಂತ ಉತ್ತರ ಕರ್ನಾಟಕ ಭಾಗದಲ್ಲಿ ನನಗೆ ಪ್ರೀತಿ ಹೆಚ್ಚು ಸಿಕ್ಕಿದೆ. ನಮ್ಮ ಪಕ್ಷಕ್ಕೆ ಜನ ಮತ ಕೊಡಲಿಲ್ಲ ಎಂದು ಉತ್ತರ ಕರ್ನಾಟಕದ ಬಗ್ಗೆ ನನಗೇನು ಬೇಸರವಿಲ್ಲ. ಸಿಎಂ ಆಗಿ ಎರಡು ತಿಂಗಳಷ್ಟೇ ಆಗಿದೆ.

ಮತ್ತೊಬ್ಬರ ಹಂಗಿನಲ್ಲಿ ಅಧಿಕಾರ ನಡೆಸುವಾಗ ಸಮಯ ಬೇಕು. ಮೊದಲಿಂದಲೂ ನಾನು ಇದನ್ನು ಹೇಳುತ್ತಿದ್ದೇನೆ. ರಾಜಕೀಯಕ್ಕಾಗಿ ಬಿಜೆಪಿ ಸ್ನೇಹಿತರು ನನ್ನನ್ನು ಉತ್ತರ ಕರ್ನಾಟಕ ವಿರೋಧಿ ಅಂತ ಬಿಂಬಿಸಿದ್ದಾರೆ’ ಎಂದು ಹೇಳಿದರು.

ರೈತರ ಸಾಲಮನ್ನಾ ಬಗ್ಗೆ ಯಾರೂ ಒಳ್ಳೆ ಮಾತನಾಡುತ್ತಿಲ್ಲ, ಇದನ್ನು ಕಂಡು ನನಗೆ ಬಹಳ ನೋವಾಗಿದೆ. ರೈತರನ್ನು ನಾನು ಎಲ್ಲಿಯೂ ಬೈದಿಲ್ಲ. ಚುನಾವಣೆ ವೇಳೆ ಏಕೆ ನನ್ನ ನೆನಪಾಗಲಿಲ್ಲ ನಿಮಗೆ ಎಂದು ರೈತ ಮುಖಂಡರಲ್ಲಿ ಕೇಳಿದ್ದೇನೆ ಅಷ್ಟೇ. ಕೊಪ್ಪಳ ರೈತರ ಬಗ್ಗೆ ಬೈದಿದ್ದಾರೆ ಅನ್ನೋದು ಇದ್ದರೆ ವಿಡಿಯೋ ತೆಗೆದು ನೋಡಿ ಎಂದರು.

ಸಭೆಯಲ್ಲಿ ಮಾತನಾಡಿದ ಪ್ರತ್ಯೇಕ ಉ.ಕ. ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ್ ಕೋತಂಬ್ರಿ, ನಂಜುಂಡಪ್ಪ ವರದಿ ಸಂಪೂರ್ಣ ವರದಿ ಜಾರಿ ಆಗದೇ ಅನ್ಯಾಯವಾಗುತ್ತಿದೆ. ಮಹದಾಯಿ ವಿಚಾರದಲ್ಲಿ ನಮಗೂ ಅನ್ಯಾಯವಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ. ಕೈಗಾರಿಕೆ ಸ್ಥಾಪನೆಯಲ್ಲಿ ಉತ್ತರ ಕರ್ನಾಟಕ ಹಿಂದುಳಿದಿದೆ. ಮಾಹಿತಿ ಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಯಾಗಿಲ್ಲ ಎಂದು ವಿವರಿಸಿದರು.

ಪ್ರತ್ಯೇಕ ಉ.ಕ. ಹೋರಾಟ ಸಮಿತಿ ಗೌರವಾಧ್ಯಕ್ಷ ಬಸವರಾಜ ದಿಂಡೂರು ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗ ಲೋ ಬಿಪಿಯಿಂದಾಗಿ ಕುಸಿದರು. ತಕ್ಷಣ ಅವರಿಗೆ ನೀರು ಕುಡಿಸಿ ವಿಶ್ರಾಂತಿಗೆ ಕಳುಹಿಸಲಾಯಿತು.

ಬಿಜೆಪಿ ರಾಜಕೀಯಕ್ಕೆ ಹೆದರಲ್ಲ

ಸ್ವಾಮೀಜಿಯವರನ್ನು ಕೂರಿಸಿಕೊಂಡು ಯಡಿಯೂರಪ್ಪ ಪ್ರತಿಭಟಿಸುತ್ತಿದ್ದಾರೆ. ಅದಕ್ಕೆ ನಾನು ಹೆದರುವವನಲ್ಲ. ಹದಿನೈದು ದಿನ ಕಳೆಯಲಿ. ನಾನು ಉತ್ತರ ಕರ್ನಾಟಕಕ್ಕೇ ಬರುತ್ತೇನೆ. ಆ ಭಾಗದ ಸಂಪೂರ್ಣ ಜವಾಬ್ದಾರಿ ನನ್ನದು ಎಂದು ಸಿಎಂ ನಿಯೋಗಕ್ಕೆ ಭರವಸೆ ನೀಡಿದರು. ಬಿಜೆಪಿಯವರಿಗೆ ಸಾಲಮನ್ನಾ ಕ್ರಮವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಉತ್ತರ ಕರ್ನಾಟಕಕ್ಕೆ ನಾನು ಅನ್ಯಾಯ ಮಾಡಿದೆ ಎಂದು ಹೇಳುತ್ತಿದ್ದಾರೆ. 15 ದಿನ ಮಾತ್ರ ಈ ಪ್ರತ್ಯೇಕತೆ ಕೂಗು ಆಮೇಲೆ ಯಾವ ಮಾತೂ ಇರಲ್ಲ. ಪ್ರತ್ಯೇಕ ಉತ್ತರ ಕರ್ನಾಟಕ ಎಂದು ಬಿಜೆಪಿ ರಾಜಕೀಯ ಮಾಡುತ್ತಿದೆ. ಲೋಕಸಭೆ ಚುನಾವಣೆವರೆಗೂ ಬಿಜೆಪಿ ಈ ರೀತಿ ಹೇಳಿಕೊಂಡು ಹೋಗಲಿದೆ. ಅವರ ತಂತ್ರಕ್ಕೆ ನಾನು ಹೆದರುವವನಲ್ಲ ಎಂದರು. ನಾವು ಐಐಟಿ ತಂದೆವು ಎಂದು ಬಿಜೆಪಿಯವರು ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೆ ಅಲ್ಲಿ ಓದುವವರು ಉತ್ತರ ಭಾರತೀಯರೇ, ಉತ್ತರ ಕರ್ನಾಟಕದವರೇ ಎಂಬುದನ್ನು ಜನ ನೋಡಬೇಕಾಗುತ್ತದೆ. ಅವರು ನಮ್ಮ ನೆಲದಲ್ಲಿ, ನಮ್ಮ ಹಣದಲ್ಲಿ ಮೆಡಿಕಲ್ ಕಾಲೇಜು ಮಾಡಿದರೆ ಅದರ ಲಾಭವಾಗುವುದು ಬೇರೆ ರಾಜ್ಯದವರಿಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇವರಿಗೆ ಬಿಡುತ್ತೇನೆ…

ಉತ್ತರ ಕರ್ನಾಟಕಕ್ಕೆ ಅದು ಮಾಡಿದೆ ಇದು ಮಾಡಿದೆ ಎಂದು ಯಡಿಯೂರಪ್ಪ ಭಾಷಣ ಮಾಡುತ್ತಾರೆ. ನಾನು ರೈತರ ಸಭೆ ಕರೆದಾಗ ಯಡಿಯೂರಪ್ಪ ಬರಲೇ ಇಲ್ಲ. ಎಲ್ಲವನ್ನೂ ದೇವರಿಗೆ ಬಿಡುತ್ತೇನೆ ಎಂದು ಸಿಎಂ ಹೇಳಿದರು.

ಬೆಳಗಾವಿ 2ನೇ ರಾಜಧಾನಿ

ಬೆಂಗಳೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆಯ ಒಡಕಿನ ಧ್ವನಿ ಅಡಗಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಘೋಷಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ‘2006ರಲ್ಲೇ ನಾನು ಎರಡನೇ ರಾಜಧಾನಿ ಘೋಷಣೆ ಮಾಡಿದ್ದೆ. ಇದೀಗ ಮತ್ತೊಮ್ಮೆ ಎಲ್ಲರೊಂದಿಗೆ ರ್ಚಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಸೂಚ್ಯವಾಗಿ ಹೇಳಿದರು. ಜತೆಗೆ ಸರ್ಕಾರದ ಹಲವು ಇಲಾಖೆಗಳನ್ನು ಸ್ಥಳಾಂತರಿಸುವ ಚಿಂತನೆ ಇದೆ. ವರ್ಷದ 365 ದಿನಗಳ ಕಾಲ ಸುವರ್ಣ ಸೌಧ ಕಾರ್ಯನಿರ್ವಹಿಸುವಂತಾಗಲು ಕ್ರಮಕೈಗೊಳ್ಳುತ್ತೇನೆ ಎಂದು ಹೇಳಿದರು.

ಕಲಬುರಗಿಯಲ್ಲಿ ಸಂಪುಟ ಇಲ್ಲ

ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸುವ ಗೋಜಿಗೆ ನಾನು ಹೋಗುವುದಿಲ್ಲ. ಹಿಂದೆ ಬಿ.ಎಸ್.ಯಡಿಯೂರಪ್ಪನವರು ಅಲ್ಲಿ ಸಂಪುಟ ಸಭೆ ನಡೆಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಹೀಗಾಗಿ ವಾಸ್ತವಿಕವಾಗಿ ಹೈದರಾಬಾದ್-ಕರ್ನಾಟಕ ಅಭಿವೃದ್ಧಿಗೆ ಏನು ಮಾಡಬೇಕೋ ಅದನ್ನು ಮಾಡಲು ಬದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಉತ್ತರಕ್ಕಾಗಿ ಮಠಾಧೀಶರ ಒಗ್ಗಟ್ಟು

ಬೆಳಗಾವಿ: ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆಗ್ರಹಿಸಿ ಹೋರಾಟ ಕ್ಕಿಳಿದಿರುವ ಮಠಾಧೀಶರು ಮಂಗಳವಾರ ಬೆಳಗಾವಿಯಲ್ಲಿ ಒಗ್ಗಟ್ಟು ಪ್ರದರ್ಶಿಸಿದರು. ವಿವಿಧ ಮಠಗಳ 65 ಸ್ವಾಮೀಜಿಗಳು ಹೋರಾಟದಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸುವ ಜತೆಗೆ ನಮ್ಮ ಈ ಹೋರಾಟ ಅಭಿವೃದ್ಧಿ ಗಾಗಿಯೇ ಹೊರತು ಪ್ರತ್ಯೇಕ ರಾಜ್ಯಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.

ಭರವಸೆಗಳೇನು?

ಒಬ್ಬರು ಉಪಲೋಕಾಯುಕ್ತರು ಬೆಳಗಾವಿಯಲ್ಲಿ ಕಾರ್ಯನಿರ್ವಹಿ ಸುವಂತೆ ಮತ್ತು ಮೂವರು ಮಾಹಿತಿ ಆಯುಕ್ತರು ಬೆಳಗಾವಿ, ಕಲಬುರಗಿಯಿಂದ ಕರ್ತವ್ಯ ನಿಭಾಯಿಸುವಂತೆ ಕ್ರಮ ಕೈಗೊಳ್ಳಲಾಗುವುದು. ಕೃಷ್ಣ ಭಾಗ್ಯ ಜಲನಿಗಮ ಕಚೇರಿಯನ್ನು ಬೆಂಗಳೂರಿನಿಂದ ಸ್ಥಳಾಂತರಿಸುವ ಆಲೋಚನೆ ಇದೆ ಎಂದು ಸಿಎಂ ಹೇಳಿದರು. ‘ಸುವರ್ಣಸೌಧ ಪ್ರತಿದಿನ ಕ್ರಿಯಾಶೀಲವಾಗಿರಲು ಏನು ಮಾಡಬೇಕೆಂಬ ಬಗ್ಗೆ ನೀಲಿನಕ್ಷೆ ಸಿದ್ಧವಾಗಿದೆ. ಶೀಘ್ರವೇ ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡಕ್ಕೆ ತೆರಳಿ ಎರಡು ದಿನ ವಾಸ್ತವ್ಯ ಹೂಡುತ್ತೇನೆ. ಅಲ್ಲೇ ಸಭೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ. ನಾನೆಂದೂ ಉತ್ತರ ಕರ್ನಾಟಕ- ದಕ್ಷಿಣ ಕರ್ನಾಟಕ, ಕರಾವಳಿ ಕರ್ನಾಟಕ ಎಂದು ಪ್ರತ್ಯೇಕ ಪ್ರತ್ಯೇಕವಾಗಿ ಕನಸು ಮನಸ್ಸಿನಲ್ಲೂ ಊಹಿಸಿಲ್ಲ ಎಂದು ಸಿಎಂ ಹೇಳಿದರು.

ಅಖಂಡ ಕರ್ನಾಟಕದ ಅಚಲ ವಿಶ್ವಾಸ ನನ್ನದು’ ಎಂದರು. ‘ನಾನು ಬಜೆಟ್​ನಲ್ಲಿ ಹಾಸನ, ಮಂಡ್ಯ ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ 500 ಕೋಟಿ ರೂ. ಮಾತ್ರ ಕೊಟ್ಟಿದ್ದೇನೆ. ಅದನ್ನೇ ಅನ್ಯಾಯವಾಗಿದೆ ಎಂದು ಹೇಳುತ್ತಿದ್ದಾರೆ. ಯಾರು ಏನೇ ಹೇಳಿದರೂ ಕೇಳಬೇಡಿ. ಉತ್ತರ ಕರ್ನಾಟಕ ಭಾಗದವರು ನನ್ನನ್ನು ನೇರವಾಗಿ ಭೇಟಿಯಾಗಬಹುದು. ಆ ಭಾಗದ ಅಭಿವೃದ್ಧಿ ಬಗ್ಗೆ ನನ್ನದೇ ಆದ ಕನಸು ಇವೆ. ನನ್ನ ಹಾಗೂ ಉತ್ತರ ಕರ್ನಾಟಕದ ಜನರ ನಡುವೆ ಕಂದಕ ಉಂಟುಮಾಡುವ ಉದ್ದೇಶ ಈಡೇರಲ್ಲ’ ಎಂದರು.