ಪ್ರತ್ಯೇಕ ರಾಜ್ಯ ಪರಿಹಾರವಲ್ಲ

ರಾಯಚೂರು: ಅಭಿವೃದ್ಧಿ ವಿಷಯದಲ್ಲಿ ಸಾಕಷ್ಟು ತಾರತಮ್ಯ ನಡೆದಿದೆ. ಹಾಗಂತ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆ ಅದಕ್ಕೆ ಪರಿಹಾರವಲ್ಲ. ಅಭಿವೃದ್ಧಿ ವಿಷಯಕ್ಕಾಗಿ ನಡೆಯುವ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.

ನಗರದ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಖೇಣೇದ್ ಮುರಿಗೆಪ್ಪ ಪ್ರತಿಷ್ಠಾನದಿಂದ ನೀಡುವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಪ್ರತ್ಯೇಕ ಎಂಬುದು ಎಲ್ಲದಕ್ಕೂ ಪರಿಹಾರವಲ್ಲ. ಅಖಂಡ ಕರ್ನಾಟಕದ ಪರಿಕಲ್ಪನೆ ನಮ್ಮ ಜನಪ್ರತಿನಿಧಿಗಳಲ್ಲಿ ಬರಬೇಕಿದೆ ಎಂದರು.

ಹೊಸ ರಾಜ್ಯದ ಜನ ಸುಖವಾಗಿಲ್ಲ: ಪ್ರತ್ಯೇಕ ಕೂಗಿನೊಂದಿಗೆ ಅಸ್ತಿತ್ವಕ್ಕೆ ಬಂದ ತೆಲಂಗಾಣ, ಛತ್ತೀಸ್​ಘಡ ಮುಂತಾದ ಹೊಸ ರಾಜ್ಯದ ಜನ ಸುಖವಾಗಿಲ್ಲ. ಆದರೆ, ಅಲ್ಲಿನ ರಾಜಕಾರಣಿಗಳು ಮಾತ್ರ ಸುಖವಾಗಿದ್ದಾರೆ. ಈ ಬೆಳವಣಿಗೆಗಳು ನಮಗೆ ಪಾಠವಾಗಬೇಕಾಗಿದೆ. ಕೆಲ ಕಚೇರಿಗಳನ್ನು ಉತ್ತರ ಕರ್ನಾಟಕ ಭಾಗಕ್ಕೆ ಸ್ಥಳಾಂತರ ಮಾಡುವುದರಿಂದ ಪ್ರಯೋಜನವಿಲ್ಲ. ಅದರ ಬದಲು ನಾಲ್ಕು ಕಂದಾಯ ವಿಭಾಗಗಳಲ್ಲಿ ಪೂರ್ಣ ಪ್ರಮಾಣದ ಸಚಿವಾಲಯ ಪ್ರಾರಂಭಿಸಿ, ಅಲ್ಲಿಂದ ಆಡಳಿತ ನಡೆಯುವಂತೆ ಮಾಡಬೇಕಿದೆ. ವಿಕೇಂದ್ರೀಕರಣ ಆಡಳಿತ ಜನರಿಗೆ ಹತ್ತಿರವಾಗುತ್ತದೆ ಎಂದು ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ಪ್ರಾದೇಶಿಕ ಪಕ್ಷಗಳಿಂದ ಅಭಿವೃದ್ಧಿ ಸಾಧ್ಯ ಎನ್ನುವುದು ತಪ್ಪು ಕಲ್ಪನೆ. ಪ್ರಾದೇಶಿಕ ಪಕ್ಷಗಳಿರುವ ನಮ್ಮ ಪಕ್ಕದ ರಾಜ್ಯಗಳಲ್ಲಿ ಏನಾಗುತ್ತಿದೆ? ಪ್ರಾದೇಶಿಕ ಪ್ರಜ್ಞೆಯಿಲ್ಲದ ರಾಷ್ಟ್ರೀಯ ಪಕ್ಷವಾಗಲಿ, ಪ್ರಾದೇಶಿಕ ಪಕ್ಷಗಳಾಗಲಿ ಅಧಿಕಾರಕ್ಕೆ ಬಂದಲ್ಲಿ ಸಮಾನತೆ ಸಾಧಿಸಲು ಸಾಧ್ಯವಿಲ್ಲ.

| ಪ್ರೊ.ಬರಗೂರು ರಾಮಚಂದ್ರಪ್ಪ ಹಿರಿಯ ಸಾಹಿತಿ

Leave a Reply

Your email address will not be published. Required fields are marked *