ಬೇಡಿಕೆಗಳ ಈಡೇರಿಕೆಗಾಗಿ ಪ್ರತ್ಯೇಕ ಪ್ರತಿಭಟನೆ

ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ, ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದಿಂದ ಸೋಮವಾರ ಪ್ರತ್ಯೇಕ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ನಾಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾದನಹಳ್ಳಿಯ ಏಕಲವ್ಯ ನಗರದ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಆಹೋರಾತ್ರಿ ಪ್ರತಿಭಟನೆ ಆರಂಭಿಸಿದರು.

ಹೆಬ್ಬಾಳು ಕೆರೆ ಬಳಿ ನೆಲೆಸಿದ್ದ ಅಲೆಮಾರಿಗಳನ್ನು ಕೆರೆ ಅಭಿವೃದ್ಧಿ ಹೆಸರಿನಲ್ಲಿ 18 ವರ್ಷಗಳ ಹಿಂದೆ ಶಾದನಹಳ್ಳಿಗೆ ಸ್ಥಳಾಂತರಿಸಲಾಯಿತು. ಈ ಪೈಕಿ ಕೆಲವು ಜನರಿಗೆ ನರ್ಮ್ ಯೋಜನೆಯಡಿ ಶಾದನಹಳ್ಳಿಯ ಇಂದಿರಾಗಾಂಧಿ ಬಡಾವಣೆಯಲ್ಲಿ ಗುಂಪು ಮನೆ ನಿರ್ಮಿಸಿಕೊಡಲಾಗಿದೆ. ಆದರೆ, ಉಳಿದ ಜನರಿಗೆ ಮನೆ ದೊರೆತಿಲ್ಲ. ಹೀಗಾಗಿ ಇರುವ ಜಾಗದಲ್ಲಿಯೇ ಅವರಿಗೆ ಹಕ್ಕು ಪತ್ರ ನೀಡಬೇಕೆಂದು ದಸಂಸ ಮುಖಂಡ ಚೋರನಹಳ್ಳಿ ಶಿವಣ್ಣ ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಪೂರ್ಣಿಮಾ, ನಿಮ್ಮ ಬೇಡಿಕೆ ಕುರಿತು ಜಿಲ್ಲಾಧಿಕಾರಿಗಮನ ಸೆಳೆಯಲಾಗುವುದು. ದಯವಿಟ್ಟು ಪ್ರತಿಭಟನೆ ಹಿಂಪಡೆಯಬೇಕೆಂದು ಮನವಿ ಮಾಡಿದರು. ಆದರೆ, ಹಕ್ಕುಪತ್ರ ನೀಡುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ದಸಂಸ ಮುಖಂಡರು ಎಚ್ಚರಿಸಿದ್ದಾರೆ.

ತಹಸೀಲ್ದಾರ್‌ರನ್ನು ವರ್ಗಾಯಿಸಿ: ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ಇತ್ತೀಚೆಗೆ ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಜಿ.ಬಿ.ಮಂಜುನಾಥ್ ನಂಜನಗೂಡು ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿದ್ದ ವೇಳೆ ತಹಸೀಲ್ದಾರ್ ಕೆ.ಮಹೇಶ್ ರೈತರ ಸಮಸ್ಯೆಗಳನ್ನು ಆಲಿಸದೆ ಮಂಜುನಾಥ್ ಅವರೊಂದಿಗೆ ಅನುಚಿತವಾಗಿ ವರ್ತಿಸಿ ತನ್ನ ಅಧಿಕಾರ ಬಳಸಿ ಅವರನ್ನು ಜೈಲಿಗೆ ಕಳುಹಿಸಿದರು.ಅಧಿಕಾರ ದುರುಪಯೋಗ ಪಡಿಸಿಕೊಂಡು ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ತಹಸೀಲ್ದಾರ್ ಮಹೇಶ್ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಿ ಅವರನ್ನು ವರ್ಗಾವಣೆ ಮಾಡಬೇಕು. ರೈತ ಮುಖಂಡ ಮಂಜುನಾಥ್ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ರೈತ ಮುಖಂಡರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ರೈತ ಮುಖಂಡರು ಮನವಿ ಪತ್ರ ಸಲ್ಲಿಸಿದರು.

Leave a Reply

Your email address will not be published. Required fields are marked *