ದ.ಕ. ಅಭಿವೃದ್ಧಿಗೆ ಬೆಂಗಳೂರಲ್ಲಿ ಪ್ರತ್ಯೇಕ ಸಭೆ

ವಿಜಯವಾಣಿ ಸುದ್ದಿಜಾಲ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿ ಶೀಘ್ರವೇ ಬೆಂಗಳೂರಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಪ್ರತ್ಯೇಕ ಸಭೆ ಕರೆಯಲಾಗುವುದು. ಮಂಗಳೂರು ನಗರವನ್ನು ರಾಜ್ಯದ ಪ್ರಮುಖ ಆರ್ಥಿಕ ನಗರವಾಗಿ ಬೆಳೆಸುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮರಸ್ವಾಮಿ ಹೇಳಿದ್ದಾರೆ.
ಶುಕ್ರವಾರ ದ.ಕ.ಜಿಲ್ಲಾ ಪಂಚಾಯಿತಿಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಯಿಂದಾಗಿ ದ.ಕ. ಜಿಲ್ಲೆಯ ರಸ್ತೆ, ಸೇತುವೆ ಸಹಿತ ಮೂಲಸೌಕರ್ಯಗಳಿಗೆ 213 ಕೋಟಿ ರೂ. ನಷ್ಟವಾಗಿದೆ. ಈಗಾಗಲೇ ತುರ್ತು ಪರಿಹಾರ ನೀಡಲಾಗಿದ್ದು, ಜಿಲ್ಲಾಧಿಕಾರಿ ಖಾತೆಯಲ್ಲಿ ಇನ್ನೂ 25 ಕೋಟಿ ರೂ. ಇದೆ. ಪ್ರಾಕೃತಿಕ ವಿಕೋಪ ಪರಿಹಾರಕ್ಕೆ ಈ ಹಣ ಬಳಸಲು ಜಿಲ್ಲಾಧಿಕಾರಿ ಅವರಿಗೆ ಪೂರ್ಣ ಅಧಿಕಾರ ನೀಡಲಾಗಿದೆ ಎಂದರು.
ಉಡುಪಿ ಉಸ್ತುವಾರಿ ಸಚಿವೆ ಜಯಮಾಲಾ, ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್‌ಕುಮಾರ್ ಕಟೀಲ್, ಶಾಸಕರಾದ ಎಸ್.ಅಂಗಾರ, ಡಾ.ವೈ.ಭರತ್ ಶೆಟ್ಟಿ, ಡಿ.ವೇದವ್ಯಾಸ ಕಾಮತ್, ಸಂಜೀವ ಮಠಂದೂರು, ಹರೀಶ್ ಪೂಂಜ, ರಾಜೇಶ್ ನಾಕ್, ಉಮಾನಾಥ ಎ.ಕೋಟ್ಯಾನ್, ವಿಧಾನಪರಿಷತ್ ಸದಸ್ಯರಾದ ಭೋಜೇಗೌಡ, ಬಿ.ಎಂ.ಫಾರೂಕ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಡಾ.ಬಿ.ಆರ್.ರವಿಕಾಂತೇ ಗೌಡ ಸಭೆಯಲ್ಲಿದ್ದರು.

ಎಂಡೋ ಸಮಗ್ರ ವರದಿ: ಎಂಡೋ ಸಲ್ಫಾನ್ ಪೀಡಿತರ ಬಗ್ಗೆ ಜನಪ್ರತಿನಿಧಿಗಳು ಸಭೆಯಲ್ಲಿ ಗಮನ ಸಳೆದಿದ್ದಾರೆ. ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಜಿಲ್ಲಾಧಿಕಾರಿ ಅವರಿಗೆ ಸೂಚಿಸಲಾಗಿದೆ. ಎಂಡೋ ಪೀಡಿತರ ಮಕ್ಕಳ ಭವಿಷ್ಯವನ್ನು ಗಮನದಲ್ಲಿರಿಸಿ ಅವರಿಗೆ ಹೊಸ ಬದುಕು ನೀಡಲು ಶಾಶ್ವತ ಕಾರ್ಯಕ್ರಮ ರೂಪಿಸಲಾಗುವುದು. ಮೊದಲ ಆದ್ಯತೆಯಾಗಿ ಸರ್ಕಾರ ಈ ಕಾರ್ಯ ಮಾಡಲಿದೆ ಎಂದು ಸಿಎಂ ಹೇಳಿದರು.

ಸುಪ್ರೀಂ ಕೋರ್ಟ್‌ಗೆ ಮನವರಿಕೆ: ಕರಾವಳಿ ಜಿಲ್ಲೆಯಲ್ಲಿ ಡೀಮ್ಡ್ ಫಾರೆಸ್ಟ್ ಹಾಗೂ ಭೂ ಪರಿವರ್ತನೆಯ ತೊಡಕುಗಳ ಬಗ್ಗೆ ಶಾಸಕರು ಗಮನ ಸೆಳೆದಿದ್ದಾರೆ. 94ಸಿಯಡಿ ಯಾವುದೇ ಅರ್ಜಿಯನ್ನು ತಿರಸ್ಕರಿಸಿದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅರಣ್ಯ ಕಾಯ್ದೆಗೆ ಮಾರ್ಪಾಡು ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸುಪ್ರೀಂ ಕೋರ್ಟ್‌ಗೂ ಮನವರಿಕೆ ಮಾಡಲಾಗುವುದು ಎಂದು ಎಚ್‌ಡಿಕೆ ತಿಳಿಸಿದರು.

ಮತ್ತೆ ಮಂಗಳೂರಲ್ಲಿ ಸಭೆ: ಮೀನುಗಾರಿಕೆ ಸಂದರ್ಭ ಉಂಟಾದ ದುರಂತಗಳಿಗೆ ಪರಿಹಾರ ನೀಡಲು ಆದ್ಯತೆ ನೀಡಲಾಗಿದೆ. ಕಡಲು ಕೊರೆತಕ್ಕೆ ಶಾಶ್ವತ ಪರಿಹಾರ ರೂಪಿಸಬೇಕಾಗಿದೆ. ಕೇವಲ ಹಣ ಮಾಡುವ ಯೋಜನೆ ಆಗಬಾರದು ಮುಂದಿನ 15 ದಿನದೊಳಗೆ ಮತ್ತೆ ಮಂಗಳೂರಿಗೆ ಬಂದು ಸಭೆ ನಡೆಸುವುದಾಗಿ ಕುಮಾರಸ್ವಾಮಿ ತಿಳಿಸಿದರು.

ರಸ್ತೆ ದುರಸ್ತಿ, ಪಶ್ಚಿಮಘಟ್ಟ ರಕ್ಷಣೆ: ಮಳೆಯಿಂದಾಗಿ ಮಂಗಳೂರಿಗೆ ಬರುವ ಪ್ರಮುಖ ರಸ್ತೆಗಳು ಸಂಪರ್ಕ ಕಡಿದುಕೊಂಡಿವೆ. ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ ನಡೆಸಲಾಗುವುದು. ಕಸ್ತೂರಿ ರಂಗನ್ ವರದಿ ಜಾರಿಯಿಂದ ಆಗುವ ತೊಂದರೆಗಳ ಬಗ್ಗೆ ಶಾಸಕರು ಗಮನ ಸೆಳೆದಿದ್ದಾರೆ. ಯಾವ ಕಾರಣದಿಂದ ಭೂ ಕುಸಿತವಾಗಿದೆ ಎನ್ನುವ ವಾಸ್ತವ ಅರಿಯಬೇಕಾಗಿದೆ. ಈ ಬಗ್ಗೆ ಹೈದರಾಬಾದ್‌ನ ತಜ್ಞರ ತಂಡವೊಂದು ವರದಿ ನೀಡಲಿದೆ. ಅದನ್ನು ಪರಿಶೀಲಿಸಿ ಪಶ್ಚಿಮ ಘಟ್ಟ ಉಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.

ಎತ್ತಿನಹೊಳೆ ಮರೆತಿಲ್ಲ:  ಎತ್ತಿನಹೊಳೆ ಯೋಜನೆಯ ಹೆಸರಿನಲ್ಲಿ ಅಕ್ರಮ ನಡೆದಿದೆ ಎಂದು ಈ ಹಿಂದೆ ಹೇಳಿದ್ದೆ. 4 ವರ್ಷವಾದರೂ ಕೋಲಾರಕ್ಕೆ ನೀರು ಹರಿದಿಲ್ಲ. ನಾನು ಅಕ್ರಮಗಳ ಜತೆ ರಾಜಿಯಾಗುವುದಿಲ್ಲ. ಸ್ವಲ್ಪ ಸಮಯ ನೀಡಿ. ಜನತೆಯ ಸಮಸ್ಯೆ ಬಗೆಹರಿಸಲು ಮೊದಲು ಅದ್ಯತೆ ನೀಡಿದ್ದೇನೆ. ಯೋಜನೆಯ ಹೆಸರಿನಲ್ಲಿ ನಡೆದ ಅಕ್ರಮಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದರು ಮುಖ್ಯಮಂತ್ರಿ.

ಮುಖ್ಯಮಂತ್ರಿ ನೀಡಿದ ಭರವಸೆ
* ದ.ಕ.ಜಿಲ್ಲೆಯಲ್ಲಿ ಸುಮಾರು 19 ಸಾವಿರ ಹೆಕ್ಟೇರ್ ಅಡಕೆ ಕೊಳೆರೋಗದಿಂದ ಹಾನಿಯಾಗಿದೆ. ರಬ್ಬರ್ ಮತ್ತು ಕರಿಮೆಣಸು ಬೆಳೆಗೂ ಹಾನಿಯಾಗಿದೆ. ಕೃಷಿಕರ ನಿರೀಕ್ಷೆಗೆ ತಕ್ಕ ಪರಿಹಾರ ನೀಡಲು ಪ್ರಯತ್ನಿಸಲಾಗುವುದು.
* ಬಡವರಿಗೆ ಮನೆ ಕಟ್ಟಲು ಅನುಕೂಲವಾಗುವಂತೆ ಮರಳಿನ ಸಮಸ್ಯೆ ಬಗೆಹರಿಸಲಾಗುವುದು. ಈ ಬಗ್ಗೆ ಶೀಘ್ರವೇ ಬೆಂಗಳೂರಿನಲ್ಲಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಭೆ.
* ವೆನ್ಲಾಕ್ ಆಸ್ಪತ್ರೆಯಲ್ಲಿ ಐಸಿಯು ಯುನಿಟ್ ಹೆಚ್ಚಳ ಬೇಡಿಕೆ ಈಡೇರಿಸಲು ಪ್ರಯತ್ನ
* ಡ್ರಗ್ಸ್ ಹಾವಳಿ ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ.
* ಬಯಲು ರಂಗ ಮಂದಿರ, ಟ್ರಕ್ ಟರ್ಮಿನಲ್, ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆ, ಖಾಸಗಿ ಬಸ್ ನಿಲ್ದಾಣ ಬೇಡಿಕೆಗಳಿಗೆ ಸರ್ಕಾರ ಆದ್ಯತೆ ನೀಡಲಿದೆ.
* ಕೈಗಾರಿಕೆ ಅಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ದಿಗೆ ಕ್ರಮ.

ಖಾದರ್ ಗೈರಿಗೆ ಅರ್ಥ ಕಲ್ಪಿಸಬೇಡಿ:  ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಆರೋಗ್ಯದ ತೊಂದರೆಯಿಂದ ಆಸ್ಪತೆಯಲ್ಲಿದ್ದಾರೆ. ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತಿದ್ದಾರೆ. ಹಾಗಾಗಿ ಸಭೆಗೆ ಬಂದಿಲ್ಲ. ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಡಿ. ಗುರುವಾರ ಅವರ ಜತೆ ಮಾತಾಡಿದ್ದೇನೆ. ಅವರು ನನ್ನ ಅನುಮತಿ ಪಡೆದಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಮಿತ್ರ ಪಕ್ಷಗಳ ರಗಳೆ:  ಸರ್ಕಿಟ್ ಹೌಸ್‌ನಲ್ಲಿ ಶುಕ್ರವಾರ ರಾತ್ರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಮುಖಂಡರ ಜತೆ ಚರ್ಚೆಯಲ್ಲಿ ತೊಡಗಿಕೊಂಡ ವಿಷಯ ಜೆಡಿಎಸ್ ಸ್ಥಳೀಯ ಕೆಲ ಮುಖಂಡರು ಹಾಗೂ ಕಾರ‌್ಯಕರ್ತರ ಅಸಮಾಧಾನಕ್ಕೆ ಕಾರಣವಾಯಿತು. ಮಾಜಿ ಸಚಿವ ಬಿ.ರಮಾನಾಥ ರೈ, ಸುಮಾರು 50 ಮಂದಿ ಬೆಂಬಲಿಗರ ಜತೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಮುಖ್ಯಮಂತ್ರಿ ಕೊಠಡಿಗೆ ತೆರಳಿದರು. ನಾವು ಪಕ್ಷದ ಮುಖಂಡರು, ಕೆಲ ಕಾರ‌್ಯಕರ್ತರು ಮುಖ್ಯಮಂತ್ರಿ ಭೇಟಿಗಾಗಿ ತುಂಬಾ ಹೊತ್ತಿನಿಂದ ಕಾಯುತ್ತಲೇ ಇದ್ದೆವು ಎಂದು ಜೆಡಿಎಸ್ ಹಿರಿಯ ಮುಖಂಡರೊಬ್ಬರು ಪ್ರತಿಕ್ರಿಯಿಸಿದರು.

ತೈಲ ಬೆಲೆ ತೆರಿಗೆ ಇಳಿಕೆ?:  ಕೇಂದ್ರ ಸರ್ಕಾರದ ತೈಲ ಬೆಲೆ ಏರಿಕೆ ಬಗ್ಗೆ ಈಗ ಬಿಜೆಪಿಯವರು ಮಾತನಾಡುತ್ತಿಲ್ಲ. ರಾಜ್ಯ ಸರ್ಕಾರದ ತೆರಿಗೆ ಬಗ್ಗೆ ಮಾತನಾಡುತ್ತಿದ್ದಾರೆ. 45 ಸಾವಿರ ಕೋಟಿ ರೂ. ರೈತರ ಸಾಲಮನ್ನಾ ಸಹಿತ ರಾಜ್ಯ ಸರ್ಕಾರದ ಮುಂದೆ ಹಲವು ಸವಾಲಿದೆ. ರಾಜ್ಯ ಸರ್ಕಾರದಿಂದ ತೈಲ ಬೆಲೆ ಏರಿಕೆಯ ಹೊರೆ ಇಳಿಸಲು ಸಾಧ್ಯವೇ ಎನ್ನುವ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದೆಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಸರ್ಕಾರ ಪತನ ಕನಸು:  ಸರ್ಕಾರ ಇಂದು ಪತನವಾಗುತ್ತದೆ ಕೆಲವರು ಹೇಳಿದ್ದರು. ಇನ್ನು ಗಣೇಶನ ಹಬ್ಬಕ್ಕೆ ಪತನವಾಗಲಿದೆ, ದಸರಾಕ್ಕೆ ಅಥವಾ ಗಾಂಧಿ ಜಯಂತಿ ಪತನವಾಗುತ್ತದೆ ಎಂದು ಹೇಳಬಹುದು. ಆರಂಭದ ದಿನದಿಂದಲೂ ಸರ್ಕಾರದ ಪತನದ ಬಗ್ಗೆ ಸುದ್ದಿಯಾಗಿತ್ತದೆ. ಆದರೆ ಮೈತ್ರಿ ಸರ್ಕಾರ ಭದ್ರವಾಗಿದೆ ಎಂದು ಎಚ್‌ಡಿಕೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಸದ ನಳಿನ್- ಎಂಎಲ್ಸಿ ಭೋಜೇ ಗೌಡ ವಾಗ್ವಾದ:  ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿನಲ್ಲಿ ಮುಖ್ಯಮಂತ್ರಿ ಪ್ರಗತಿ ಪರಿಶೀಲನೆ ಸಭೆ ಸಂದರ್ಭ ಸಿಎಂ ಎದುರೇ ಸಂಸದ ನಳಿನ್‌ಕುಮಾರ್ ಕಟೀಲ್ ಹಾಗೂ ಜೆಡಿಎಸ್ ಮುಖಂಡ, ವಿಧಾನಪರಿಷತ್ ಸದಸ್ಯ ಭೋಜೇ ಗೌಡ ವಾಗ್ವಾದ ನಡೆಸಿದರು. ಮಳೆ ಹಾನಿ ವಿಚಾರದಲ್ಲಿ ರಾಜಕೀಯ ಬೇಡ. ನೀವು ರಾಜಕೀಯ ನಡೆಸುತ್ತೀರಿ. ಸರ್ವೇ ಸರಿಯಾಗಿ ನಡೆಸಲು ಹೇಳಿ ಎಂದು ಜೆಡಿಎಸ್ ಮುಖಂಡ ಭೋಜೇ ಗೌಡರವನ್ನು ತರಾಟೆಗೆ ತೆಗೆದುಕೊಂಡರು. ಮುಖ್ಯಮಂತ್ರಿ ಇಬ್ಬರನ್ನೂ ಸಮಾಧಾನ ಪಡಿಸಿದರು.

ವಾಹನಕ್ಕೆ ತಡೆ ಶಾಸಕರು ಗರಂ:  ಪ್ರಗತಿ ಪರಿಶೀಲನಾ ಸಭೆಗೆ ಜಿಲ್ಲೆಯ ಶಾಸಕರ ವಾಹನವನ್ನು ಗೇಟಿನಿಂದ ಒಳಗೆ ಬಿಡದ ಪೊಲೀಸರ ವರ್ತನೆಗೆ ಸಿಡಿಮಿಡಿಗೊಂಡ ಶಾಸಕರು ನೇರವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಳಿ ತೆರಳಿ ಪೊಲೀಸರ ಕ್ರಮದ ವಿರುದ್ಧ ಕಿಡಿಕಾರಿದರು. ಶಾಸಕರಾದ ಅಂಗಾರ, ಸಂಜೀವ ಮಠಂದೂರು, ರಾಜೇಶ್ ನಾಕ್, ವೇದವ್ಯಾಸ ಕಾಮತ್ ಸುದ್ದಿಗೋಷ್ಠಿ ಮುಗಿಯುತ್ತಿದ್ದಂತೆ ವೇದಿಕೆಗೆ ಧಾವಿಸಿ ಸಿಎಂ ಬಳಿ ಅಧಿಕಾರಿಗಳ ವರ್ತನೆ ಬಗ್ಗೆ ದೂರಿದರು. ನಾವು ಶಾಸಕರು ಎಂದರೂ ಕೇಳುತ್ತಿರಲಿಲ್ಲ. ಅಧಿಕಾರಿಗಳ ಎದುರು ನಮ್ಮ ಮರ್ಯಾದೆ ತೆಗೆದಿದ್ದಾರೆ. ಹಾಗಾದರೆ ನಾವು ನಿಮ್ಮ ಪ್ರಗತಿ ಪರಿಶೀಲನಾ ಸಭೆಗೆ ಬರುವುದು ಬೇಡವೇ? ಜನಪ್ರತಿನಿಧಿಗಳಿಗೆ ಪೊಲೀಸರು ನೀಡುವ ಬೆಲೆ ಇದುವೆಯೇ ಎಂದು ಶಾಸಕರು ಖಾರವಾಗಿ ಪ್ರಶ್ನಿಸಿದರು. ಮುಂದೆ ಹೀಗಾಗದಂತೆ ಸೂಚನೆ ನೀಡುವುದಾಗಿ ಕುಮಾರಸ್ವಾಮಿ ಶಾಸಕರನ್ನು ಸಮಾಧಾನಪಡಿಸಿದರು.