ವಿರಾಜಪೇಟೆ: ಇಲ್ಲಿನ ಪೆರುಂಬಾಡಿ ಬಳಿ ಉನ್ನತೀಕರಣಗೊಳ್ಳುತ್ತಿರುವ ಲ್ಯಾಂಡ್ ಫಿಲ್ ಏರಿಯಾಗೆ ಶಾಸಕ ಎ.ಎಸ್.ಪೊನ್ನಣ್ಣ ಭಾನುವಾರ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲನೆ ನಡೆಸಿದರು.

ಪೆರುಂಬಾಡಿ ಭಾಗದಲ್ಲಿ ಉನ್ನತ ದರ್ಜೆಯ ಅತ್ಯಾಧುನಿಕ ಹಾಗೂ ಪರಿಸರ ಸ್ನೇಹಿ ಕಸ ವಿಲೇವಾರಿ ಘಟಕಕ್ಕೆ ಸರ್ಕಾರದಿಂದ ಅನುದಾನ ನೀಡಿದ್ದು, ಕಾಮಗಾರಿಯನ್ನ್ನು ವೀಕ್ಷಿಸಿ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.
ಬಳಿಕ ಮಾತನಾಡಿದ ಶಾಸಕರು, 34 ಸಾವಿರಕ್ಕೂ ಅಧಿಕ ಮೆಟ್ರಿಕ್ ಟನ್ ಘನ ತ್ಯಾಜ್ಯವನ್ನು ವಿಲೇವಾರಿ ಮಾಡುವಲ್ಲಿ ಈ ಘಟಕ ಸಹಕಾರಿಯಾಗಲಿದೆ. ಜತೆಗೆ ಈ ಘಟಕವು ಮೂರು ಹಂತದಲ್ಲಿ ಕಾರ್ಯ ನಿರ್ವಹಿಸಲಿದ್ದು, ದೀರ್ಘಕಾಲದ ಘನತಾಜ್ಯ ಸಮಸ್ಯೆಗೆ ಇದು ಪರಿಹಾರ ಒದಗಿಸಲಿದೆ ಎಂದರು.
ಎಲ್ಲರೂ ತಮ್ಮ ಮನೆಗಳಲ್ಲಿಯೇ ಒಣ ಕಸ ಮತ್ತು ಹಸಿ ಕಸ ಪ್ರತ್ಯೇಕಿಸಿ ನೀಡಿದಲ್ಲಿ ತ್ಯಾಜ್ಯ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಶುಚಿತ್ವದ ಬಗ್ಗೆ ಜಾಗೃತರಾಗಿ ನಮ್ಮ ಈ ಪ್ರಯತ್ನಕ್ಕೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು. ಮಳೆಗಾಲ ಪ್ರಾರಂಭವಾಗುವುದಕ್ಕೂ ಮೊದಲೇ ಗುತ್ತಿಗೆದಾರರು ಆದಷ್ಟು ಬೇಗ ಈ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು.
ಪುರಸಭೆ ಅಧ್ಯಕ್ಷೆ ದೇಚ್ಚಮ್ಮ ಕಾಳಪ್ಪ, ಉಪಾಧ್ಯಕ್ಷೆ ಫಸಿಹಾ ತಬುಸುಮ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ರಾಜೇಶ್, ರಜನಿ ಕಾಂತ್, ಅರ್ಜಿ ಪಂಚಾಯಿತಿ ಅಧ್ಯಕ್ಷ, ಸದಸ್ಯರು ಇದ್ದರು.