ಸ್ಥಳೀಯ ಸಂಸ್ಥೆಗಳನ್ನು ಗೆಲ್ಲುವ ವಿಶ್ವಾಸದಲ್ಲಿ ಮೈತ್ರಿಗೆ ಒಪ್ಪುದ ಕಾಂಗ್ರೆಸ್

ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಬಳಿಕ ದೋಸ್ತಿ ಸಂಬಂಧ ಹಳಸಿದಂತೆ ಕಂಡು ಬಂದಿದ್ದು, ಜಿಲ್ಲೆಯ ಐದು ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ದೂರಾಗಲಿದ್ದು, ಪ್ರತ್ಯೇಕವಾಗಿಯೇ ಚುನಾವಣೆ ಎದುರಿಸುವ ಲಕ್ಷಣ ಕಂಡು ಬಂದಿದೆ.

ಜತೆಗೆ ಕಾಂಗ್ರೆಸ್ ತನ್ನ ಬುಟ್ಟಿಯಲ್ಲಿ 4 ಲಕ್ಷದಷ್ಟು ಮತ ಇರಿಸಿಕೊಂಡಿದ್ದರೂ ವರಿಷ್ಠರ ಒತ್ತಡಕ್ಕೆ ಒಪ್ಪಿಕೊಂಡ ಹಿನ್ನೆಲೆಯಲ್ಲಿ ತನಗಿಂತ ಬಲಹೀನ ಪಕ್ಷದ ಅಭ್ಯರ್ಥಿಯನ್ನು ತನ್ನ ಪಕ್ಷದಿಂದಲೇ ಜೆಡಿಎಸ್​ಗೆ ಬಿಟ್ಟುಕೊಟ್ಟು ಸಖ್ಯ ಬೆಳೆಸಿಕೊಂಡ ಬೆಳವಣಿಗೆ ಹಾಗೂ ಅಸಹಾಯಕತೆ ಬಗ್ಗೆ ಪಕ್ಷಕ್ಕೆ ಈಗಲೂ ಪಶ್ಚಾತ್ತಾಪವಿದೆ. ಈ ಆಘಾತದಿಂದ ಕಾಂಗ್ರೆಸ್ ಕಾರ್ಯಕರ್ತರು ಇನ್ನೂ ಹೊರ ಬಂದಿಲ್ಲ.

ಪಕ್ಷದ ವರಿಷ್ಠರು ಕಾಂಗ್ರೆಸ್ ಹಾಗೂ ಜೆಡಿಎಸ್ ಒಡಂಬಡಿಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರ ಸೂಚನೆಗೆ ಕಟ್ಟು ಬಿದ್ದು ಜಿಲ್ಲಾ ಕಾಂಗ್ರೆಸ್ ಈ ‘ಒಲ್ಲದ ಮದುವೆ’ಗೆ ಸಮ್ಮತಿ ನೀಡಿತ್ತು. ಚುನಾವಣೆ ಕಾಲಕ್ಕೆ ಕಾಂಗ್ರೆಸಿಗರ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತೆ ಉಳಿದಿದ್ದು ಪ್ರಚಾರದ ಸಂದರ್ಭದಲ್ಲೂ ಭಿನ್ನಮತ ಕಾಣಿಸಿಕೊಂಡಿರಲಿಲ್ಲ. ಪಕ್ಷದ ನಾಯಕರ ಹೊರತಾಗಿ ಎಲ್ಲೋ ಒಂದು ಕಡೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ನಿರುತ್ಸಾಹ ಕಂಡು ಬಂದಿತ್ತು.

ಆದರೆ ಈ ಚುನಾವಣೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಮಟ್ಟದಲ್ಲೇ ನಡೆಯುವುದರಿಂದ ಜಿಲ್ಲಾಮಟ್ಟದ ನಾಯಕರೂ ಸ್ಪರ್ಧೆ ವಿಚಾರದಲ್ಲಿ ಜೆಡಿಎಸ್ ಜತೆ ಕೈಜೋಡಿಸಲು ಸುತಾರಾಂ ಒಪ್ಪುತ್ತಿಲ್ಲ ಎಂದು ಹೇಳಲಾಗುತ್ತಿದೆ. ಈ ವಿಚಾರದಲ್ಲಿ ಸ್ಥಳೀಯ ಮುಖಂಡರ ಮಟ್ಟಕ್ಕೆ ತೀರ್ಮಾನ ತೆಗೆದುಕೊಳ್ಳುವ ಜವಾಬ್ದಾರಿ ಬಿಟ್ಟಿದ್ದು, ಜಿಲ್ಲಾ ಮಟ್ಟದ ಕಾಂಗ್ರೆಸ್ ಮುಖಂಡರು ಕೈಚೆಲ್ಲಿದ್ದಾರೆಂದು ಹೇಳಲಾಗುತ್ತಿದೆ. ಹೀಗಾಗಿ ಜಿಲ್ಲೆಯ ಐದು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿಯೂ ಪಕ್ಷ ಸ್ವತಂತ್ರವಾಗಿ ಸ್ಪರ್ಧೆಗಿಳಿಯಲು ನಿರ್ಧರಿಸಿದ್ದು, ಕಾಂಗ್ರೆಸ್ ಆಕಾಂಕ್ಷಿಗಳಲ್ಲೂ ಅತ್ಯಂತ ಹುರುಪು ಕಂಡು ಬಂದಿದೆ.

ಜೆಡಿಎಸ್ ಲಾಭ ಲೆಕ್ಕಾಚಾರ: ಮೈತ್ರಿ ರಾಜಕಾರಣದಿಂದ ಪಕ್ಷದ ಬಲ ಇನ್ನಷ್ಟು ಸಂವರ್ಧನೆಯಾಗಲಿದೆ ಎನ್ನುವ ಕಾರಣಕ್ಕೆ ಜೆಡಿಎಸ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಆಸಕ್ತಿ ತೋರಿಸುತ್ತಿದೆ. ಜತೆಗೆ ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಸ್ಥಾನ ಬಲಪಡಿಸಿಕೊಳ್ಳಲು ಜೆಡಿಎಸ್ ಲೆಕ್ಕಾಚಾರ ನಡೆಸುತ್ತಿದೆ. ಜೆಡಿಎಸ್ ಪಾಳಯದಲ್ಲಿ ಕಾಂಗ್ರೆಸ್ ಜತೆ ಕೈಜೋಡಿಸಬೇಕೆನ್ನುವ ಅಮಿತೋತ್ಸಾಹ ಕಂಡು ಬಂದಿದ್ದರೂ ಕಾಂಗ್ರೆಸ್ ಮಣೆ ಹಾಕುತ್ತಿಲ್ಲ. ಇದೀಗ ನಡೆದ ಲೋಕಸಭೆ ಚುನಾವಣೆಯಲ್ಲಿ ನಡೆಸಿದ ಮೈತ್ರಿ ರಾಜಕಾರಣವನ್ನು ಈ ಚುನಾವಣೆಯಲ್ಲಿ ಬಳಸಿಕೊಂಡರೆ ತನಗೊಂದಿಷ್ಟು ಲಾಭವಾಗಲಿದೆ ಎಂದು ಜೆಡಿಎಸ್ ಲೆಕ್ಕಾಚಾರ ನಡೆಸುತ್ತಿದೆ. ಈ ವ್ಯರ್ಥ ಕಸರತ್ತಿನ ಗೊಡವೆ ತನಗೇಕೆ ಎಂದು ಕಾಂಗ್ರೆಸ್ ಸದ್ಯ ದೂರ ಉಳಿಯುವ ತೀರ್ಮಾನ ಕೈಗೊಂಡು ಸ್ವತಂತ್ರವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧಾರ ಕೈಗೊಂಡಿದೆ.

ಹೊಂದಾಣಿಕೆಗೆ ಬಹಿರಂಗ ನಕಾರ; ಅದಕ್ಕೆ ಪೂರಕವಾಗಿ ಮೂಡಿಗೆರೆ ಪಪಂ ಚುನಾವಣೆಗೆ ಜೆಡಿಎಸ್​ನೊಂದಿಗೆ ಮೈತ್ರಿ ಬೇಡ ಎಂದು ಬಹಿರಂಗವಾಗಿ ಸ್ಥಳೀಯ ಕಾಂಗ್ರೆಸ್ ಮುಖಂಡರು ನಾಯಕರ ಮೇಲೆ ಒತ್ತಡ ಹೇರಿದ್ದಾರೆ. ಕಡೂರು ಪುರಸಭೆಗೆ ನಡೆಯುವ ಚುನಾವಣೆಯಲ್ಲಿ ಬಹುತೇಕ ಮೈತ್ರಿ ಇಲ್ಲ ಎಂದು ಪಕ್ಷದ ಪ್ರಮುಖ ನಾಯಕರೊಬ್ಬರು ತಿಳಿಸಿದ್ದಾರೆ. ಕೊಪ್ಪ, ಶೃಂಗೇರಿ ಹಾಗೂ ಎನ್.ಆರ್.ಪುರಗಳಲ್ಲಿ ಅಷ್ಟಾಗಿ ಪ್ರಾಬಲ್ಯ ಹೊಂದಿರದ ಜೆಡಿಎಸ್ ಕಾಂಗ್ರೆಸ್ ಸಖ್ಯ ಸಾಧಿಸಿ ಹೂವಿನ ಜತೆ ನಾರು ಸ್ವರ್ಗಕ್ಕೆ ಸಾಗಿದಂತೆ ಸ್ಥಾನ ಗಳಿಸುವ ಎಣಿಕೆಯಲ್ಲಿದೆ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ.

ಮೈತ್ರಿ ಮಾತುಕತೆ ಆಗಿಲ್ಲ: ಮೂರೂ ಪಪಂ ವ್ಯಾಪ್ತಿಯಲ್ಲಿ ಬಿಜೆಪಿಗೆ ಪ್ರಬಲ ಸ್ಪರ್ಧೆಯೊಡ್ಡಲು ಕಾಂಗ್ರೆಸ್​ಗೆ ಮಾತ್ರ ಸಾಧ್ಯ ಎನ್ನುವ ವಾಸ್ತವ ಕಾಂಗ್ರೆಸ್ ಅರಿತಿದೆ. ಹೀಗಾಗಿ ಈ ಪ್ರದೇಶಗಳಲ್ಲಿ ಜೆಡಿಎಸ್​ನಿಂದ ದೂರ ಉಳಿಯುತ್ತಿದೆ. ಆದರೆ ಮೈತ್ರಿ ಕುರಿತಂತೆ ಯಾವುದೇ ಮಾತುಕತೆ ಉಭಯ ಪಕ್ಷಗಳಲ್ಲಿ ನಡೆದಿಲ್ಲ. ಲೋಕಸಭಾ ಚುನಾವಣೆಯ ಕಹಿ ಅನುಭವಿಸಿರುವ ಕಾಂಗ್ರೆಸ್​ನ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಈ ಬಾರಿ ಪಕ್ಷದ ವರಿಷ್ಠರು ಹೇಳಿದರೂ ಕೇಳುವ ಸ್ಥಿತಿಯಲ್ಲಿ ಇಲ್ಲ.

ಮೇ 9ಕ್ಕೆ ಅಧಿಸೂಚನೆ ಪ್ರಕಟ: ಮೇ 29 ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಮತದಾನಕ್ಕೆ ಮೇ 9 ರಂದು ಜಿಲ್ಲಾ ಚುನಾವಣಾಧಿಕಾರಿಗಳು ಅಧಿಸೂಚನೆ ಪ್ರಕಟಿಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಮೇ 16 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, 17 ರಂದು ನಾಮಪತ್ರಗಳ ಪರಿಶೀಲನೆ, 20 ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದು, 31 ರಂದು ಮತ ಎಣಿಕೆ ನಡೆಯಲಿದೆ. ಕಡೂರು ಪುರಸಭೆಯ 23 ಸ್ಥಾನಗಳು ಹಾಗೂ ಕೊಪ್ಪ, ಶೃಂಗೇರಿ, ಎನ್.ಆರ್.ಪುರ ಹಾಗೂ ಮೂಡಿಗೆರೆ ಪಪಂಗಳ ತಲಾ 11 ಸ್ಥಾನಗಳು ಸೇರಿ ಒಟ್ಟು 5 ಸ್ಥಳೀಯ ಸಂಸ್ಥೆಗಳ 78 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

Leave a Reply

Your email address will not be published. Required fields are marked *