ಜಾಗತಿಕ ಮಟ್ಟದ ಪ್ರತಿಷ್ಠಿತ ಸಿಯೋಲ್​ ಶಾಂತಿ ಪ್ರಶಸ್ತಿಗೆ ಭಾಜನರಾದ್ರು ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಈ ವರ್ಷದ ಸಿಯೋಲ್​ ಶಾಂತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೋದಿಯವರು ಆರ್ಥಿಕ ಅಭಿವೃದ್ಧಿಯ ದೃಷ್ಟಿಕೋನದ ಮೂಲಕ ಏಷ್ಯಾ-ಫೆಸಿಫಿಕ್​ ಪ್ರದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆಂದು ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದಾಗಿ ಪ್ರತಿಷ್ಠಿತ ಸಿಯೋಲ್​ ಪ್ರಶಸ್ತಿ ಸಮಿತಿ ತಿಳಿಸಿದೆ.

ಪ್ರಧಾನಿ ಮೋದಿಯವರು ಭಾರತದಲ್ಲಿ ಬಡವರು, ಶ್ರೀಮಂತರ ನಡುವಿನ ಆರ್ಥಿಕ, ಸಾಮಾಜಿಕ ಅಸಮತೋಲನವನ್ನು ಕಡಿಮೆ ಮಾಡುತ್ತಿದ್ದಾರೆ. ಹಲವು ದೇಶಗಳೊಂದಿಗೆ ಆರ್ಥಿಕ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಭಾರತದ 1.35 ಬಿಲಿಯನ್​ ಜನರ ಜೀವನ ಸುಧಾರಿಸಲು ಪ್ರಯತ್ನಿಸುತ್ತಿದ್ದಾರೆ. ವಿಶ್ವಶಾಂತಿಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಏಷಿಯಾ ಫೆಸಿಫಿಕ್​ ಪ್ರದೇಶದ ಶಾಂತಿ ಕಾಪಾಡುವ ಸಲುವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹಬಾಳ್ವೆಗೆ ಪೂರಕವಾದ ರಾಜತಾಂತ್ರಿಕ ನೀತಿಗಳನ್ನು ಅಳವಡಿಸಿಕೊಂಡಿದ್ದಾರೆ. ಈ ಎಲ್ಲ ಕಾರಣಗಳನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ತಿಳಿಸಿದೆ.

ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಿಯೋಲ್​ ಶಾಂತಿ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದ್ದು ಈ ಗೌರವಕ್ಕೆ ಅವರು ಸೂಕ್ತ ವ್ಯಕ್ತಿ ಎಂದು ಜುಂಗ್​ ಗು ವಿನಲ್ಲಿ ನಡೆದ ಪ್ರಶಸ್ತಿ ಆಯ್ಕೆ ಸಭೆಯಲ್ಲಿ ಸಿಯೋಲ್​ ಶಾಂತಿ ಪ್ರಶಸ್ತಿ ಸಾಂಸ್ಕೃತಿಕ ಫೌಂಡೇಶನ್​ ಅಧ್ಯಕ್ಷ ಕ್ವೋನ್ ಇಹ್ಯೋಕ್ ತಿಳಿಸಿದ್ದಾರೆ.

ಪ್ರಧಾನಿ ಮೋದಿಯವರು ಈ ಪ್ರತಿಷ್ಠಿತ ಪ್ರಶಸ್ತಿ ಪಡೆಯುತ್ತಿರುವ ಜಗತ್ತಿನ 14ನೇ ವ್ಯಕ್ತಿಯಾಗಿದ್ದಾರೆ. ಪ್ರಶಸ್ತಿಯು 2 ಲಕ್ಷ ಡಾಲರ್​ ಹಾಗೂ ಬಿರುದು ಫಲಕವನ್ನು ಒಳಗೊಂಡಿದೆ. ಪ್ರಶಸ್ತಿಗೆ ಭಾಜನರಾಗಿರುವ ಮೋದಿ ತಮ್ಮ ಸಂತಸವನ್ನು ವ್ಯಕ್ತಪಡಿದ್ದಾರೆ.
ಸಿಯೋಲ್​ ಶಾಂತಿ ಪ್ರಶಸ್ತಿ 1990ರಲ್ಲಿ ರಿಪಬ್ಲಿಕ್​ ಕೋರಿಯಾದ ಸಿಯೋಲ್​ನಲ್ಲಿ ನಡೆದ 24ನೇ ಓಲಂಪಿಕ್​ ಆಟದ ವೇಳೆ ಸ್ಥಾಪಿಸಲ್ಪಟ್ಟಿದೆ.