ಇಂದ್ರಿಯ ನಿಗ್ರಹದಿಂದ ಜೀವನದಲ್ಲಿ ಯಶಸ್ಸು ಸಾಧ್ಯ

ಚಿತ್ರದುರ್ಗ:  ಇಂದ್ರಿಯಗಳನ್ನು ನಿಗ್ರಹಿಸದಿದ್ದರೆ ಜೀವನದಲ್ಲಿ ಯಶಸ್ಸು ಸಾಧಿಸಲಾಗದೆಂದು ಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಬೆಂಗಳೂರಿನ ಉನ್ನತಿ ಹೀಲಿಂಗ್ ಫೌಂಡೇಷನ್ ಟ್ರಸ್ಟ್ ಮಂಗಳವಾರ ತರಾಸು ರಂಗ ಮಂದಿರದಲ್ಲಿ ಆಯೋಜಿಸಿದ್ದ ಯುವ ಜನರಿಂದ ಯುವ ಜನರಿಗಾಗಿ ಜೀವನ ಕೌಶಲ್ಯ ತರಬೇತಿ-ಆಪ್ತ ಸಮಾಲೋಚನೆ ಉದ್ಘಾಟಿಸಿ ಮಾತನಾಡಿದರು.

ಹದಿಹರೆಯದ ವೇಳೆ ಬದುಕನ್ನು ಹೆಚ್ಚು ಸೂಕ್ಷ್ಮವಾಗಿ ಅವಲೋಕಿಸುತ್ತಾ ಭವಿಷ್ಯ ರೂಪಿಸಿಕೊಳ್ಳಬೇಕು. ಸಂವೇದನೆ, ಕ್ರಿಯಾಶೀಲತೆ ರೂಢಿಸಿಕೊಳ್ಳಬೇಕು. ಸಂಕಷ್ಟಗಳನ್ನು ಎದುರಿಸಲು ಕ್ರಿಯಾಶೀಲತೆಯೊಂದೇ ಪರಿಹಾರ.

ಖಿನ್ನತೆಯ ಮನಸ್ಸು ಅಪಾಯಕಾರಿ. ಅಮೆರಿಕದಂಥ ಅಭಿವೃದ್ಧಿ ಹೊಂದಿದ ರಾಷ್ಟ್ರದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳ ಆತ್ಮಹತ್ಯೆ ಸಂಖ್ಯೆ ಹೆಚ್ಚಾಗಿದೆ. ಭಾರತದಲ್ಲೂ ಈ ಪಿಡುಗು ಹೆಚ್ಚಾಗುತ್ತಿದೆ. ಆಧುನಿಕ ಜೀವನ ಶೈಲಿ ನಾನಾ ಕಾಯಿಲೆಗಳಿಗೆ ಕಾರಣವಾಗಿದೆ. ಆಪ್ತ ಸಮಾಲೋಚನೆ ಮೂಲಕ ಮಾನಸಿಕ ತೊಳಲಾಟವನ್ನು ನಿವಾರಿಸಿಕೊಳ್ಳಬೇಕಿದೆ ಎಂದರು.

ಫೌಂಡೇಷನ್ ಸಂಸ್ಥಾಪಕರಾದ ಡಾ.ಸರಸ್ವತಿ ಹೆಗಡೆ ಮಾತನಾಡಿ, ಪದವಿ ಪೂರ್ವದಲ್ಲೇ ನಮ್ಮಲ್ಲಿರುವ ನಾಯಕತ್ವ ಗುಣವನ್ನು ಪೋಷಿಸಿ, ಬೆಳೆಸಬೇಕು. ಬಾಂಧವ್ಯಗಳು ಕುಸಿಯುತ್ತಿರುವ ಈ ಸನ್ನಿವೇಶದಲ್ಲಿ ಆತ್ಮೀಯರೆನಿಸುವ ಕನಿಷ್ಠ ಐವರು ಗೆಳೆಯ/ಗೆಳೆಯ ರೊಂದಿಗೆ ಮನಸ್ಸಿನ ಗೊಂದಲಗಳನ್ನು ನಿವಾರಿಸಿಕೊಳ್ಳ ಬೇಕು. ನಮ್ಮದೇ ಚೌಕಟ್ಟಿನಲ್ಲಿ ಕಳೆದು ಹೋಗದೇ ಗುರಿ ಸಾಧಿಸಬೇಕು.

ನನಗೆ ಬರಲ್ಲ ಎಂಬ ಮಾತಿಗೆ ಮನಸ್ಸಿನಲ್ಲಿ ಜಾಗ ಕೊಡಬಾರದು. ಪಠ್ಯಾಭ್ಯಾಸದ ಮೊದಲು ಅದನ್ನು ಗೌರವಿಸಿ. ಹೊಸತನ್ನು ಕಲಿಯುವ ವೇಳೆಯಲ್ಲಿ ಯಾರಾದರೂ ನಕ್ಕರೆ ಎಂಬ ಭಯ ಬೇಡ. ಕೇಳಿ, ನೋಡಿ, ಅನುಭವಿಸಿ ಅಥವಾ ಕಲ್ಪಿಸಿ ಕಲಿಯಿರಿ. ಕಲಿಕೆಗೆ ಅಗತ್ಯವಿರುವ ನಿಮ್ಮದೇ ಆದ ದಾರಿಯನ್ನು ನೀವೇ ಕಂಡುಕೊಳ್ಳಿ.

ಸುಳ್ಳು ಹೇಳುವಂಥವರನ್ನು ಯಾರೂ ಗೌರವಿಸುವುದಿಲ್ಲ. ಸತ್ಯವನ್ನು ರೂಢಿಸಿಕೊಳ್ಳಿ. ಭೂಮಿಯನ್ನು ತಾಯಿಯಂತೆ ಗೌರವಿಸಿ. ಹೊಸ ಸಮಾಜದ ಸೃಷ್ಟಿಗೆ ಶ್ರಮಿಸಿ. ಕರ್ನಾಟಕ, ಭಾರತದಲ್ಲಿಂದು ನಿತ್ಯವೂ ಹದಿಹರೆಯದ ಒಬ್ಬಿಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಂಕವೊಂದೇ ಅಂತಿಮವಲ್ಲ. ಪ್ರಕೃತಿ ಬದುಕನ್ನು ಕೊಟ್ಟಿದ್ದು, ನಾವಿಂದು ಅದರೊಂದಿಗೆ ಹೊಂದಿಕೊಂಡು ಬದುಕಬೇಕಿದೆ ಎಂದರು.

1500 ವಿದ್ಯಾರ್ಥಿಗಳೊಂದಿಗೆ 300 ಮೆಡಿಕಲ್ ವಿದ್ಯಾರ್ಥಿಗಳು ಆಪ್ತ ಸಮಾಲೋಚನೆ ನಡೆಸಿದರು. ಈಗ ಭಾಗವಹಿಸಿರುವ ವಿದ್ಯಾರ್ಥಿಗಳು ಇನ್ನೈದು ಕಾರ‌್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆಂದು ಟ್ರಸ್ಟಿನ ಸಮನ್ವಯಾಧಿಕಾರಿ ಪದ್ಮಾ ಶ್ರೀನಿವಾಸ್ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿ ಶರತ್ ಪುಣಾತಂಬೇಕರ್, ಟ್ರಸ್ಟಿ ಅರವಿಂದ್ ಇದ್ದರು.