ಮುಂಬೈ: ವಾರಂತ್ಯದ ಬಳಿಕ ಸೋಮವಾರ (ಆ.05) ಆರಂಭದಲ್ಲೇ ಭಾರತದ ಷೇರುಪೇಟೆ ಭಾರಿ ಕುಸಿತವನ್ನು ಕಂಡಿದೆ. ಬೆಳಗ್ಗೆ 9.30ಕ್ಕೆ ಸೆನ್ಸೆಕ್ಸ್ 1533.11 ಅಂಕಗಳ ಭಾರಿ ಕುಸಿತದೊಂದಿಗೆ 79,448.84 ಅಂಕಗಳಲ್ಲಿ ವಹಿವಾಟು ಆರಂಭಿಸಿದ್ದು, ಎನ್‌ಎಸ್‌ಇ ನಿಫ್ಟಿ 463.50 ಪಾಯಿಂಟ್‌ಗಳ ಕುಸಿತದೊಂದಿಗೆ 24,254.20 ಪಾಯಿಂಟ್‌ಗಳಿಗೆ ತಲುಪಿದೆ.
ಕಳೆದ ಗುರುವಾರವಷ್ಟೇ ಷೇರು ಮಾರುಕಟ್ಟೆ ಇತಿಹಾಸದಲ್ಲೇ ಮೊದಲ ಬಾರಿಗೆ ನಿಫ್ಟಿ 25 ಸಾವಿರ ಗಡಿ ದಾಟಿತ್ತು. ಸೆನ್ಸೆಕ್ಸ್ ಕೂಡ 82,076.17 ಅಂಕಗಳೊಂದಿಗೆ ಸಾರ್ವಕಾಲಿಕ ಎತ್ತರದಲ್ಲಿತ್ತು. ಆದರೆ, ಇಂದು ಆರಂಭಿಕ ವಹಿವಾಟಿನಲ್ಲಿ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ ಸಂಭವಿಸಿದೆ.
ನಿಫ್ಟಿ50ಯಲ್ಲಿ ಬ್ರಿಟಾನಿಯಾ, ಸನ್ ಫಾರ್ಮಾ, ಎಚ್ಯುಎಲ್, ಡಾ. ರೆಡ್ಡೀಸ್ ಮತ್ತು ನೆಸ್ಲೆ ಇಂಡಿಯಾ ಇತ್ಯಾದಿಗಳು ಉತ್ತಮ ಬೆಳವಣಿಗೆಯನ್ನು ತೋರಿಸುತ್ತಿವೆ. ಇನ್ನೊಂದೆಡೆ ಟಾಟಾ ಮೋಟರ್ಸ್, ಹಿಂಡಲ್ಕೋ, ಶ್ರೀರಾಮ್ ಫೈನಾನ್ಸ್, ಟಾಟಾ ಸ್ಟೀಲ್, ಜೆಎಸ್ಡಬ್ಲ್ಯು ಸ್ಟೀಲ್, ಅದಾನಿ ಪೋರ್ಟ್ಸ್, ಮಾರುತಿ, ರಿಲಯನ್ಸ್ ಮತ್ತು ಒಎನ್ಜಿಸಿ ಷೇರುಗಳು ನಷ್ಟದಲ್ಲಿ ವಹಿವಾಟಾಗುತ್ತಿವೆ.
ರಿಯಾಲ್ಟಿ, ಐಟಿ, ಬ್ಯಾಂಕ್ ಮತ್ತು ಹಣಕಾಸು ಸೇವೆಗಳ ಷೇರುಗಳಾದ್ಯಂತ ದೊಡ್ಡ ನಷ್ಟದೊಂದಿಗೆ ಎಲ್ಲಾ ಪ್ರಮುಖ ವಲಯದ ಸೂಚ್ಯಂಕಗಳು ಕುಸಿತಕಂಡಿವೆ. ಅಲ್ಲದೆ, ಸ್ಮಾಲ್‌ಕ್ಯಾಪ್ ಮತ್ತು ಮಿಡ್‌ಕ್ಯಾಪ್ ಷೇರುಗಳು ಇಳಿಮುಖವಾಗುವುದರೊಂದಿಗೆ ಇತರ ವಿಶಾಲ ಮಾರುಕಟ್ಟೆ ಸೂಚ್ಯಂಕಗಳು ಋಣಾತ್ಮಕ ವಹಿವಾಟು ನಡೆಸುತ್ತಿವೆ.
ಮಾರುಕಟ್ಟೆ ತಜ್ಞರ ಪ್ರಕಾರ, ಅಮೆರಿಕ ಆರ್ಥಿಕತೆಯಲ್ಲಿನ ಕುಸಿತವು ಜಾಗತಿಕ ಷೇರು ಮಾರುಕಟ್ಟೆಗಳಲ್ಲಿನ ವ್ಯತ್ಯಾಸಕ್ಕೆ ಪ್ರಮುಖ ಕಾರಣವಾಗಿದೆ. ಅಲ್ಲದೆ, ಜುಲೈ ತಿಂಗಳಲ್ಲಿ ಅಮೆರಿಕದಲ್ಲಿ ಉದ್ಯೋಗ ಸೃಷ್ಟಿಯು ಸಹ ಕುಸಿತ ಕಂಡಿದ್ದು, ಯುಎಸ್ ನಿರುದ್ಯೋಗ ದರವು 4.3% ಕ್ಕೆ ಏರಿದೆ. ಅಲ್ಲದೆ, ಮಧ್ಯಪ್ರಾಚ್ಯದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಸಹ ಷೇರು ಮಾರುಕಟ್ಟೆಯ ಚಂಚಲತೆಗೆ ಪ್ರಮುಖ ಕೊಡುಗೆಯ ಅಂಶವಾಗಿದೆ ಎಂದು ಹೇಳಲಾಗಿದೆ.
ಇನ್ನು ವಿಶ್ವ ಮಾರುಕಟ್ಟೆಗಳಲ್ಲಿನ ಅಪಾಯದ ಪರಿಸ್ಥಿತಿಯು ಡಾಲರ್ ಅನ್ನು ಉತ್ತಮ ಬಿಡ್‌ನಲ್ಲಿ ಇರಿಸಿದ್ದರಿಂದ ರೂಪಾಯಿ ಮೌಲ್ಯವು ಸಹ ಕುಸಿದಿದೆ. ಯುಎಸ್ ಡಾಲರ್‌ಗೆ 83.80 ರೂಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದೆ. (ಏಜೆನ್ಸೀಸ್)
ಮದರಸಾದಲ್ಲಿ ಕ್ಷುಲಕ ಕಾರಣಕ್ಕೆ ಶುರುವಾದ ಗಲಾಟೆ ಹತ್ಯೆಯಲ್ಲಿ ಅಂತ್ಯ; ಅಪ್ರಾಪ್ತನ ಪ್ಲ್ಯಾನ್ ಕೇಳಿ ದಂಗಾದ ಪೊಲೀಸರು
ಭಾರತದ ಬಲಿಷ್ಠ ಬ್ಯಾಟ್ಸ್ಮನ್ಗಳಿಗೆ ಭಯ ಹುಟ್ಟಿಸಿದ ಶ್ರೀಲಂಕಾದ ಸ್ಪಿನರ್; ಗೆಲುವಿನ ಬಳಿಕ ಹೇಳಿದ್ದಿಷ್ಟು