ಮುಂಬೈ: ಭಾರತೀಯ ಷೇರುಪೇಟೆಯ ಬಾಂಬೆ ಸ್ಟಾಕ್ ಎಕ್ಸ್ಚೇಂಜ್(ಬಿಎಸ್ಇ)ನ ಸೆನ್ಸೆಕ್ಸ್ 900ಕ್ಕೂ ಹೆಚ್ಚು ಅಂಶ ಏರಿಕೆ ದಾಖಲಿಸಿ ಬಜೆಟ್ ಪೂರ್ವದ ಸ್ಥಿತಿಗೆ ಮರಳಿದೆ.ಜಾಗತಿಕ ಮಾರುಕಟ್ಟೆಯ ಸ್ಥಿರತೆಯನ್ನು ಗಮನಿಸಿದ ಹೂಡಿಕೆದಾರರು ಖರೀದಿ ಪ್ರಮಾಣ ಹೆಚ್ಚಿಸಿದ ಪರಿಣಾಮ ಈ ಚೇತರಿಕೆ ದಾಖಲಾಗಿದೆ.
ಮಂಗಳವಾರದ ಪೇಟೆಯ ವಹಿವಾಟಿನಲ್ಲಿ ಸೆನ್ಸೆಕ್ಸ್ 917.07 ಅಂಶ (2.30%) ಏರಿಕೆ ದಾಖಲಿಸಿ 40,789.38ರಲ್ಲಿ ವಹಿವಾಟು ಮುಗಿಸಿದೆ. ಇಂಟ್ರಾ ಡೇ ವಹಿವಾಟಿನಲ್ಲಿ ಸೆನ್ಸೆಕ್ಸ್ ಗರಿಷ್ಠ 40,818.94 ಅಂಶದ ತನಕ ಏರಿಕೆ ದಾಖಲಿಸಿತು. ಇದೇ ರೀತಿ ನಿಫ್ಟಿ 271.75 ಅಂಶ(2.32%) ಏರಿಕೆ ದಾಖಲಿಸಿ 11,979.65ರಲ್ಲಿ ವಹಿವಾಟು ಮುಗಿಸಿದೆ.
ಸೆನ್ಸೆಕ್ಸ್ ಪಟ್ಟಿಯಲ್ಲಿ ಟೈಟಾನ್ ಷೇರುಗಳು 7.97 ಶೇಕಡ ಏರಿಕೆ ಕಂಡರೆ, ಐಟಿಸಿ, ಎಚ್ಡಿಎಫ್ಸಿ, ಬಜಾಜ್ ಫೈನಾನ್ಸ್, ಟಾಟಾ ಸ್ಟೀಲ್ ಷೇರುಗಳು ಕೂಡ ಏರಿಕೆ ದಾಖಲಿಸಿದವು. ಇದೇ ವೇಳೆ, ಬಜಾಜ್ ಆಟೋ, ಎಚ್ಯುಎಲ್ ಷೇರುಗಳು ನಷ್ಟ ಅನುಭವಿಸಿದವು.
ಕರೆನ್ಸಿ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 16 ಪೈಸೆ ಏರಿಕೆ ಕಂಡು 71.22ರಲ್ಲಿ ವಹಿವಾಟು ಮುಗಿಸಿದೆ. (ಏಜೆನ್ಸೀಸ್)