ಮುಂಬೈ: ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ಸೂಚ್ಯಂಕ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್(ಎನ್ಎಸ್ಇ) ಸೂಚ್ಯಂಕ ನಿಫ್ಟಿ ಸೋಮವಾರ ದಿನದ ವಹಿವಾಟನ್ನು ಏರಿಳಿತಗಳೊಂದಿಗೆ ಮಿಶ್ರಫಲದೊಂದಿಗೆ ಮುಕ್ತಾಯಗೊಳಿಸಿವೆ.
ಮೂವತ್ತು ಷೇರುಗಳ ಸೆನ್ಸೆಕ್ಸ್ ದಿನದ ವಹಿವಾಟನ್ನು 80 ಅಂಶ ಏರಿಕೆಯೊಂದಿಗೆ ಆರಂಭಿಸಿತ್ತು. ಬಳಿಕ ಭಾರಿ ಏರಿಳಿತ ದಾಖಲಿಸಿಕೊಂಡು ಕೊನೆಗೆ ಶೇಕಡ 0.02 ಅಥವಾ 8.36 ಅಂಶಗಳ ಏರಿಕೆಯೊಂದಿಗೆ 40,802.17ರಲ್ಲಿ ವಹಿವಾಟು ಮುಗಿಸಿದೆ. ದಿನದ ನಡುವೆ ಈ ಸೂಚ್ಯಂಕ 41,093.99 ಮತ್ತು 40,707.63ರ ಮಧ್ಯೆ ತೂಗಾಡುತ್ತ ವಹಿವಾಟು ನಡೆಸಿತ್ತು.
ಇನ್ನೊಂದೆಡೆ ನಿಫ್ಟಿ, ಬೆಳಗ್ಗೆ ವಹಿವಾಟು ಆರಂಭವಾದಾಗ 25.35 ಅಂಶಗಳ ಏರಿಕೆ ಅಥವಾ ಶೇಕಡ 0.21 ಅಂಶ ಏರಿಕೆಯೊಂದಿಗೆ 12,081,4ರಲ್ಲಿ ವಹಿವಾಟು ಶುರುಮಾಡಿತ್ತು. ನಂತರ, ವಹಿವಾಟಿನ ಕೊನೆಗೆ ಶೇಕಡ 7.85 ಅಂಶ ಇಳಿಕೆಯೊಂದಿಗೆ 12,048.2ರಲ್ಲಿ ವಹಿವಾಟು ಕೊನೆಗೊಳಿಸಿದೆ.
ಸೆನ್ಸೆಕ್ಸ್ ನಲ್ಲಿ ಭಾರ್ತಿ ಏರ್ಟೆಲ್ ಷೇರುಗಳು ಗರಿಷ್ಠ ಏರಿಕೆ ದಾಖಲಿಸಿದರೆ, ರಿಲಯನ್ಸ್, ಏಷ್ಯನ್ ಪೇಂಟ್ಸ್, ಕೋಟಕ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್ ಷೇರುಗಳು ಗರಿಷ್ಠ ಶೇಕಡ 4.17 ಏರಿಕೆ ದಾಖಲಿಸಿವೆ.
ಇನ್ನೊಂದೆಡೆ, ಯೆಸ್ ಬ್ಯಾಂಕ್ ಷೇರುಗಳು ಗರಿಷ್ಠ ಇಳಿಕೆ ದಾಖಲಿಸಿದ್ದು, ಬಜಾಜ್ ಫೈನಾನ್ಸ್, ಒಎನ್ಜಿಸಿ, ಸನ್ ಫಾರ್ಮಾ, ಟಾಟಾ ಸ್ಟೀಲ್, ಮಾರುತಿ ಷೇರುಗಳು ಶೇಕಡ 6.22ರ ತನಕ ಇಳಿಕೆ ಕಂಡಿವೆ. (ಏಜೆನ್ಸೀಸ್)