ಮತ್ತೆ ಕುಸಿದ ಷೇರು ಮಾರುಕಟ್ಟೆ

ನವದೆಹಲಿ: ಅಮೆರಿಕದ ಫೆಡರಲ್ ಬ್ಯಾಂಕ್ ನಿರೀಕ್ಷೆಯಂತೆ ಬಡ್ಡಿದರವನ್ನು ಶೇ. 0.25 ಕಡಿತಗೊಳಿಸಿದ್ದು, ಇದರ ನಕಾರಾತ್ಮಕ ಪರಿಣಾಮ ಜಾಗತಿಕ ಷೇರುಮಾರುಕಟ್ಟೆಗಳ ಮೇಲೆ ಉಂಟಾಗಿದೆ. ಗುರುವಾರ ಭಾರತದ ಷೇರು ಮಾರುಕಟ್ಟೆ ಮತ್ತೆ ಕುಸಿತ ಕಂಡಿದೆ. ಸೆನ್ಸೆಕ್ಸ್​ನಲ್ಲಿ 470.41 (ಶೇ. 1.29) ಪತನವಾಗಿದ್ದು, ದಿನದ ವಹಿವಾಟಿನ ಅಂತ್ಯಕ್ಕೆ 36,093.47ಕ್ಕೆ ಸ್ಥಿರಗೊಂಡಿದೆ. ನಿಫ್ಟಿ 135.85 ಅಂಶ (ಶೇ.1.25) ಕುಸಿತವಾಗಿದ್ದು, 10,704.80ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದೆ.

ಫೆಡರಲ್ ಬ್ಯಾಂಕ್ ಬಡ್ಡಿದರ ಇನ್ನಷ್ಟು ಇಳಿಸುವ ಸಾಧ್ಯತೆ ಇದೆಯಾದರೂ, ಬ್ಯಾಂಕ್ ಸದಸ್ಯರ ನಡುವೆ ಸರ್ವಾನುಮತವಿಲ್ಲ ಎಂದು ತಿಳಿದುಬಂದಿದೆ. ಯೆಸ್ ಬ್ಯಾಂಕ್ ಷೇರು ಶೇ 15.52 ಗರಿಷ್ಠ ನಷ್ಟ ಕಂಡಿದೆ. ಇಂಡಸ್​ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಶೇ3.59ರವರೆಗೆ ಇಳಿಕೆ ಕಂಡಿವೆ. ಟಾಟಾ ಸ್ಟೀಲ್, ಮಾರುತಿ, ಎಸ್​ಬಿಐ, ರಿಲಯನ್ಸ್, ಟೆಕ್ ಮಹೀಂದ್ರಾ, ಒನ್​ಜಿಸಿ, ಬಜಾಜ್ ಫೈನಾನ್ಸ್, ಹೀರೊ ಮೋಟೊಕಾರ್ಪ್ ಮತ್ತು ಟಿಸಿಎಸ್ ಶೇ 3.66ರವರೆಗೂ ಇಳಿಕೆಯಾಗಿವೆ. ಡಾಲರ್ ಎದುರು ರೂಪಾಯಿ ಮೌಲ್ಯ 10 ಪೈಸೆ ತಗ್ಗಿದೆ. ವಹಿವಾಟಿನ ಅಂತ್ಯಕ್ಕೆ ಡಾಲರ್ ಎದುರು ರೂಪಾಯಿ 71.34ಕ್ಕೆ ಮುಟ್ಟಿದೆ. ಕುಸಿತದಿಂದಾಗಿ ಹೂಡಿಕೆದಾರರು ಅಂದಾಜು 1.50 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಮಂಗಳವಾರ ಕೂಡ ಸೆನ್ಸೆಕ್ಸ್ 642.22 ಅಂಶ ಹಾಗೂ ನಿಫ್ಟಿ 185.90 ಅಂಶ ಕುಸಿತಕಂಡಿತ್ತು.

ಕುಸಿತಕ್ಕೆ ಕಾರಣಗಳೇನು?

  • ತೆರಿಗೆ ಸಂಗ್ರಹ ಇಳಿಕೆ: 2019ನೇ ಆರ್ಥಿಕ ವರ್ಷದಲ್ಲಿ ಶೇ. 17.5 ಹೆಚ್ಚುವರಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿತ್ತು. ಆದರೆ ಪ್ರಸಕ್ತ ಸಮಯದವರೆಗೆ ಸರ್ಕಾರ ಕೇವಲ ಶೇ 4.7 ತೆರಿಗೆ ಸಂಗ್ರಹಿಸಿದೆ.
  • ಹೊಸ ನಿರ್ಧಾರ ಇಲ್ಲ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ನಡೆಸಿದ ಸಭೆಯಲ್ಲಿ ಆರ್ಥಿಕತೆ ಉತ್ತೇಜನಕ್ಕೆ ಯಾವುದೇ ಪ್ರಮುಖ ಪ್ರಕಟಣೆ ಘೋಷಣೆ ಮಾಡಿಲ್ಲ.
  • ವಿದೇಶಿ ಹೂಡಿಕೆದಾರದಿಂದ ಮಾರಾಟ: ವಿದೇಶಿ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಷೇರುಗಳನ್ನು ಮಾರಾಟ ಮಾಡಿದ್ದಾರೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್​ಐಐ) ಕಳೆದ ಮೂರು ವಹಿವಾಟಿನಲ್ಲಿ 1,850 ಕೋಟಿ ರೂ. ಮೌಲ್ಯದ ಷೇರುಗಳ ಮಾರಾಟ ಮಾಡಿದ್ದು, ಷೇರು ಮಾರುಕಟ್ಟೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.

Leave a Reply

Your email address will not be published. Required fields are marked *