More

  ಹಾಸ್ಟೆಲ್​ಗಳಲ್ಲಿ ಅಕ್ರಮವಾಸಿಗಳು; ಬೆಂವಿವಿಯಲ್ಲಿ ಮುಗಿಯದ ಸಮಸ್ಯೆ, ಶೇ. 20 ಮಂದಿ ಅನಧಿಕೃತ ವಾಸ್ತವ್ಯ  

  ಬೆಂಗಳೂರು ವಿಶ್ವವಿದ್ಯಾಲಯದ ಹಾಸ್ಟೆಲ್​ಗಳಲ್ಲಿ ಅಕ್ರಮ ವಾಸಿಗಳದ್ದೇ ದರ್ಬಾರಾಗಿದೆ. ಕಾನೂನುಬಾಹಿರವಾಗಿ ಹಾಸ್ಟೆಲ್​ನಲ್ಲಿ ಉಳಿದುಕೊಂಡಿರುವ ಇವರನ್ನು ಅಧಿಕಾರಿಗಳು ಪ್ರಶ್ನಿಸುವ ಧೈರ್ಯ ಮಾಡುತ್ತಿಲ್ಲ. ಇವರಿಗೂ ಉಚಿತ ವಸತಿ, ಊಟ ಎಲ್ಲವೂ ಸಿಗುತ್ತಿದೆ!

  ಜ್ಞಾನಭಾರತಿ ಆವರಣದಲ್ಲಿ 7 ಹಾಸ್ಟೆಲ್​ಗಳಿದ್ದು, 1,785 ಪುರುಷರು ಹಾಗೂ 1 ಲೇಡಿಸ್ ಹಾಸ್ಟೆಲ್​ನಲ್ಲಿ 183 ವಿದ್ಯಾರ್ಥಿನಿಯರಿದ್ದಾರೆ. ಒಟ್ಟು 1,968 ವಿದ್ಯಾರ್ಥಿಗಳ ಹೊರತಾಗಿ ಶೇ.20 ಮಂದಿ ಅಕ್ರಮವಾಸಿಗಳು ಎಂದು ತಿಳಿದುಬಂದಿದೆ. ನಿಖರವಾಗಿ ತಿಳಿಸಲು ವಿಶ್ವವಿದ್ಯಾಲಯ ಯಾವುದೇ ಸಮೀಕ್ಷೆ ಮಾಡದಿರುವುದರಿಂದ ವಿದ್ಯಾರ್ಥಿಗಳ ಆಧಾರದ ಮೇಲೆ ಈ ಮಾಹಿತಿ ಕ್ರೋಢೀಕರಣ ಮಾಡಲಾಗಿದೆ.

  ಅಕ್ರಮವಾಸಿಗಳನ್ನು ಪತ್ತೆ ಹಚ್ಚುವುದು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ತಲೆನೋವು ಮತ್ತು ಸಮಸ್ಯೆಯ ಕೆಲಸವಾಗಿದೆ. ಇದರಿಂದಾಗಿಯೇ ಇದುವರೆಗೂ ಯಾವ ಕುಲಪತಿಯೂ ಅಕ್ರಮವಾಸಿಗಳ ಪತ್ತೆಗೆ ಮುಂದಾಗಿಲ್ಲ, ಕ್ರಮವನ್ನೂ ತೈಗೊಂಡಿಲ್ಲ. ಒಮ್ಮೆ ಗುರುತಿಸಿದರೂ ಅವರನ್ನು ಹೊರಹಾಕುವುದು ಸುಲಭದ ಕೆಲಸವಲ್ಲ ಎಂಬುದು ಅವರಿಗೂ ತಿಳಿದಿದೆ.

  ಗಲಾಟೆಗಳ ತಾಣ: ಬೆಂ.ವಿವಿ ಕಳೆದ ಒಂದು ವಾರದ ಹಿಂದಷ್ಟೇ ಬರ್ತ್​ಡೇ ಪಾರ್ಟಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿ ಪೊಲೀಸರು ಕೆಲವು ಹಾಸ್ಟೆಲ್ ವಿದ್ಯಾರ್ಥಿಗಳನ್ನು ಬಂಧಿಸಿದ್ದರು. ಈ ರೀತಿ ಸಣ್ಣಪುಟ್ಟ ಗಲಾಟೆಗಳು ನಡೆಯುತ್ತಲೇ ಇರುತ್ತವೆ. ಜೂನಿಯರ್​ಗಳು ಸುಮ್ಮನಿದ್ದರೂ ಹಳೇ ವಿದ್ಯಾರ್ಥಿಗಳು ತಮ್ಮ ವರ್ಚಸ್ಸು ತೋರಿಸುವ ಉದ್ದೇಶದಿಂದ ಗಲಾಟೆ ಸನ್ನಿವೇಶಗಳನ್ನು ಸೃಷ್ಟಿಸುತ್ತಲೇ ಇರುತ್ತಾರೆ.

  ಅಧಿಕಾರಿಗಳಿಗೂ ಭಯ

  ಪ್ರತಿ ಹಾಸ್ಟೆಲ್​ನಲ್ಲೂ ವಾರ್ಡನ್​ಗಳಿದ್ದಾರೆ. ಆದರೆ, ಅವರು ನೆಪ ಮಾತ್ರ. ಏಕೆಂದರೆ, ಇವರ ಮಾತುಗಳನ್ನು ಯಾವ ವಿದ್ಯಾರ್ಥಿಯೂ ಕೇಳುವುದಿಲ್ಲ. ಏರುಧ್ವನಿಯಲ್ಲಿ ಮಾತನಾಡಿದರೆ ಮುಂದಾಗುವ ಅನಾಹುತಕ್ಕೆ ವಾರ್ಡನ್​ಗಳನ್ನೇ ಹೊಣೆ ಆಗುವಂತೆ ಸಂದರ್ಭಗಳನ್ನು ವಿದ್ಯಾರ್ಥಿಗಳು ಸೃಷ್ಟಿಸುತ್ತಾರೆ. ಕೆಲವು ವಿದ್ಯಾರ್ಥಿಗಳು ಕಾನೂನು ವ್ಯಾಪ್ತಿಯಲ್ಲಿ ಬಾರದ ಕೆಲವು ಕೆಲಸಗಳನ್ನು ಮಾಡಿಕೊಡುವಂತೆ ಉನ್ನತಾಧಿಕಾರಿಗೆ ಒತ್ತಡ ಹಾಕವುದೂ ಉಂಟು. ಇದಕ್ಕೆ ಅವರು ಒಪ್ಪದಿದ್ದಾಗ ಊಟದಲ್ಲಿ ಹಲ್ಲಿ ಇದೆ, ಕೂದಲು ಇದೆ ಎಂದು ವಿಷಯ ಹಬ್ಬಿಸಿ ಗಲಾಟೆ ಮಾಡುತ್ತಾರೆ ಎಂದು ಉನ್ನತಾಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ಜೂನಿಯರ್​ಗಳ ಗೋಳು

  ಹಾಸ್ಟೆಲ್​ನ ಕೊಠಡಿಯಲ್ಲಿ ಇರಬೇಕಾದ ವಿದ್ಯಾರ್ಥಿಗಳಿಗಿಂತ ಹೆಚ್ಚಿನವರಿದ್ದು, ಹಳೇ ವಿದ್ಯಾರ್ಥಿಗಳು ಮತ್ತು ಅಕ್ರಮ ವಿದ್ಯಾರ್ಥಿಗಳ ನಡುವೆ ಮುಸುಕಿನ ಗುದ್ದಾಟಗಳು ನಡೆಯುತ್ತಲೇ ಇರುತ್ತದೆ. ಸಣ್ಣಪುಟ್ಟ ಕಳ್ಳತನ, ಮಧ್ಯರಾತ್ರಿ ಬಂದು ಬಾಗಿಲು ತಟ್ಟುವುದು ಇವೆಲ್ಲ ನಡೆಯುತ್ತಲೇ ಇರುತ್ತವೆ. ಇದರ ವಿರುದ್ಧ ಧ್ವನಿ ಎತ್ತಬೇಕಾದರೆ ವಿದ್ಯಾರ್ಥಿ ಸಂಘ ಬೇಕು. ಅದರೆ, ಆ ಸಂಘ ಎಂಬ ರಾಜಕೀಯಕ್ಕೆ ಹೋಗಲು ಇಷ್ಟವಿಲ್ಲದೆ ಸುಮ್ಮನೆ ಅನುಭವಿಸುತ್ತಿದ್ದೇವೆ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಹೊಸ ವಿದ್ಯಾರ್ಥಿಗಳು.

  ಆಕ್ಸಸ್ ಐಡಿ ಕಾರ್ಡ್!

  ಹಾಸ್ಟೆಲ್​ಗೆ ಪ್ರವೇಶ ಪಡೆದುಕೊಂಡಿರುವ ವಿದ್ಯಾರ್ಥಿಗಳಿಗೆ ಭಾವಚಿತ್ರವುಳ್ಳ ಗುರುತಿನ ಕಾರ್ಡ್ ನೀಡಲು ವಿವಿಯು 2016ರಲ್ಲೇ ಯೋಜನೆ ರೂಪಿಸಿತ್ತು. ಆದರೆ, ಇದು ಈವರೆಗೆ ಅನುಷ್ಠಾನವಾಗಿಲ್ಲ. ಇದೀಗ ಮತ್ತೆ ಬಯೋಮೆಟ್ರಿಕ್ ಆಕ್ಸಸ್ ಇಟ್ಟು ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕಾರ್ಡ್ ನೀಡುತ್ತೇವೆ. ಆ ಮೂಲಕ ಅಕ್ರಮವಾಗಿ ನೆಲೆಸಿರುವವರನ್ನು ಗುರುತಿಸಿ ಹೊರ ಹಾಕುತ್ತೇವೆ ಎಂದು ಬೆಂವಿವಿ ಕುಲಪತಿ ಡಾ.ಕೆ.ಆರ್. ವೇಣುಗೋಪಾಲ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಆದರೆ, ಇದು ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತದೆ ಎಂಬುದು ಕಾದುನೋಡಬೇಕಿದೆ.

  | ದೇವರಾಜ್ ಎಲ್. ಬೆಂಗಳೂರು 

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts