ಐಪಿಎಲ್​ನಲ್ಲಿ ದಿಗ್ಗಜರ ಮಾರ್ಗದರ್ಶನ

ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್, ಆಟಗಾರರ ಪಾಲಿಗೆ ಭಾಗ್ಯದ ಬಾಗಿಲು ತೆಗೆಯುವುದು ಮಾತ್ರವಲ್ಲ, ಆಯಾ ತಂಡಗಳ ಸಿಬ್ಬಂದಿಗೂ ಇದು ಜಾಕ್​ಪಾಟ್ ಟೂರ್ನಿ. ಇಪಿಎಲ್, ಲಾ ಲೀಗಾ ಹಾಗೂ ಎನ್​ಎಫ್​ಎಲ್ ಟೂರ್ನಿಗಳಲ್ಲಿ ಇರುವಂಥ ಕೋಚಿಂಗ್ ಸ್ಟಾ್ಯಂಡರ್ಡ್​ಅನ್ನು ಐಪಿಎಲ್ ತಂಡಗಳೂ ಹೊಂದಿವೆ. ಎರಡು ತಿಂಗಳ ಅವಧಿಯಲ್ಲಿ ನಡೆಯಲಿರುವ ಲೀಗ್ ಇದಾಗಿದ್ದರೂ, ಒಂದು ವರ್ಷಕ್ಕಾಗುವಷ್ಟು ಹಣವನ್ನು ಸಿಬ್ಬಂದಿ ಇಲ್ಲಿ ಮಾಡಬಹುದು. ಹಣದ ವಿಚಾರದಲ್ಲಿ ಮಾತ್ರವಲ್ಲ, ಟೀಮ್ ಫ್ಯಾನ್​ಬೇಸ್​ಅನ್ನು ಬಲಪಡಿಸಲೂ ಫ್ರಾಂಚೈಸಿಗಳು ದಿಗ್ಗಜ ಮಾಜಿ ಆಟಗಾರರನ್ನೇ ತಂಡದ ಸಿಬ್ಬಂದಿ ಬಳಗದಲ್ಲಿಟ್ಟುಕೊಂಡಿವೆ. ಅದಕ್ಕೆ ಅತಿದೊಡ್ಡ ಉದಾಹರಣೆ ಮುಂಬೈ ಇಂಡಿಯನ್ಸ್. ಸಚಿನ್ ತೆಂಡುಲ್ಕರ್ ಕ್ರಿಕೆಟ್​ನಿಂದ ನಿವೃತ್ತರಾದರೂ, ‘ಅಮ್ಚಿ ಮುಂಬೈ’ ಬ್ರಾ್ಯಂಡ್ ಉಳಿಸಿಕೊಳ್ಳುವ ಸಲುವಾಗಿ ಸಚಿನ್​ರನ್ನು ತಂಡದ ಐಕಾನ್ ಆಗಿ ಮುಂದುವರಿಸಿದೆ. ಒಂದು ಕಾಲದಲ್ಲಿ ವಿಶ್ವ ಕ್ರಿಕೆಟ್​ನಲ್ಲಿ ಸಾಕಷ್ಟು ಹೆಸರಿದ್ದ ಆಟಗಾರರಾದ ಸವ್ಯಸಾಚಿ ಜಾಕ್ಸ್ ಕಾಲಿಸ್, ನ್ಯೂಜಿಲೆಂಡ್​ನ ಯಶಸ್ವಿ ನಾಯಕರಲ್ಲಿ ಒಬ್ಬರಾದ ಸ್ಟೀಫನ್ ಫ್ಲೆಮಿಂಗ್, ಗರಿಷ್ಠ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಎನಿಸಿಕೊಂಡಿರುವ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್, 2011ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ತಂಡದ ಕೋಚ್ ಆಗಿದ್ದ ಗ್ಯಾರಿ ಕರ್ಸ್ಟನ್ ಈ ಬಾರಿ ವಿವಿಧ ತಂಡಗಳ ಮಾರ್ಗದರ್ಶಕರಾಗಿದ್ದಾರೆ. ಭಾರತದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಸೌರವ್ ಗಂಗೂಲಿ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್ ಆಗಿದ್ದಾರೆ. ಆ ಮೂಲಕವಾದರೂ ಡೆಲ್ಲಿ ತಂಡದ ಆಟದಲ್ಲಿ ಉತ್ಸಾಹ ಕಾಣಬಹುದೇನೋ ಎನ್ನುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಕೋಚ್ ಮೈಕ್ ಹೆಸನ್, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮುಖ್ಯ ಕೋಚ್ ಸ್ಥಾನದೊಂದಿಗೆ ಐಪಿಎಲ್ ಕಣಕ್ಕೆ ಇಳಿಯಲಿದ್ದಾರೆ. 2015ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಮೊಟ್ಟಮೊದಲ ಬಾರಿಗೆ ಫೈನಲ್​ಗೇರಿಸಿದ ಹೆಮ್ಮೆ ಇವರದು. ಅಂತಾರಾಷ್ಟ್ರೀಯ ಕ್ರಿಕೆಟ್ ಯಶಸ್ಸನ್ನು ಫ್ರಾಂಚೈಸಿ ಲೀಗ್​ಗಳಲ್ಲೂ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಕಳೆದ ವರ್ಷ ಸಿಬ್ಬಂದಿಯಾಗಿದ್ದ ವೀರೇಂದ್ರ ಸೆಹ್ವಾಗ್, ಮಿಥುನ್ ಮನ್ಹಾಸ್ ಈ ಬಾರಿ ಸ್ಥಾನ ಕಳೆದುಕೊಂಡಿದ್ದು, ಬ್ಯಾಟಿಂಗ್ ಕೋಚ್ ಆಗಿ ಶ್ರೀಧರನ್ ಶ್ರೀರಾಮ್ನ್ನು ನೇಮಕ ಮಾಡಿದ್ದು ಅಚ್ಚರಿ ತಂದಿದೆ.

# ಮುಖ್ಯ ಕೋಚ್: ಮೈಕ್ ಹೆಸನ್
# ಬ್ಯಾಟಿಂಗ್ ಕೋಚ್: ಶ್ರೀಧರನ್ ಶ್ರೀರಾಮ್
# ಬೌಲಿಂಗ್ ಕೋಚ್: ರ್ಯಾನ್ ಹ್ಯಾರಿಸ್
# ಫೀಲ್ಡಿಂಗ್ ಕೋಚ್: ಕ್ರೇಗ್ ಮೆಕ್​ವಿುಲನ್.

ಡೆಲ್ಲಿ ಕ್ಯಾಪಿಟಲ್ಸ್

ವಿಶ್ವ ಕ್ರಿಕೆಟ್​ನ ‘ಡೆಡ್ಲಿ ಕಾಂಬಿನೇಷನ್’ ಎನಿಸಿಕೊಂಡಿರುವ ಜೋಡಿ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಿಬ್ಬಂದಿಯಾಗಿದ್ದಾರೆ. ಆಕ್ರಮಣಶೀಲ ನಾಯಕತ್ವದಿಂದಲೇ ಪರಿಚಿತರಾಗಿದ್ದ ಸೌರವ್ ಗಂಗೂಲಿ ಈ ಬಾರಿ ತಂಡದ ಮೆಂಟರ್ ಆಗಿದ್ದರೆ, ರಿಕಿ ಪಾಂಟಿಂಗ್ ಸತತ 2ನೇ ವರ್ಷ ತಂಡದ ಮುಖ್ಯ ಕೋಚ್ ಜವಾಬ್ದಾರಿ ನಿಭಾಯಿಸಲಿದ್ದಾರೆ. 2014ರಿಂದ 2016ರವರೆಗೆ ಮುಂಬೈ ತಂಡದ ಕೋಚ್ ಆಗಿದ್ದ ಪಾಂಟಿಂಗ್, 2015ರಲ್ಲಿ ಮುಂಬೈ ಐಪಿಎಲ್ ಟ್ರೋಫಿ ಗೆಲ್ಲಲು ಕಾರಣರಾಗಿದ್ದರು. ಗುಜರಾತ್ ಲಯನ್ಸ್ ತಂಡಕ್ಕೆ ಸಹಾಯಕ ಕೋಚ್ ಆಗಿದ್ದ ಮೊಹಮದ್ ಕೈಫ್ ಈ ಬಾರಿ ಡೆಲ್ಲಿ ಕೂಡಿದ್ದಾರೆ. ಅವರೊಂದಿಗೆ ವೇಗದ ಬೌಲಿಂಗ್ ಕೋಚ್ ಆಗಿ ಆಸ್ಟ್ರೇಲಿಯಾದ ಜೇಮ್್ಸ ಹೋಪ್ಸ್ ಇರುವುದು ಡೆಲ್ಲಿಯ ಬಲವೆನಿಸಿದೆ.

# ಟೀಮ್ ಮೆಂಟರ್: ಸೌರವ್ ಗಂಗೂಲಿ
# ಮುಖ್ಯ ಕೋಚ್: ರಿಕಿ ಪಾಂಟಿಂಗ್
# ಸಹಾಯಕ ಕೋಚ್: ಮೊಹಮದ್ ಕೈಫ್
# ಟ್ಯಾಲೆಂಟ್ ಸ್ಕೌಟ್: ಪ್ರವೀಣ್ ಆಮ್ರೆ
# ವೇಗದ ಬೌಲಿಂಗ್ ಕೋಚ್: ಜೇಮ್್ಸ ಹೋಪ್ಸ್.

ಚೆನ್ನೈ ಸೂಪರ್ ಕಿಂಗ್ಸ್

2008ರಿಂದಲೂ ಚೆನ್ನೈ ಸೂಪರ್ ಕಿಂಗ್ಸ್​ನ ಅವಿಭಾಜ್ಯ ಅಂಗವಾಗಿರುವ ಸ್ಟೀಫನ್ ಫ್ಲೆಮಿಂಗ್, ಮೊದಲು ಆಟಗಾರನಾಗಿ ಬಳಿಕ ಕೋಚ್ ಆಗಿ ಮುಂದುವರಿದಿದ್ದಾರೆ. ಚೆನ್ನೈ ಐಪಿಎಲ್​ನಿಂದ ಅಮಾನತಾಗಿದ್ದಾಗ ಪುಣೆ ಸೂಪರ್​ಜೈಂಟ್ಸ್​ನ ಕೋಚ್ ಆಗಿ ನೇಮಕವಾಗಿದ್ದರು. ಸ್ಟಾರ್ ನಾಯಕ ಎಂಎಸ್ ಧೋನಿ ಹಾಗೂ ಫ್ಲೆಮಿಂಗ್​ನ ನಡುವಿರುವ ತಾಳಮೇಳ ತಂಡದ ಬಹುದೊಡ್ಡ ಯಶಸ್ಸಿಗೆ ಕಾರಣವಾಗಿದೆ. ಚೆನ್ನೈ ಪರವಾಗಿ ಆಡಿದ ಬಳಿಕ 2018ರಿಂದ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದ ಕೋಚ್​ಗಳಾಗಿ ಮೈಕ್ ಹಸ್ಸೆ ಹಾಗೂ ಲಕ್ಷ್ಮೀಪತಿ ಬಾಲಾಜಿ ನೇಮಕವಾಗಿದ್ದಾರೆ.

# ಮುಖ್ಯ ಕೋಚ್: ಸ್ಟೀಫನ್ ಫ್ಲೆಮಿಂಗ್
# ಬ್ಯಾಟಿಂಗ್ ಕೋಚ್: ಮೈಕ್ ಹಸ್ಸೆ
# ಬೌಲಿಂಗ್ ಕೋಚ್: ಲಕ್ಷ್ಮೀಪತಿ ಬಾಲಾಜಿ
# ಬೌಲಿಂಗ್ ಸಲಹೆಗಾರ: ಎರಿಕ್ ಸಿಮನ್ಸ್.

ಸನ್​ರೈಸರ್ಸ್ ಹೈದರಾಬಾದ್

2013ರಿಂದ ಸನ್​ರೈಸರ್ಸ್ ಹೈದರಾಬಾದ್ ತಂಡದ ಕೋಚ್ ಆಗಿರುವ ಟಾಮ್ ಮೂಡಿ, ಚಾಣಾಕ್ಷ ತಂತ್ರಗಾರ. ಪ್ರತಿ ಋತುವಿನಲ್ಲೂ ತಂಡವನ್ನು ಇನ್ನಷ್ಟು ಎತ್ತರಕ್ಕೆ ಏರಿಸುತ್ತಿರುವ ಮೂಡಿ, ಹಲವು ಬಾರಿ ಭಾರತ ರಾಷ್ಟ್ರೀಯ ತಂಡದ ಕೋಚ್ ಸ್ಥಾನಕ್ಕೂ ಅರ್ಜಿ ಹಾಕಿದ್ದರು. ಸನ್​ರೈಸರ್ಸ್ ಪರವಾಗಿ 6 ವರ್ಷ ಕೋಚ್ ಆಗಿರುವ ಮೂಡಿ, 4 ಬಾರಿ ತಂಡವನ್ನು ಪ್ಲೇ ಆಫ್​ಗೆ ಏರಿಸಿದ್ದರೆ, 2016ರಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಪ್ರಮುಖ ಆಟಗಾರ ಡೇವಿಡ್ ವಾರ್ನರ್ ಅನುಪಸ್ಥಿತಿಯಲ್ಲೂ 2018ರಲ್ಲಿ ತಂಡ ರನ್ನರ್​ಅಪ್ ಆಗಿತ್ತು. ಮುತ್ತಯ್ಯ ಮುರಳೀಧರನ್, ವಿವಿಎಸ್ ಲಕ್ಷ್ಮಣ್, ಬಿಬಿಎಲ್​ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಕೋಚ್ ಆಗಿದ್ದ ಸಿಮೋನ್ ತಂಡದ ಮತ್ತಷ್ಟು ಬಲವಾಗಿದ್ದಾರೆ.

# ಮೆಂಟರ್: ವಿವಿಎಸ್ ಲಕ್ಷ್ಮಣ್
# ಮುಖ್ಯ ಕೋಚ್: ಟಾಮ್ ಮೂಡಿ
# ಸಹಾಯಕ ಕೋಚ್: ಸಿಮೋನ್ ಹೆಲ್ಮೊಟ್
# ಬೌಲಿಂಗ್ ಕೋಚ್: ಮುತ್ತಯ್ಯ ಮುರಳೀಧರನ್.

ಆರ್​ಸಿಬಿ

ಅತೀ ಕಡಿಮೆ ಕೋಚಿಂಗ್ ಸಿಬ್ಬಂದಿ ಹೊಂದಿರುವ ತಂಡ ಆರ್​ಸಿಬಿ. ಕೋಚ್ ಹಾಗೂ ಮೆಂಟರ್ ಜವಾಬ್ದಾರಿಯನ್ನು ಟೀಮ್ ಇಂಡಿಯಾದ ಯಶಸ್ವಿ ಕೋಚ್ ಗ್ಯಾರಿ ಕರ್ಸ್ಟನ್ ಹೊತ್ತುಕೊಂಡಿದ್ದರೆ, ಬೌಲಿಂಗ್ ಕೋಚ್ ಆಗಿ ಆಶಿಶ್ ನೆಹ್ರಾ ಮುಂದುವರಿದಿದ್ದಾರೆ. 8 ವರ್ಷಗಳ ಕಾಲ ಆರ್​ಸಿಬಿ ಕೋಚ್ ಆಗಿದ್ದ ಡೇನಿಯಲ್ ವೆಟ್ಟೋರಿ ಸ್ಥಾನಕ್ಕೆ ಈ ಬಾರಿ ಗ್ಯಾರಿ ಬಂದಿದ್ದಾರೆ. ಕಳೆದ ವರ್ಷ ತಂಡದ ಸಹಾಯಕ ಕೋಚ್ ಆಗಿದ್ದ ಗ್ಯಾರಿ ಈ ಬಾರಿ ತಮ್ಮ ಮುಂದಾಳತ್ವದಲ್ಲಿ ಆರ್​ಸಿಬಿಗೆ ಟ್ರೋಫಿ ಗೆಲ್ಲಿಸುವ ಜವಾಬ್ದಾರಿ ಹೊತ್ತಿದ್ದಾರೆ.

# ಮುಖ್ಯ ಕೋಚ್ ಮತ್ತು ಮೆಂಟರ್: ಗ್ಯಾರಿ ಕರ್ಸ್ಟನ್
# ಬೌಲಿಂಗ್ ಕೋಚ್: ಆಶಿಶ್ ನೆಹ್ರಾ.

ಮುಂಬೈ ಇಂಡಿಯನ್ಸ್

ಐಪಿಎಲ್​ನಲ್ಲಿ ಅತ್ಯಂತ ಘಟಾನುಘಟಿ ಸಿಬ್ಬಂದಿ ಹೊಂದಿರುವ ತಂಡ ಮುಂಬೈ ಇಂಡಿಯನ್ಸ್. 2017ರಲ್ಲಿ ರಿಕಿ ಪಾಂಟಿಂಗ್​ರಿಂದ ತೆರವಾದ ಮುಖ್ಯ ಕೋಚ್ ಸ್ಥಾನವನ್ನು ಶ್ರೀಲಂಕಾದ ದಿಗ್ಗಜ ಮಹೇಲ ಜಯವರ್ಧನೆ ತುಂಬಿದ್ದಾರೆ. ಅದೇ ವರ್ಷ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಜಯವರ್ಧನೆ ಕಳೆದ ವರ್ಷ ನಿರಾಸೆ ಎದುರಿಸಿದ್ದರು. 2008ರಿಂದಲೂ ತಂಡದ ಫೀಲ್ಡಿಂಗ್ ಕೋಚ್ ಆಗಿದ್ದ ಜಾಂಟಿ ರೋಡ್ಸ್ ಸ್ಥಾನವನ್ನು ಕಳೆದ ವರ್ಷ ಜೇಮ್್ಸ ಪ್ಯಾಮ್ನೆಟ್ ತುಂಬಿದ್ದರು. ಇವರೆಲ್ಲರೊಂದಿಗೆ ಸಚಿನ್ ತೆಂಡುಲ್ಕರ್, ಜಹೀರ್ ಖಾನ್, ಶೇನ್ ಬಾಂಡ್ ಹಾಗೂ ರಾಬಿನ್ ಸಿಂಗ್​ರ ಬಲ ತಂಡಕ್ಕಿದೆ.

# ಐಕಾನ್ ಹಾಗೂ ಮೆಂಟರ್: ಸಚಿನ್ ತೆಂಡುಲ್ಕರ್
# ಮುಖ್ಯ ಕೋಚ್: ಮಹೇಲ ಜಯವರ್ಧನೆ
# ಕ್ರಿಕೆಟ್ ವ್ಯವಹಾರಗಳ ನಿರ್ದೇಶಕ: ಜಹೀರ್ ಖಾನ್
# ಬ್ಯಾಟಿಂಗ್ ಕೋಚ್: ರಾಬಿನ್ ಸಿಂಗ್
# ಬೌಲಿಂಗ್ ಕೋಚ್: ಶೇನ್ ಬಾಂಡ್
# ಫೀಲ್ಡಿಂಗ್ ಕೋಚ್: ಜೇಮ್್ಸ ಪ್ಯಾಮ್ನೆಟ್.

ಕೋಲ್ಕತ ನೈಟ್​ರೈಡರ್ಸ್

ಆಧುನಿಕ ಕ್ರಿಕೆಟ್​ನ ಯಶಸ್ವಿ ಆಲ್ರೌಂಡರ್ ಜಾಕ್ಸ್ ಕಾಲಿಸ್, 2015ರಲ್ಲಿ ಕೆಕೆಆರ್​ನ ಬ್ಯಾಟಿಂಗ್ ಸಲಹೆಗಾರರಾಗಿ ಸೇರಿಕೊಂಡಿದ್ದರು. ಟ್ರೆವರ್ ಬೇಲೀಸ್ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ 2016ರಲ್ಲಿ ಈ ಸ್ಥಾನ ವಹಿಸಿಕೊಂಡಿದ್ದ ಕಾಲಿಸ್, ಕೆಕೆಆರ್ ತಂಡದ ಮೊಟ್ಟಮೊದಲ ಆಸ್ಟ್ರೇಲಿಯಾ ಹೊರತಾದ ಕೋಚ್ ಎನಿಸಿಕೊಂಡಿದ್ದರು. ಈ ವರ್ಷ ಅಭಿಷೇಕ್ ನಾಯರ್​ರನ್ನು ಮೆಂಟರ್​ಅನ್ನಾಗಿ ಪ್ರಕಟಿಸಿರುವ ಕೆಕೆಆರ್, ಓಂಕಾರ್ ಸಾಳ್ವಿ ಹಾಗೂ ಕಾರ್ಲ್ ಬ್ರೋವಿಯನ್ನು ಸೇರಿಸಿಕೊಂಡಿದೆ. ಬೌಲಿಂಗ್ ಕೋಚ್ ಹೀತ್ ಸ್ಟ್ರೀಕ್ ಈ ಬಾರಿ ತಂಡದೊಂದಿಗಿಲ್ಲ.

# ಮೆಂಟರ್: ಅಭಿಷೇಕ್ ನಾಯರ್
# ಮುಖ್ಯ ಕೋಚ್: ಜಾಕ್ಸ್ ಕಾಲಿಸ್
# ಸಹಾಯಕ ಕೋಚ್: ಸ್ಟುವರ್ಟ್ ಕಾಟಿಚ್
# ಬೌಲಿಂಗ್ ಕೋಚ್: ಓಂಕಾರ್ ಸಾಳ್ವಿ
# ಸ್ಪಿನ್ ಬೌಲಿಂಗ್ ಕೋಚ್: ಕಾರ್ಲ್ ಬ್ರೋವಿ.

ರಾಜಸ್ಥಾನ ರಾಯಲ್ಸ್

2013ರಿಂದ 2105ರವರೆಗೆ ರಾಜಸ್ಥಾನ ತಂಡದ ಕೋಚ್ ಆಗಿದ್ದ ಪ್ಯಾಡಿ ಆಪ್ಟನ್ ಈ ಬಾರಿ ಮತ್ತೆ ರಾಜಸ್ಥಾನದ ಮುಖ್ಯ ಕೋಚ್ ಜವಾಬ್ದಾರಿ ವಹಿಸಿಕೊಂಡಿದ್ದರೆ, ದಿಗ್ಗಜ ಶೇನ್ ವಾರ್ನ್ ರಾಯಭಾರಿಯಾಗಿ ತಂಡಕ್ಕೆ ಸ್ಪೂರ್ತಿ ತುಂಬಲಿದ್ದಾರೆ. 2008ರಲ್ಲಿ ವಾರ್ನ್ ಸಾರಥ್ಯದಲ್ಲೇ ರಾಜಸ್ಥಾನ ಪ್ರಶಸ್ತಿ ಜಯಿಸಿತ್ತು. ಆಪ್ಟನ್ ಕೋಚ್ ಆಗಿದ್ದ ಅವಧಿಯಲ್ಲಿ ರಾಜಸ್ಥಾನ 2013ರಲ್ಲಿ ಐಪಿಎಲ್ ಸೆಮಿಫೈನಲ್ ಹಾಗೂ ಚಾಂಪಿಯನ್ಸ್ ಲೀಗ್ ಟಿ20ಯಲ್ಲಿ ಫೈನಲ್​ಗೇರಿತ್ತು. 2011ರ ಏಕದಿನ ವಿಶ್ವಕಪ್ ವೇಳೆ ಟೀಮ್ ಇಂಡಿಯಾದ ಮೆಂಟರ್ ಕಂಡೀಷನಿಂಗ್ ಕೋಚ್ ಕೂಡ ಆಗಿದ್ದರು.

# ಮುಖ್ಯ ಕೋಚ್: ಪ್ಯಾಡಿ ಆಪ್ಟನ್
# ಬ್ಯಾಟಿಂಗ್ ಕೋಚ್: ಅಮೋಲ್ ಮಜುಂದಾರ್
# ಸ್ಪಿನ್ ಬೌಲಿಂಗ್ ಕೋಚ್: ಸಾಯಿರಾಜ್ ಬಹುತುಳೆ
# ವೇಗದ ಬೌಲಿಂಗ್ ಕೋಚ್: ಸ್ಟೀಫನ್ ಜೋನಾಸ್
# ಫೀಲ್ಡಿಂಗ್ ಕೋಚ್: ದಿಶಾಂತ್ ಯಾಜ್ಞಿಕ್, ರಾಯಭಾರಿ: ಶೇನ್ ವಾರ್ನ್.