ಕದನ ವಿರಾಮ ಘೋಷಣೆ: ದೋಸ್ತಿಗೆ ಜ್ಞಾನೋದಯ, ಅಶಾಂತಿ ಬಳಿಕ ಶಾಂತಿಮಂತ್ರ

ಬೆಂಗಳೂರು: ಮುಂಗಾರು ಆಗಮನಕ್ಕೆ ಮೊದಲೇ ರಾಜ್ಯದಲ್ಲಿ ಗುಡುಗು, ಸಿಡಿಲಿನ ಆರ್ಭಟ ಸೃಷ್ಟಿಸಿದ್ದ ಮೈತ್ರಿ ಪಕ್ಷಗಳ ಇಬ್ಬರು ಪ್ರಭಾವಿ ನಾಯಕರ ನಡುವಿನ ಬಹಿರಂಗ ತಿಕ್ಕಾಟಕ್ಕೆ ಕೊನೆಗೂ ವಿರಾಮ ಬಿದ್ದಿದೆ. ಆ ಮೂಲಕ ರಾಜ್ಯ ಸಮ್ಮಿಶ್ರ ಸರ್ಕಾರದ ಭವಿಷ್ಯದ ಕುತೂಹಲ ಮೇ 23ಕ್ಕೆ ವಿಸ್ತರಣೆಗೊಂಡಿದೆ. ಮುಂದಿನ ‘ಮುಖ್ಯಮಂತ್ರಿ’ ಹುದ್ದೆ ವಿಚಾರಕ್ಕೂ ಕಾಂಗ್ರೆಸ್-ಜೆಡಿಎಸ್ ನಾಯಕರು ತೆರೆ ಎಳೆದಿದ್ದಾರೆ. ಈ ವಿಚಾರವೇ ಈಗ ಅಪ್ರಸ್ತುತ ಎನ್ನುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ದೋಸ್ತಿ ಎದುರು ಬಿಳಿ ಬಾವುಟ ಹಾರಿಸಿದರೆ, ಅತ್ತ ಜೆಡಿಎಸ್ ಮುಖಂಡ, ಸಚಿವ ಜಿ.ಟಿ.ದೇವೇಗೌಡ ‘ಎಲ್ಲರಿಗೂ ಜ್ಞಾನೋದಯ

ವಾಗಿದ್ದು, ಒಂದೇ ತಟ್ಟೆಯಲ್ಲಿ ಒಟ್ಟಿಗೆ ಊಟ ಮಾಡುವ ಕಾಲಬಂದಿದೆ’ ಎಂದಿದ್ದಾರೆ. ಈ ಹೇಳಿಕೆಗಳು ಕದನ ವಿರಾಮದ ಸೂಚನೆಯಾಗಿವೆ. ಸಮನ್ವಯ ಸಮಿತಿ ಅಧ್ಯಕ್ಷರೂ ಆದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ನಡುವೆ ಆರಂಭವಾದ ವಾಕ್ಸಮರ ವಿಷಮ ಹಂತ ತಲುಪುವ ಮೊದಲೇ ಕಾಂಗ್ರೆಸ್ ಹೈಕಮಾಂಡ್ ಮಧ್ಯ ಪ್ರವೇಶಿಸಿದರೆ, ಜೆಡಿಎಸ್ ನಾಯಕರು ಕೂಡ ಪ್ರತಿಕ್ರಿಯೆ ನೀಡದೆ ಗೊಂದಲಕ್ಕೆ ತಾತ್ಕಾಲಿಕ ವಿರಾಮ ಹಾಕಿದ್ದಾರೆ. ಆದರೂ, ಸಮನ್ವಯ ಸಮಿತಿ ಅಧ್ಯಕ್ಷರು ಮತ್ತು ಜೆಡಿಎಸ್ ಅಧ್ಯಕ್ಷರ ನಡುವೆ ನಡೆದಿರುವ ವಾಕ್ಸಮರ ಎರಡೂ ಪಕ್ಷಗಳಿಗೆ ಮುಜುಗರ ತಂದಿರುವುದಂತೂ ನಿಜ.

ಬಹುಮತ ಸಿಕ್ಕರೆ ಸಿಎಂ : ಮುಂದಿನ ಮುಖ್ಯಮಂತ್ರಿ ವಿಚಾರದಲ್ಲಿ ಚರ್ಚೆ ಈಗ ಅಪ್ರಸ್ತುತ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಮೈತ್ರಿಯ ಗೊಂದಲಕ್ಕೆ ಕಾರಣವಾದ ಅಂಶಗಳಲ್ಲಿ ಒಂದಾದ ‘ಮುಂದಿನ ಮುಖ್ಯಮಂತ್ರಿ’ ಚರ್ಚೆಗೆ ಕೊನೆ ಹಾಡಬೇಕೆಂದು ಪಕ್ಷ ಕೂಡ ಅಭಿಪ್ರಾಯ ನೀಡಿದ ಹಿನ್ನೆಲೆಯಲ್ಲಿ ಅವರು ಟ್ವೀಟ್ ಮಾಡಿದ್ದಾರೆನ್ನಲಾಗಿದೆ.

ಮೈತ್ರಿಧರ್ಮ ಪ್ರಸ್ತಾಪ: ಮೈಸೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿಗೆ ಮತ ಹಾಕಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದ ಬೇಗುದಿ ತಣ್ಣಗಾದಂತೆ ಕಾಣಿಸುತ್ತಿಲ್ಲ. ‘ಗೆಳೆಯ ಜಿ.ಟಿ.ದೇವೇಗೌಡರು ಇತ್ತೀಚೆಗೆ ನನ್ನ ವಿರುದ್ಧ ಮಾತನಾಡಿಲ್ಲ ನಿಜ. ಆದರೆ ಮೈಸೂರಲ್ಲಿ ಜೆಡಿಎಸ್ನವರು ಬಿಜೆಪಿಗೆ ಮತ ಹಾಕಿದ್ದಾರೆಂಬ ಅವರ ಹೇಳಿಕೆ ಸತ್ಯವಾಗಿದ್ದರೂ ಅನಗತ್ಯವಾಗಿತ್ತು. ಇದರಿಂದಾಗಿ ಕೆರಳಿದ ನಮ್ಮ ಕಾರ್ಯಕರ್ತರು ಜೆಡಿಎಸ್ ವಿರುದಟಛಿ ಮಾತನಾಡತೊಡಗಿದ್ದರು. ಮೈತ್ರಿಕೂಟದಲ್ಲಿ ಇಂತಹದನ್ನು ಮಾಡಬಾರದು’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿ ಬಹಿರಂಗ ಅಸಮಾಧಾನ ತೋರ್ಪಡಿಸಿದ್ದಾರೆ.

ವಿಶ್ವನಾಥ್ ಮೇಲೆ ತಣ್ಣಗಾಗದ ಸಿಟ್ಟು: ತಮ್ಮ ಸರ್ಕಾರದ ಬಗ್ಗೆ ವಿಶ್ಲೇಷಣೆ ಮಾಡಿದ ಜೆಡಿಎಸ್ ಅಧ್ಯಕ್ಷ ವಿಶ್ವನಾಥ್ ಮೇಲೆ ಸಿದ್ದರಾಮಯ್ಯಗೆ ಸಿಟ್ಟು ತಣ್ಣಗಾದಂತೆ ಕಾಣಿಸಿಲ್ಲ. ‘ನನ್ನ ಯಾವ ಕಾರ್ಯಕ್ರಮವೂ ಪಾಪ್ಯುಲಿಸ್ಟ್ ಇಲ್ಲವೇ ತಾತ್ಕಾಲಿಕ ಅಲ್ಲ. ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಕೃಷಿಭಾಗ್ಯ, ಪಶುಭಾಗ್ಯ… ಇವುಗಳನ್ನು ಯಾವುದೇ ಸರ್ಕಾರ ನಿಲ್ಲಿಸಲಿ ನೋಡೋಣ. ಜಾಗೃತ ಮತದಾರರು ಇರುವವರೆಗೆ ಇವೆಲ್ಲ ಶಾಶ್ವತ ಕಾರ್ಯಕ್ರಮಗಳು. ಟೀಕಾಕಾರರಿಗೆ ನೆನಪಿರಲಿ’ ಎಂದು ಪರೋಕ್ಷವಾಗಿ ವಿಶ್ವನಾಥ್ ಅವರನ್ನು ಚುಚ್ಚಿ ಟ್ವೀಟ್ ಮಾಡಿದ್ದಾರೆ.

ಮೈತ್ರಿ ಪಕ್ಷಗಳ ನಾಯಕರು ವಾಕ್ಸಮರ ಸ್ಥಗಿತಗೊಳಿಸಲಿದ್ದಾರೆ. ಹಿರಿಯ ಮುಖಂಡರು ಕುಳಿತು ಮಾತನಾಡಿದ್ದು, ಎಲ್ಲರಿಗೂ ಜ್ಞಾನೋದಯ ವಾಗಿದೆ. ಎರಡೂ ಪಕ್ಷಗಳ ಮುಖಂಡರು ಒಟ್ಟಾಗಿ ಒಂದೇ ತಟ್ಟೆಯಲ್ಲಿ ಊಟ ಮಾಡುವ ಕಾಲ ಬಂದಿದೆ.

| ಜಿ.ಟಿ.ದೇವೇಗೌಡ ಉನ್ನತ ಶಿಕ್ಷಣ ಸಚಿವ

ಸಿಎಂ-ಸಿದ್ದರಾಮಯ್ಯ ಫೋನ್ ಚರ್ಚೆ

ಉಪಚುನಾವಣೆ ಪ್ರಚಾರಕ್ಕೆ ತೆರಳಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿಯ ಒಂದೇ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿದ್ದರೂ ಪರಸ್ಪರ ಭೇಟಿಯಾಗಿಲ್ಲ. ಇಬ್ಬರೂ ಒಟ್ಟಿಗೆ ಕುಳಿತು ಮಾತನಾಡುತ್ತಾರೆಂದು ಹೇಳಲಾಗಿತ್ತಾದರೂ ಇವರ ಚರ್ಚೆ ದೂರವಾಣಿ ಮಾತುಕತೆಗಷ್ಟೇ ಸೀಮಿತವಾಯಿತು. ಉಳಿದಂತೆ ಇಬ್ಬಣಗಳ ಸಚಿವರು ನಾಯಕರನ್ನು ಭೇಟಿ ಮಾಡಿ ಸಂದೇಶಗಳನ್ನು ವರ್ಗಾಯಿಸಿದ್ದಾರೆ. ಈ ನಡುವೆ, ನಾಯಕರು ಬಹಿರಂಗವಾಗಿ ಹೇಳಿಕೆಗಳನ್ನು ನೀಡಬಾರದೆಂಬ ಸಂದೇಶ ಎರಡೂ ಪಕ್ಷಗಳಿಂದ ಹೊರಟಿದೆ. ಈ ಎಲ್ಲ ಬೆಳವಣಿಗೆಗಳ ಬಳಿಕ ಮೇ 23ರ ವರೆಗೆ ಕದನ ವಿರಾಮ ಘೋಷಣೆಯಾಗಿದೆ.

ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಇದ್ದಾರೆ. ಈಗ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆ ಅಪ್ರಸ್ತುತ. ಸಭೆ ಸಮಾರಂಭಗಳಲ್ಲಿ ಜನರು ‘ನೀವೆ ನಮ್ಮ ಮುಂದಿನ ಮುಖ್ಯಮಂತ್ರಿ’ ಎಂದು ಕೂಗುತ್ತಾರೆ. ಆಗ ‘ತಾವೆಲ್ಲ ಮತ್ತೆ ನಮ್ಮ ಪಕ್ಷಕ್ಕೆ ಬಹುಮತ ನೀಡಿದರೆ ಮುಖ್ಯಮಂತ್ರಿ ಆಗುತ್ತೇನೆ’ ಎಂದು ಹೇಳಿದ್ದೇನೆ. ಅಭಿಮಾನದಿಂದ ಹೀಗೆ ಹೇಳುವವರ ಬಾಯಿ ಮುಚ್ಚಿಸಲಾಗುತ್ತದೆಯೇ?

| ಸಿದ್ದರಾಮಯ್ಯ ಟ್ವೀಟ್

ಲೆಕ್ಕಾಚಾರಗಳೇನು?

  • ಎರಡು ಕ್ಷೇತ್ರಗಳ ಉಪಚುನಾವಣೆ ಸಂದರ್ಭದಲ್ಲಿ ಕಲಹ ಮತ್ತಷ್ಟು ಭುಗಿಲೆದ್ದರೆ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದೆಂಬುದು ಕಾಂಗ್ರೆಸ್ಸನ್ನು ಕಾಡುತ್ತಿರುವ ಆತಂಕ
  • ಈ ಗೊಂದಲವನ್ನೇ ಬಿಜೆಪಿ ಪ್ರಚಾರದ ಅಸ್ತ್ರವನ್ನಾಗಿಸಿ ಲಾಭ ಪಡೆಯ ಬಹುದೆಂಬುದು ಕೈಪಡೆ ಲೆಕ್ಕಾಚಾರ
  • ಕಲಹ ತೀವ್ರಗೊಂಡಲ್ಲಿ ಸರ್ಕಾರಕ್ಕೆ ಆಪತ್ತು ಎದುರಾಗಬಹುದೆಂಬುದು ದಳಪತಿಗಳ ಆತಂಕ

ವಿಶ್ವನಾಥ್ ಮೌನ

ಪಕ್ಷದ ವರಿಷ್ಠರ ಸೂಚನೆಯ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ. ತಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಸಿದ್ದರಾಮಯ್ಯ ಮಾಡಿರುವ ಟ್ವೀಟ್​ಗೆ ಉತ್ತರಿಸಲು ಅವರು ಮಂಗಳವಾರ ನಿರಾಕರಿಸಿದರು.