ಸಂಕಷ್ಟದಲ್ಲಿ ನೆರವಾಗದ ಕಮಲ ‘ನಾಯಕರು’

|ರಮೇಶ ದೊಡ್ಡಪುರ

ಬೆಂಗಳೂರು: ದಕ್ಷಿಣ ಭಾರತ ರಾಜ್ಯಗಳ ಪೈಕಿ ಪಕ್ಷ ಸದೃಢವಾಗಿರುವ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ತಮಗೂ ಒಂದಿರಲಿ ಎನ್ನುವ ಬಿಜೆಪಿ ನಾಯಕರುಗಳಲ್ಲಿ ಬಹುತೇಕರು ಕಷ್ಟಕರ ಪರಿಸ್ಥಿತಿಯಲ್ಲಿ ಕಣ್ಣಿಗೆ ಕಾಣದಿರುವುದು ಇತ್ತೀಚಿನ ದಿನಗಳಲ್ಲಿ ಸಹಜ ಪ್ರಕ್ರಿಯೆ.

ಶಿಸ್ತಿನ ಸಂಘಟನೆ, ಹಿಡಿದ ಕಾರ್ಯವನ್ನು ಅಚ್ಚುಕಟ್ಟಾಗಿ ಒಗ್ಗಟ್ಟಿನಿಂದ ಎದುರಿಸುವ ಪಕ್ಷ ಎಂಬ ಹಣೆಪಟ್ಟಿಯನ್ನು ಬಹುತೇಕ ಕಳಚಿಕೊಳ್ಳುವತ್ತ ಸಾಗಿರುವ ಬಿಜೆಪಿ, ಈ ಉಪಚುನಾವಣೆಯಲ್ಲಂತೂ ಸಂಪೂರ್ಣ ಹರಿದು ಹಂಚಿಹೋಗಿದೆ. ಅನಿವಾರ್ಯ ಕಾರಣಗಳಿಂದ ಶಿವಮೊಗ್ಗಕ್ಕೇ ಸೀಮಿತವಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅನುಪಸ್ಥಿತಿ ಕಾರಣಕ್ಕೆ ದಿಕ್ಕು ದೆಸೆಯಿಲ್ಲದಂತೆ ಚುನಾವಣೆ ನಡೆಯುತ್ತಿದೆ.

ಯೋಜಿಸಿದ ಕಾರ್ಯಗಳಾಗಲ್ಲ: ವಿಧಾನಸಭಾ ಚುನಾವಣೆ ಅತಂತ್ರ ಫಲಿತಾಂಶ ನಂತರ ಅಗತ್ಯವಿದ್ದ 7-8 ಶಾಸಕರನ್ನು ಹೊಂದಿಸುವುದು ಸವಾಲಾಗಿತ್ತು. 5-6 ನಾಯಕರ ತಂಡ ರಚಿಸಿ, ಸಂಪರ್ಕದಲ್ಲಿರುವ ಇತರ ಪಕ್ಷಗಳ ನಾಯಕರನ್ನು ಸೆಳೆಯಲು ಮುಂದಾಗಿತ್ತು. ಆಗ ಸಂಘಟಿತ ಪ್ರಯತ್ನ ನಡೆಯದೆ ವಿಫಲವಾಗಿ ಮುಖಭಂಗ ಅನುಭವಿಸಿತ್ತು. ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಂಪೂರ್ಣ ಸಿದ್ಧಗೊಳಿಸಲು ರಾಜ್ಯದಲ್ಲಿ ಮೂರು ತಂಡಗಳಾಗಿ ಪ್ರವಾಸ ನಡೆಸುವ ಯೋಜನೆ ಎರಡು ತಿಂಗಳ ಹಿಂದೆಯೇ ನಡೆದಿತ್ತು. ಆದರೆ, ಸೂಕ್ಷ್ಮ ವಿಚಾರಗಳನ್ನೂ ಗಮನಿಸಿ ಅಚ್ಚುಕಟ್ಟಾಗಿ ಅಭಿಯಾನ ಆಯೋಜಿಸಿ ಅಭ್ಯಾಸವಿರುವ ಬಿಜೆಪಿಯಲ್ಲಿ ನಡೆದಿದ್ದೇ ಬೇರೆ. ಯಡಿಯೂರಪ್ಪ ತಮಗೆ ವಹಿಸಿದ್ದ ಶೇ.90 ಜಿಲ್ಲೆಗಳಲ್ಲಿ ಪ್ರವಾಸ ಮುಗಿಸಿದರೆ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಂಡ ಮೈಸೂರಿನಲ್ಲಿ ಕಾರ್ಯ ಆರಂಭಿಸಿತಾದರೂ ಒಂದೆರಡು ದಿನದಲ್ಲೇ ಸ್ಥಗಿತವಾಯಿತು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮೂರನೇ ತಂಡ ವಿಧಾನಪರಿಷತ್ ಚುನಾವಣೆ ಕಾರಣ ಹೇಳಿ ಶೂನ್ಯದಲ್ಲೇ ಉಳಿಯಿತು. ಉಪಚುನಾವಣೆ ಎದುರಿಸುವ ಸಲುವಾಗಿ ಐದು ತಂಡಗಳನ್ನು ರಚಿಸಿ ಪ್ರತಿಯೊಂದಕ್ಕೂ ಐದಾರು ನಾಯಕರನ್ನು ನಿಯುಕ್ತಿ ಮಾಡಲಾಗಿತ್ತು. ಈ ಪೈಕಿ ಕೆಲವರನ್ನು ಬಿಟ್ಟರೆ ಉಳಿದವರೆಲ್ಲಿ ಹೋಗಿದ್ದಾರೆಂದು ಹುಡುಕುವ ಸ್ಥಿತಿಯಿದೆ.

ಪ್ರಚಾರದಲ್ಲಿ ಕೆಲವರಷ್ಟೇ ಸಕ್ರಿಯ

ಕ್ಷೇತ್ರ ಉಸ್ತುವಾರಿಗಳ ಪೈಕಿ ಕೇಂದ್ರ ಸಚಿವ ಸದಾನಂದಗೌಡ, ಅಭ್ಯರ್ಥಿ ಆಯ್ಕೆ ಹಾಗೂ ನಾಮಪತ್ರ ಸಲ್ಲಿಕೆ ನಂತರ ಅತ್ತ ಕಾಣಿಸಿಕೊಂಡಿಲ್ಲ. ಸಿ.ಪಿ.ಯೋಗೇಶ್ವರ ಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ. ಜಮಖಂಡಿ ಉಸ್ತುವಾರಿ ಜಗದೀಶ ಶೆಟ್ಟರ್ ಯೂರೋಪ್ ಪ್ರವಾಸಕ್ಕೆ ತೆರಳಿದ್ದಾರೆ. ಸಹೋದರನ ಅಮಾನತು ತೆರವುಗೊಳಿಸಿಕೊಂಡಿರುವ ಮುರುಗೇಶ ನಿರಾಣಿ ಸಣ್ಣಗೆ ಪ್ರವಾಸ ನಡೆಸುತ್ತಿದ್ದರೆ, ಅರವಿಂದ ಲಿಂಬಾವಳಿ ವಿವಿಧ ಘಟಕಗಳ ಸಭೆ ನಡೆಸುತ್ತ ಪ್ರಚಾರದಲ್ಲಿದ್ದಾರೆ. ಮಂಡ್ಯದಲ್ಲಿ ಭಾನುವಾರದಿಂದಷ್ಟೇ ಪ್ರಚಾರ ಕಾರ್ಯಕ್ಕೆ ಉಸ್ತುವಾರಿ ಆರ್.ಅಶೋಕ್ ಚಾಲನೆ ನೀಡಿದ್ದಾರೆ. ಇನ್ನು ತಂಡದ ಸದಸ್ಯ ಪ್ರತಾಪ್ ಸಿಂಹ ಇತ್ತ ಆಗಮಿಸಿಲ್ಲ. ಬಳ್ಳಾರಿಯಲ್ಲಿ ಶ್ರೀರಾಮುಲು ಕಳೆದ 10 ದಿನದಿಂದ ಠಿಕಾಣಿ ಹೂಡಿ ಬೆವರು ಹರಿಸುತ್ತಿದ್ದಾರೆ. ಎನ್.ರವಿಕುಮಾರ್ ಬಳ್ಳಾರಿಯಲ್ಲೇ ಉಳಿದಿದ್ದು, ಸಿ.ಟಿ.ರವಿ ಮೂರು ಬಾರಿ ಪ್ರವಾಸ ನಡೆಸಿದ್ದಾರೆ. ರಮೇಶ್ ಜಿಗಜಿಣಗಿ, ವಿ.ಸೋಮಣ್ಣ ಇನ್ನೂ ಪ್ರಚಾರಕ್ಕೆ ಧುಮುಕಿಲ್ಲ. ಶಿವಮೊಗ್ಗ ಉಸ್ತುವಾರಿ ಹೊತ್ತ ಈಶ್ವರಪ್ಪ ಅಭ್ಯರ್ಥಿ ಜತೆ ಕಾಣಿಸಿಕೊಂಡರೆ, ಶಾಸಕ ಸುನೀಲ್​ಕುಮಾರ್ ಸಮಾವೇಶ ಹಾಗೂ ಬೂತ್ ಸಭೆಗಳಲ್ಲಿ ಸಕ್ರಿಯರಾಗಿದ್ದಾರೆ. ರಾಜ್ಯ ನಾಯಕರೆಂದೇ ಬಿಂಬಿತವಾಗುವ ಸಿ.ಎಂ.ಉದಾಸಿ, ಗೋವಿಂದ ಕಾರಜೋಳ, ಪ್ರಲ್ಹಾದ್ ಜೋಶಿ, ಡಿ.ಎಸ್.ವೀರಯ್ಯ ಸೇರಿ ಅನೇಕರು ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಎಂದಿನಂತೆ ಪಕ್ಷಕ್ಕೂ ತಮಗೂ ಈ ಚುನಾವಣೆಗಳಿಗೂ ಸಂಬಂಧವೇ ಇಲ್ಲ ಎನ್ನುವಂತಿದ್ದಾರೆ.

ಅನಿವಾರ್ಯತೆಯಲ್ಲಿ ಪ್ರಮುಖರು

ಶಿವಮೊಗ್ಗದಲ್ಲಿ ಪಕ್ಷದ ಅಭ್ಯರ್ಥಿ ಗೆಲುವುದು ಅತ್ಯಂತ ಕಷ್ಟ ಎಂದು ಸ್ವತಃ ಜೆಡಿಎಸ್ ಸಮೀಕ್ಷೆಯೇ ತಿಳಿಸಿದ್ದರೂ ಈ ಕ್ಷೇತ್ರ ಪ್ರತಿನಿಧಿಸಿರುವ ಯಡಿಯೂರಪ್ಪ ಮಾತ್ರ ಲಘುವಾಗಿ ಪರಿಗಣಿಸಿಲ್ಲ. ಅತಿಯಾದ ಆತ್ಮವಿಶ್ವಾಸ ಬೇಡವೆಂದು 8 ದಿನದಿಂದಲೂ ಶಿವಮೊಗ್ಗದಲ್ಲೇ ಸಂಘಟನೆಯಲ್ಲಿ ನಿರತರಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾದ ಜಿಲ್ಲೆಗಳಲ್ಲಿ ಒಂದಾದ ಬಳ್ಳಾರಿಯಲ್ಲಿ ಈ ಬಾರಿಯೂ ಅದೇ ಮರುಕಳಿಸಬಾರದೆಂದು ಶ್ರೀರಾಮುಲು ಸಂಪೂರ್ಣ ತೊಡಗಿದ್ದಾರೆ. ಕಳೆದ ಚುನಾವಣೆಯಲ್ಲಿ ರಾಜ್ಯಾದ್ಯಂತ ಸಂಚರಿಸಿದ್ದ ಈ ಇಬ್ಬರೂ ನಾಯಕರು ಅನಿವಾರ್ಯ ಕಾರಣಗಳಿಂದ ಸ್ವಕ್ಷೇತ್ರಗಳಲ್ಲೇ ‘ಬಂಧಿ’ಯಾಗಿದ್ದಾರೆ. ಇಂತಹ ಸಮಯದಲ್ಲಿ ಸಹಾಯಕ್ಕೆ ಬರುತ್ತಿದ್ದ ರಾಷ್ಟ್ರೀಯ ವರಿಷ್ಠರಿಗೆ ಈ ಚುನಾವಣೆ ಲೆಕ್ಕಕ್ಕೇ ಇಲ್ಲದಂತಾಗಿದೆ. ರಾಜ್ಯ ಬಿಜೆಪಿ ಪ್ರಭಾರಿ ಪಿ.ಮುರಳೀಧರ ರಾವ್ ಸೌಜನ್ಯಕ್ಕೂ ಇತ್ತ ಮುಖ ಮಾಡಿಲ್ಲ. ನಾಲ್ಕು ರಾಜ್ಯಗಳ ಚುನಾವಣೆ ತಲೆ ಬಿಸಿ ಜತೆಗೆ ಶಬರಿಮಲೆ ಹೋರಾಟ ನಡುವೆ ರಾಜ್ಯದ ಉಪಚುನಾವಣೆ ಲೆಕ್ಕಕ್ಕೇ ಇಲ್ಲವೆಂಬಂತಿದೆ. ಐದೂ ಕ್ಷೇತ್ರಗಳ ಚುನಾವಣೆಯನ್ನು ಒಂದು ಸೂತ್ರದಲ್ಲಿ ಪೋಣಿಸಿ ಪ್ರವಾಸ ಆಯೋಜಿಸುವ, ತಂತ್ರ ರೂಪಿಸುವವರಾರೂ ಇಲ್ಲ. ಉಸ್ತುವಾರಿ ಹೊತ್ತವರು ಅಥವಾ ಅಭ್ಯರ್ಥಿಗಳ ಮನಸ್ಸಿಗೆ ಬಂದಂತೆ ಚುನಾವಣೆ ನಡೆಸುತ್ತ ಸಾಗಿದ್ದಾರೆ. ಸಾಮಾನ್ಯವಾಗಿ ಬಿಜೆಪಿ ಚುನಾವಣೆಯನ್ನು ಈ ರೀತಿ ಎದುರಿಸುವುದಿಲ್ಲ. ಈ ಬಾರಿ ಮಾತ್ರ ಈ ರೀತಿ ಆಗಿರುವುದಕ್ಕೆ ಕಾರಣಗಳೇನು? ಎಂಬುದನ್ನು ಪತ್ತೆ ಹಚ್ಚಬೇಕಿದೆ ಎಂದು ರಾಜ್ಯ ಪ್ರಮುಖರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.