ಖಡಕ್​​ ಐಪಿಎಸ್​ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್‌: ಹೈದರಾಬಾದ್ ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ (47) ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ರಾತ್ರಿ ಸುಮಾರು 9 ಗಂಟೆಗೆ ನಿಧನರಾಗಿದ್ದಾರೆ.

ಹೈದರಾಬಾದ್ ನ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಉಪನಿರ್ದೇಶಕರಾಗಿದ್ದ ಮಧುಕರ್ ಶೆಟ್ಟಿ ಇತ್ತೀಚಿಗೆ ತೀವ್ರ ಅಸ್ವಸ್ಥರಾಗಿ ಅಲ್ಲಿನ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಾಗಿದ್ದರು.

ಮೊದಲು ಎಚ್ ಒನ್ ಎನ್ ಒನ್ ಕಾಯಿಲೆ ಎಂದು ಹೇಳಲಾಗಿತ್ತಾದರೂ ಬಳಿಕ ಅವರಿಗೆ ಹೃದಯದ ಸೋಂಕಿನ ಸಮಸ್ಯೆ ಎಂದು ತಿಳಿದು ಬಂದಿತ್ತು. ಅವರಿಗೆ ಸಾಧ್ಯವಿರುವ ಎಲ್ಲ ಅತ್ಯುತ್ತಮ ಚಿಕಿತ್ಸೆ ನೀಡಲು ತೆಲಂಗಾಣ ಹಾಗು ಕರ್ನಾಟಕ ಸರ್ಕಾರಗಳು ಪ್ರಯತ್ನಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಖ್ಯಾತ ಪತ್ರಕರ್ತ ದಿವಂಗತ ವಡ್ಡರ್ಸೆ ರಘುರಾಮ್ ಶೆಟ್ಟಿ ಅವರ ಪುತ್ರ ,1999ರ ಬ್ಯಾಚ್‌ ಐಪಿಎಸ್ ಅಧಿಕಾರಿಯಾಗಿರುವ ಮಧುಕರ್ ಶೆಟ್ಟಿ, ಕರ್ನಾಟಕದ ಉಡುಪಿ ಜಿಲ್ಲೆಯವರು.

ಅವರು ಹೊಸದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಎಂ.ಎ. ಮತ್ತು ನ್ಯೂಯಾರ್ಕ್ ನ ಯೂನಿವರ್ಸಿಟಿಯಲ್ಲಿ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಚಿಕ್ಕಮಗಳೂರು ಎಸ್ಪಿಯಾಗಿ, ಲೋಕಾಯುಕ್ತ ಎಸ್ಪಿಯಾಗಿ ಅವರು ಖಡಕ್ ಹಾಗು ಜನಪರ ಅಧಿಕಾರಿಯಾಗಿ ಖ್ಯಾತಿ ಗಳಿಸಿದ್ದರು.

ಮುಖ್ಯಮಂತ್ರಿ ಸಂತಾಪ

ರಾಜ್ಯದ ಐಪಿಎಸ್ ಅಧಿಕಾರಿ ವಿ.ಮಧುಕರ್ ಶೆಟ್ಟಿ ಅವರ ನಿಧನಕ್ಕೆ ಮುಖ್ಯಮಂತ್ರಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್ ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ತರಬೇತಿ ಅಕಾಡೆಮಿಯಲ್ಲಿ ಸೇವೆಸಲ್ಲಿಸುತ್ತಿದ್ದ ಅವರು ಆಸ್ಪತ್ರೆಗೆ ದಾಖಲಾಗಿದ್ದು ತಿಳಿದು, ಅಲ್ಲಿನ ವೈದ್ಯರೊಂದಿಗೆ ಮಾತನಾಡಿದ್ದೆ. ಅವರ ಪರಿಸ್ಥಿತಿ ಗಂಭೀರವಾಗಿದ್ದರೂ ಸಾವಿನೊಂದಿಗೆ ಹೋರಾಡಿ ಜಯಿಸುವರೆಂದೇ ನಂಬಿದ್ದೆ. ಅತ್ಯುತ್ತಮ ಅಧಿಕಾರಿಯಾಗಿದ್ದ ಅವರು ನೇರ ನಡೆನುಡಿಗಳಿಂದ ಜನಪ್ರಿಯರಾಗಿದ್ದರು. ಅವರ ಅಕಾಲಿಕ ನಿಧನ ತೀವ್ರ ಆಘಾತ ಉಂಟು ಮಾಡಿದೆ ಎಂದು ಅವರು ತಿಳಿಸಿದ್ದಾರೆ.


Leave a Reply

Your email address will not be published. Required fields are marked *