ಬಸವಕಲ್ಯಾಣ: ಜಗತ್ತಿನ ಮಹಾನ್ ಕ್ರಾಂತಿಗಳ ಸಾಲಿನಲ್ಲಿ ಬಸವಕಲ್ಯಾಣದಲ್ಲಿ ಬಸವಾದಿ ಶರಣರು ನಡೆಸಿದ ಕ್ರಾಂತಿ ಸೇರಬೇಕು ಎಂದು ಕಲಬುರಗಿ ಪಿಡಿಎ ಇಂಜಿನಿಯರಿಂಗ್ ಕಾಲೇಜು ಸಹ ಪ್ರಾಧ್ಯಾಪಕ ಸಂಜಯ ಮಾಕಲ್ ಹೇಳಿದರು.
ಹರಳಯ್ಯ ಗವಿಯಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವAತ ಹರಳಯ್ಯ ಪೀಠದ ಸಹಯೋಗದಡಿ ಶರಣ ವಿಜಯೋತ್ಸವ ನಾಡಹಬ್ಬ ಹಾಗೂ ಹುತಾತ್ಮ ದಿನಾಚರಣೆ ನಿಮಿತ್ತ ಸೋಮವಾರ ಸಂಜೆ ಆಯೋಜಿಸಿದ್ದ ಹಿರಿಯ ನಾಗರಿಕರ ಸಮಾವೇಶದಲ್ಲಿ ಅನುಭಾವ ನೀಡಿದ ಅವರು, ಧರ್ಮಕ್ಕಿಂತ ಕಾಯಕ ದೊಡ್ಡದು ಎಂಬ ಶ್ರೇಷ್ಠ ಸಿದ್ಧಾಂತ ಕೊಟ್ಟ, ಶೂನ್ಯ ತತ್ವವನ್ನು ಜಗತ್ತಿನಲ್ಲಿ ಮೊದಲ ಬಾರಿಗೆ ನೀಡಿದ ನೆಲ ಇದಾಗಿದೆ ಎಂದರು.
ಹಿರಿಯರಾದ ಬಳಿಕವೇ ನಿಜವಾದ ಜೀವನ ಆರಂಭವಾಗುತ್ತದೆ. ಮನಸ್ಸು ಮಾಡಿದರೆ ಏನಾದರೂ ಸಾಧಿಸಬಹುದು. ಮಹಾತ್ಮ ಗಾಂಧೀಜಿ ಸತ್ಯ ಅಹಿಂಸೆ ಮಾರ್ಗದಿಂದ ದೇಶಕ್ಕೆ ಸಾತಂತ್ರ್ಯ ತಂದುಕೊಟ್ಟರು. ಅವರು ಹಿರಿಯ ನಾಗರಿಕರು. ಹಿರಿಯರಾದ ನಂತರ ಎದುರಾಗುವ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಮುನ್ನುಗ್ಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ನ್ಯಾಯಾಧೀಶ ಸುಭಾಶ್ಚಂದ್ರ ನಾಗರಾಳೆ ಮಾತನಾಡಿ, ಬಸವ ತತ್ವವನ್ನು ಮನೆ-ಮನಗಳಿಗೆ ಮುಟ್ಟಿಸುವ ಕಾರ್ಯವನ್ನು ಪೂಜ್ಯ ಅಕ್ಕ ಗಂಗಾಂಬಿಕಾ ಮಾಡುತ್ತಿದ್ದಾರೆ. ಬಸವ ತತ್ವ ಅರಿತು ಎಲ್ಲರೂ ಜೀವನದಲ್ಲಿ ಅಳವಡಿಕೊಳ್ಳಬೇಕು. ನಡೆ-ನುಡಿ ಆಚಾರ-ವಿಚಾರದಲ್ಲೂ ಶುದ್ಧತೆ ಇರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿಡಿವಿಸಿ ಉಪಾಧ್ಯಕ್ಷ ಡಾ.ಜಿ.ಎಸ್. ಭುರಾಳೆ ಮಾತನಾಡಿ, ನಮಗೆ ಬೇಡವಾದದ್ದನ್ನು ಬೇರೆಯವರಿಗೆ ಕೊಡುವುದು ದಾನವಾಗದು. ನಮಗೆ ಮುಖ್ಯವಾದದ್ದು ದಾನವಾಗಿ ನೀಡುವುದೇ ನಿಜವಾದ ದಾನವಾಗುತ್ತದೆ ಎಂದು ದಾನದ ಪರಿಭಾಷೆಯನ್ನು ಅರ್ಥಪೂರ್ಣವಾಗಿ ವಿಶ್ಲೇಷಿಸಿದರು.
ಸಾನ್ನಿಧ್ಯ ವಹಿಸಿದ್ದ ನಿಡವಂಚಾದ ಪೂಜ್ಯ ಮಾತೆ ಮೈತ್ರಾದೇವಿ ಹಾಗೂ ನೇತೃತ್ವ ವಹಿಸಿದ್ದ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಆಶೀರ್ವಚನ ನೀಡಿದರು. ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷ ಚನ್ನಪ್ಪ ಪರ್ತಾಪುರೆ ಪ್ರಾಸ್ತಾವಿಕ ಮಾತನಾಡಿದರು. ಬಾಬುರಾವ ಹಿರೇನಾಗಾಂವ, ಸುಭಾಷ ಕುದಮೂಡೆ, ಜಯಪ್ರಕಾಶ ಸದಾನಂದೆ, ರಾಜಶೇಖರ ದುಬಲಗುಂಡೆ, ಶಂಕ್ರೆಪ್ಪ ಬಿರಾದಾರ, ನಾಗನಾಥ ಮಹಾಜನ್, ಇಂದುಮತಿ ಅಬ್ದಗಿರೆ, ಸಿದ್ದಣ್ಣ ಹಂಗರಗಿಕರ್, ಮಲ್ಲಿಕಾರ್ಜುನ ಛತ್ರೆ, ಹಣಮಂತ ಕುಕ್ಕಾ ಪಾಟೀಲ್, ಶೀಲಾ ರಾಯವಾಡೆ ಇದ್ದರು.
ಜಯದೇವಿ ತಾಯಿ ಲಿಗಾಡೆ ಪ್ರತಿಷ್ಠಾನದ ಅಧ್ಯಕ್ಷ ಶ್ರೀಶೈಲ ಹುಡೇದ ಸ್ವಾಗತಿಸಿದರು. ಒಕ್ಕೂಟದ ಕಾರ್ಯದರ್ಶಿ ಪ್ರೊ.ಶಂಕರ ಕರಣೆ ನಿರೂಪಣೆ ಮಾಡಿದರು. ಶಕುಂತಲಾ ಶಂಕರ ಕರಣೆ ಭಕ್ತಿ ದಾಸೋಹ ಮಾಡಿದರು. ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಹಾಸ್ಯದ ಮೂಲಕ ನೈತಿಕ ಮೌಲ್ಯಗಳನ್ನು ತಿಳಿಸಿಕೊಟ್ಟರು.
ಗುರು-ಹಿರಿಯರ ಸಮಾಜ ಸೇವೆ ಗುರುತಿಸಿ ಮಹಾದೇವಪ್ಪ ಇಜಾರೆ, ಮಲ್ಲಿಕಾರ್ಜುನ ಅಂಬಲಗೆ, ಸುಭಾಷ ರಗಟೆ ಅವರಿಗೆ ಶರಣ ಸೇವಾ ನಾಯಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಂಗದಾನ ಜೀವ ಉಳಿಸಲು ಸಹಕಾರಿ: ದಾನಗಳಲ್ಲಿ ಅಂಗದಾನ, ದೇಹದಾನ ಅತಿ ಮಹತ್ವದ್ದು. ಜೀವಂತವಿದ್ದಾಗ ಅಂಗ ದಾನ ಮಾಡಿದರೆ ಇನ್ನೊಬ್ಬರಿಗೆ ಜೀವ ಕೊಟ್ಟಂತಾಗುತ್ತದೆ ಎಂದು ಡಾ.ಜಿ.ಎಸ್. ಭುರಾಳೆ ಹೇಳಿದರು. ಜೀವಂತ ಇದ್ದಾಗಲೂ ಕಿಡ್ನಿ ಇತರ ಪ್ರಮುಖ ಅಂಗಗಳನ್ನು ದಾನ ಮಾಡಬಹುದು. ಇದು ಇನ್ನೂಬ್ಬರ ಬದುಕಿನಲ್ಲಿ ಬೆಳಕು ಮೂಡಿಸುತ್ತದೆ. ಅಪಘಾತದಲ್ಲಿ ಮಿದುಳು ನಿಷ್ಕ್ರಿಯಗೊಂಡಾಗ ದೇಹದ ೩೨ ಅಂಗಗಳನ್ನೂ ದಾನ ಮಾಡಬಹುದು. ಸತ್ತ ಮೇಲೆ ಮಾಡುವ ದೇಹ ದಾನ ಸಂಶೋಧನೆಗೆ ಅನುಕೂಲವಾಗುತ್ತದೆ. ದೇಹ ದಾನ ಮಾಡುವವರು ಸಾಕಷ್ಟು ಸಂಖ್ಯೆಯಲ್ಲಿದ್ದು, ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.