ಪಂಪ ಮಹಾಕವಿ ಸುತ್ತ ಮುತ್ತ ವಿಚಾರ ಗೋಷ್ಠಿ 13ರಂದು

ಶಿರಸಿ: ‘ಪಂಪ ಮಹಾಕವಿ ಸುತ್ತ ಮುತ್ತ’ ರಾಜ್ಯ ಮಟ್ಟದ ವಿಚಾರ ಗೋಷ್ಠಿ ಮತ್ತು ಕರಾವಳಿ ಕವಿಗಳ ಚುಟುಕು ಸಂಕಲನ, ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಅ. 13ರಂದು ಬೆಳಗ್ಗೆ 10.30ಕ್ಕೆ ಬನವಾಸಿಯ ಮಧುಕೇಶ್ವರ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಚುಟುಕು ಸಾಹಿತ್ಯ ಪರಿಷತ್ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಶಾಸಕ ಶಿವರಾಮ ಹೆಬ್ಬಾರ ಕಾರ್ಯಕ್ರಮ ಉದ್ಘಾಟಿಸುತ್ತಿದ್ದು, ನಾಡೋಜ ಡಾ. ಪಾಟೀಲ ಪುಟ್ಟಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ದೇವಾಲಯದ ಅಧ್ಯಕ್ಷ ರಾಜಶೇಖರ ಒಡೆಯರ್, ಕೃಷ್ಣಮೂರ್ತಿ ಕುಲಕರ್ಣಿ ಪಾಲ್ಗೊಳ್ಳುತ್ತಿದ್ದಾರೆ. ಮಧ್ಯಾಹ್ನ 12 ಗಂಟೆಯಿಂದ ‘ಮಹಾಕವಿ ಪಂಪ: ಸುತ್ತ ಮುತ್ತ’ ವಿಷಯದ ಮೊದಲ ಗೋಷ್ಠಿ ನಡೆಯಲಿದ್ದು, ಹಿರಿಯ ಸಂಶೋಧಕ ಡಾ. ಶಾಂತಿನಾಥ ದಿಬ್ಬದ ಆಶಯ ಭಾಷಣ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ ವಹಿಸಲಿದ್ದಾರೆ. ಪಂಪನ ಜೀವನ ಮೌಲ್ಯ ಕುರಿತು ಡಾ. ಎಸ್.ಪಿ. ಪದ್ಮಪ್ರಸಾದ ಉಪನ್ಯಾಸ ನೀಡಲಿದ್ದಾರೆ. ಪಂಪನ ಸಾಹಿತ್ಯದಲ್ಲಿ ಮಾನವೀಯ ನೆಲೆಗಳ ಕುರಿತು ಸಾಹಿತಿ ಡಾ. ಶ್ರೀಪಾದ ಶೆಟ್ಟಿ, ಪಂಪ ನಿರೂಪಿಸಿದ ಬನವಾಸಿ ವಿಷಯದ ಕುರಿತು ಪ್ರೊ. ವಿ.ಆರ್. ಜೋಶಿ, ಪಂಪ ಒಂದು ನೆನಪು ವಿಷಯದ ಕುರಿತು ಸಾಹಿತಿ ಜನಾರ್ಧನ ನಾಯಕ ಉಪನ್ಯಾಸ ನೀಡಲಿದ್ದಾರೆ ಎಂದರು.

ಸಂಜೆ 4 ಗಂಟೆಯಿಂದ ಚುಟುಕು ವಾಚನ ಗೋಷ್ಠಿ ನಡೆಯಲಿದೆ. ಬಳಿಕ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ವಿದ್ಯಾ ವರ್ಧಕ ಸಂಘದ ಕಾರ್ಯಾಧ್ಯಕ್ಷ ಶಿವಣ್ಣ ಬೆಲ್ಲದ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಾಹಿತಿ ಪ್ರೊ. ರಾಜೀವ ಆಚಾರ ಆಶಯ ಭಾಷಣ ನಡೆಸಿಕೊಡಲಿದ್ದಾರೆ. ಪ್ರೊ. ಧರಣೇಂದ್ರ ಕುರಕುರಿ ಸಮಾರೋಪ ನುಡಿ ನುಡಿಯಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾರಿಕಾಂಬಾ ದೇವಾಲಯದ ಉಪಾಧ್ಯಕ್ಷ ಮನೋಹರ ಮಲ್ಮನೆ, ಕದಂಬ ಸೇನೆಯ ಉದಯಕುಮಾರ ಕಾನಳ್ಳಿ, ಶಿವಾನಂದ ದೀಕ್ಷಿತ, ತಾ. ಪಂ. ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಚೆನ್ನಬಸಪ್ಪ ಧಾರವಾಡ ಶೆಟ್ರು, ಅನಂತ ಕುಲಕರ್ಣಿ, ಜಿ. ಯು. ನಾಯಕ ಇತರರು ಪಾಲ್ಗೊಳ್ಳುತ್ತಿದ್ದಾರೆ. ಡಾ. ಜಿ.ಎ. ಹೆಗಡೆ ಸೋಂದಾ ಅವರ ‘ಹೈಕುಗಳು’ ಹಾಗೂ ಕರಾವಳಿ ಕವಿಗಳ ಚುಟುಕು ಸಂಕಲನ ‘ಚುಟುಕು ಗಂಗಾವಳಿ’ ಕೃತಿಯನ್ನು ಬಿಡುಗಡೆಗೊಳಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಉದಯಕುಮಾರ ಕಾನಳ್ಳಿ, ಡಾ. ಜಿ. ಹೆಗಡೆ ಸೋಂದಾ, ಜಿ. ವಿ. ನಾಯಕ ಇತರರಿದ್ದರು.