ಹೊಸ ಫ್ಲ್ಯಾಟ್​ ಖರೀದಿಗೆ ಹಲವು ಫ್ಲ್ಯಾಟ್​ಗಳ ಮಾರಾಟ ಮಾಡಿದರೆ ಸಿಗುತ್ತೆ ತೆರಿಗೆ ವಿನಾಯ್ತಿ

ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ಐತಿಹಾಸಿಕ ತೀರ್ಪು

ಮುಂಬೈ: ಹೊಸದಾಗಿ ಒಂದು ಪ್ಲ್ಯಾಟ್​ ಖರೀದಿಸಲು ಈಗಾಗಲೆ ತಮ್ಮ ಮಾಲೀಕತ್ವದಲ್ಲಿರುವ ಹಲವು ಫ್ಲ್ಯಾಟ್​ಗಳನ್ನು ಮಾರಾಟ ಮಾಡಿದ್ದರಿಂದ ಬರುವ ಆದಾಯಕ್ಕೆ ದೀರ್ಘ ಕಾಲದ ಬಂಡವಾಳ ಲಾಭದ ತೆರಿಗೆಯಿಂದ (ಎಲ್​ಟಿಸಿಜಿ) ವಿನಾಯ್ತಿ ದೊರೆಯುತ್ತದೆ ಎಂದು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ) ಮಹತ್ವದ ತೀರ್ಪು ನೀಡಿದೆ. ಹಾಗೆ ಮಾರಾಟ ಮಾಡಿ ಬಂದ ಹಣವನ್ನು ನಿಗದಿತ ಅವಧಿಯಲ್ಲಿ ಭಾರತದಲ್ಲಿ ಫ್ಲ್ಯಾಟ್​ ಅಥವಾ ಮನೆ ಖರೀದಿಸಲು ಬಳಸುವುದು ಕಡ್ಡಾಯ ಎಂದು ಹೇಳಿದೆ.


ಹೊಸ ಬಡಾವಣೆ ರಚನೆಯಾದಾಗ ಅಥವಾ ದೊಡ್ಡದಾದ ಮನೆ ಬೇಕೆಂದು ಇಲ್ಲವೇ ಶ್ರೀಮಂತ ವರ್ಗದವರು ಹೆಚ್ಚಾಗಿ ನೆಲೆಸಿರುವ ಪ್ರದೇಶದಲ್ಲಿ ಮನೆ ಖರೀದಿಸಲು ಬಯಸುವುದು ಮಾನವ ಸಹಜಗುಣ. ಇಂತಹ ಕಡೆಯಲ್ಲಿ ಮನೆ ಖರೀದಿಸಲು ವ್ಯಕ್ತಿಯು ತನ್ನ ಮಾಲೀಕತ್ವದಲ್ಲಿರುವ ಹಲವು ಫ್ಲ್ಯಾಟ್​ಗಳು ಅಥವಾ ಮನೆಯನ್ನು ಮಾರಾಟ ಮಾಡಿ, ಅದರಿಂದ ಬಂದ ಹಣವನ್ನು ಆಸ್ತಿ ಖರೀದಿಸಲೆಂದೇ ವಿನಿಯೋಗಿಸಿದರೆ ಅದು ಎಲ್​ಟಿಸಿಜಿ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಮಂಡಳಿ ಸ್ಪಷ್ಟಪಡಿಸಿದೆ.


ಐಟಿಎಟಿಯ ಈ ತೀರ್ಪು ಸದ್ಯ ಮುಂಬೈಗೆ ಅನ್ವಯವಾಗುತ್ತದೆ. ಇದಕ್ಕೆ ವಿರುದ್ಧವಾದ ಕಾನೂನು ಇಲ್ಲದ ರಾಜ್ಯಗಳಲ್ಲಿ ಕೂಡ ಜನರು ಈ ತೀರ್ಪಿನ ಲಾಭ ಪಡೆಯಬಹುದಾಗಿದೆ.


ಒಬ್ಬ ತೆರಿಗೆ ಪಾವತಿದಾರ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಒಂದು ಆಸ್ತಿಯನ್ನು ಹೊಂದಿದ್ದು, ಅದರ ಮಾರಾಟದಿಂದ ಬರುವ ಲಾಭವು ಎಲ್​ಟಿಸಿಜಿ ವ್ಯಾಪ್ತಿಗೆ ಬರುತ್ತದೆ. ಅಂದರೆ ಆಸ್ತಿ ಮಾರಾಟದಿಂದ ಬಂದ ಒಟ್ಟಾರೆ ಆದಾಯದ ಮೇಲೆ ಶೇ. 20 ತೆರಿಗೆ ಅನ್ವಯವಾಗುತ್ತದೆ. ಆದಾಯ ತೆರಿಗೆ ಕಾಯ್ದೆಯ 54ನೇ ಪರಿಚ್ಛೇದ ಪ್ರಕಾರ ಈ ಕುರಿತು ಮೇಲ್ಮನವಿ ಸಲ್ಲಿಸಬಹುದಾಗಿದೆ. ಆಸ್ತಿ ಮಾರಾಟದಿಂದ ಬಂದ ಆದಾಯವನ್ನು ನಿರ್ದಿಷ್ಟ ಅವಧಿಯಲ್ಲಿ ಆಸ್ತಿ ಖರೀದಿಸಲು ಬಳಸಿದರೆ, ಅದಕ್ಕೆ ಅನ್ವಯಿಸುವ ಎಲ್​ಟಿಸಿಜಿ ಪ್ರಮಾಣ ಕಡಿಮೆಯಾಗುತ್ತದೆ.


ಐಟಿ ಕಾಯ್ದೆಯ 54ನೇ ಪರಿಚ್ಛೇದದಲ್ಲಿ ಹೇಳಲಾಗಿರುವಂತೆ ಒಂದು ಆಸ್ತಿಯನ್ನು ಮಾರಾಟ ಮಾಡಿ ಒಂದಕ್ಕಿಂತ ಹೆಚ್ಚು ಆಸ್ತಿ ಖರೀದಿಗೆ ಹಣವನ್ನು ಬಳಸಿದಲ್ಲಿ ಎಲ್​ಟಿಸಿಜಿ ವಿನಾಯ್ತಿ ಅನ್ವಯವಾಗುವುದಿಲ್ಲ ಎಂದು ಐಟಿಎಟಿ ಸ್ಪಷ್ಟಪಡಿಸಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *