ಸ್ವಾರ್ಥಕ್ಕಾಗಿ ಮನುಷ್ಯನಿಂದ ಪರಿಸರ ಹಾಳು

ಹನೂರು: ಮನುಷ್ಯ ಪರಿಸರವನ್ನು ತನಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ಹಾಳು ಮಾಡುತ್ತಿದ್ದಾನೆ ಎಂದು ಇಸ್ರೋ ವಿಜ್ಞಾನಿ ಜಗನ್ನಾಥನ್ ವೆಂಕಟರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಕ್ರಿಸ್ತರಾಜ ಶಾಲೆಯಲ್ಲಿ ಗುರುವಾರ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಇದರಿಂದ ಏರುಪೇರು ಉಂಟಾಗಿ ಅನೇಕ ರೀತಿಯ ಪ್ರಾಕೃತಿಕ ಅಪಾಯಗಳು ಎದುರಾಗುತ್ತಿವೆ. ಮುಂದಿನ ದಿನಗಳಲ್ಲಾದರೂ ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಗಮನಹರಿಸಬೇಕಾಗಿದೆ. ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ವಾತಾವರಣವಿದ್ದು, ಉತ್ತಮ ಆಮ್ಲಜನಕ ಸಿಗುತ್ತಿದೆ. ಗ್ರಾಮೀಣ ಭಾಗದ ಜನತೆಯೇ ಪುಣ್ಯವಂತರು. ಇಂದಿನ ಮಕ್ಕಳು ವಿದ್ಯಾರ್ಥಿ ದಿಸೆಯಿಂದಲೇ ಪ್ಲಾಸ್ಟಿಕ್ ತ್ಯಜಿಸಿ, ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಲು ಗಮನಹರಿಸಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಪರಿಸರ ಜಾಗೃತಿ ಕುರಿತ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಪರಿಸರ ತಜ್ಞ ಜಾನ್‌ಟೆಕ್ಷೇರಾ, ಶಿಕ್ಷಣತಜ್ಞ ಫಾದರ್ ಕೊಲೋಸೊ, ಮಾರ್ಟಳ್ಳಿ ಕಾಲೇಜಿನ ಪ್ರಾಂಶುಪಾಲ ಫಾದರ್ ಕ್ರಿಸ್ಟೋಪರ್, ಫಾದರ್ ಜಾಯ್, ಕ್ರಿಸ್ತರಾಜ ಶಾಲೆಯ ವ್ಯವಸ್ಥಾಪಕ ರೊನಾಲ್ಡ್ ಧಾಂತಿ, ಪ್ರಾಂಶುಪಾಲ ಸಿಸ್ಟರ್ ಶಾಂತಿ, ಮುಖ್ಯಶಿಕ್ಷಕರಾದ ಸಿಸ್ಟರ್ ವೀಣಾ, ಜಸಿಂತಾ ಮತ್ತಿತರರಿದ್ದರು.

Leave a Reply

Your email address will not be published. Required fields are marked *