ಜೀವ ಬಲಿ ಪಡೆದ ಸೆಲ್ಫಿ ಮೋಜು

<ಸೋಮೇಶ್ವರದಲ್ಲಿ ಬಾಲಕಿ ಸಮುದ್ರಪಾಲು *ಮೂವರನ್ನು ರಕ್ಷಿಸಿದ ಏಕಾಂಗಿ ಜೀವರಕ್ಷಕ>

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಸೋಮೇಶ್ವರ ಬೀಚ್ ಕಡಲ ಕಿನಾರೆಯಲ್ಲಿ ಸೆಲ್ಫಿ ತೆಗೆಯಲು ಹೋದ ಕುಟುಂಬ ಕಡಲಿನ ಅಲೆಯ ಹೊಡೆತಕ್ಕೆ ಸಿಲುಕಿದ್ದು, ಬಾಲಕಿ ಮೃತಪಟ್ಟಿದ್ದಾಳೆ. ಸಮುದ್ರ ಪಾಲಾಗುತ್ತಿದ್ದ ಮೂವರನ್ನು ರಕ್ಷಿಸಲಾಗಿದೆ.

ಬೆಂಗಳೂರು ಮೂಲದ ಮೈತ್ರಿ ಕೇದ್ಕಾರ್(4) ಸಮುದ್ರ ಪಾಲಾದ ಬಾಲಕಿ. ಕ್ರಿಸ್‌ಮಸ್ ರಜೆ ಹಿನ್ನೆಲೆಯಲ್ಲಿ ಮೂಲತಃ ಮುಂಬೈ ಮೂಲದ ಬೆಂಗಳೂರು ಬನಶಂಕರಿಯಲ್ಲಿ ವಾಸವಿರುವ ಚಿಂತಾಮಣಿ ಕೇದ್ಕಾರ್ ಮತ್ತು ಶ್ರದ್ಧಾ ಕೇದ್ಕಾರ್ ದಂಪತಿ ತಮ್ಮ ಪುತ್ರಿಯರಾದ ಆರೂವರೆ ವರ್ಷದ ಗರ್ಗಿ ಕೇದ್ಕಾರ್ ಹಾಗೂ ಮೈತ್ರಿ ಜತೆ ಸೋಮವಾರ ಬೆಳಗ್ಗೆ ಸೋಮೇಶ್ವರ ದೇವಸ್ಥಾನಕ್ಕೆ ಆಗಮಿಸಿದ್ದರು. ದೇವರ ದರ್ಶನ ಬಳಿಕ 10.30ರ ವೇಳೆಗೆ ದೇವರ ಕೆರೆ ಪಕ್ಕದ ಸಮುದ್ರ ಕಿನಾರೆಗೆ ಹೋಗಿ ಕಲ್ಲಿನ ಮೇಲೆ ನಿಂತು ಸೆಲ್ಫಿ ತೆಗೆಯುತ್ತಿದ್ದರು. ಈ ಸಂದರ್ಭ ಏಕಾಏಕಿ ಅಪ್ಪಳಿಸಿದ ಬೃಹತ್ ಅಲೆ ನಾಲ್ವರನ್ನೂ ಕೊಚ್ಚಿಕೊಂಡು ಹೋಗಿದೆ.

ರಕ್ಷಣೆಗಾಗಿ ಜೀವರಕ್ಷಕನ ಹೋರಾಟ!: ಕುಟುಂಬ ಸಮುದ್ರ ಪಾಲಾಗುತ್ತಿರುವುನ್ನು ಕಂಡ ಪ್ರತ್ಯಕ್ಷದರ್ಶಿಗಳು ದೂರದಲ್ಲಿದ್ದ ಜೀವರಕ್ಷಕ ಅಶೋಕ್ ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಶೋಕ್ ಸಮುದ್ರಕ್ಕೆ ಜಿಗಿದು ಚಿಂತಾಮಣಿ ಅವರಿಗೆ ಕ್ಯಾನ್ ನೀಡಿ, ಗರ್ಗಿ ಅವರನ್ನು ಮೊದಲಿಗೆ ದಡಕ್ಕೆ ತಂದಿದ್ದಾರೆ. ಈ ಸಂದರ್ಭ ಮೈತ್ರಿ ನೀರಲ್ಲಿ ಮುಳುಗುತ್ತಿದ್ದಳು. ಆಕೆಯನ್ನು ದಡಕ್ಕೆ ತರುವ ಪ್ರಯತ್ನ ಮಾಡಿದಾಗ ಸಮುದ್ರದ ಅಲೆ ಅಶೋಕ್ ಮೇಲೆ ಅಪ್ಪಳಿಸಿದೆ. ಅಲೆಗಳ ಜತೆ ಹೋರಾಡುತ್ತಾ ಸಮುದ್ರದಲ್ಲೇ ಮೈತ್ರಿಗೆ ಪ್ರಥಮ ಚಿಕಿತ್ಸೆ ನೀಡುತ್ತಾ ದಡಕ್ಕೆ ತಂದಿದ್ದಾರೆ. ಈ ಸಂದರ್ಭ ಮುಳುಗುತ್ತಿದ್ದ ಶ್ರದ್ಧಾ ರಕ್ಷಣೆಗಾಗಿ ಬೊಬ್ಬೆ ಹೊಡೆದಿದ್ದು, ಮೈತ್ರಿಯನ್ನು ದಡದಲ್ಲಿದ್ದ ಸಾರ್ವಜನಿಕರ ಬಳಿ ನೀಡಿ ಶ್ರದ್ಧಾ ಅವರನ್ನು ದಡಕ್ಕೆ ಕರೆತಂದಿದ್ದಾರೆ. ಮೈತ್ರಿ ಮತ್ತು ಗರ್ಗಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸಿದ್ದು ಅದಾಗಲೇ ಮೈತ್ರಿ ಅಸು ನೀಗಿದ್ದಾಳೆ ಎಂದು ವೈದ್ಯರು ಘೋಷಿಸಿದರು. ಗರ್ಗಿ ಸ್ಥಿತಿ ಚಿಂತಾಜನಕವಾಗಿದೆ.

ಅನಾಹುತ ತಡೆದಿದ್ದ ಅಶೋಕ್!: ಇಂಡೋನೇಷ್ಯಾದಲ್ಲಿ ಸಂಭವಿಸಿದ್ದ ಪ್ರಕೃತಿ ವಿಕೋಪ ಪರಿಣಾಮ ಸೋಮವಾರ ಸೋಮೇಶ್ವರ ಸಮುದ್ರದಲ್ಲೂ ಅಲೆಗಳ ಅಬ್ಬರ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಅಶೋಕ್ ಅವರು ಎಂದಿಗಿಂತಲೂ ಅರ್ಧಗಂಟೆ ಮುಂಚಿತವಾಗಿ ಕಡಲ ಕಿನಾರೆಗೆ ಬಂದಿದ್ದರು. ಬೆಳಗ್ಗೆಯೇ ವಿದ್ಯಾರ್ಥಿಗಳು, ಶಿಕ್ಷಕರಿದ್ದ ತಂಡವೊಂದು ಬಸ್‌ನಲ್ಲಿ ಸೋಮೇಶ್ವರ ಕಡಲ ಕಿನಾರೆಗೆ ಆಗಮಿಸಿದಾಗ ಅಶೋಕ್ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಿದ್ದರೂ, ಶಿಕ್ಷಕರ ನಿರ್ಲಕ್ಷೃದಿಂದ ನಾಲ್ಕು ವಿದ್ಯಾರ್ಥಿಗಳು ಸಮುದ್ರಕ್ಕಿಳಿದಿದ್ದರು. ಅಲೆಗಳ ಅಬ್ಬರ ಅನಾಹುತ ಸೃಷ್ಟಿಸುವುದನ್ನು ಅರಿತ ಅಶೋಕ್ ವಿದ್ಯಾರ್ಥಿಗಳನ್ನು ಗದರಿ ವಾಪಸ್ ಕಳುಹಿಸಿದ್ದರು.

ಕೆಲವೇ ಹೊತ್ತಿನಲ್ಲಿ ಕೇದ್ಕಾರ್ ಕುಟುಂಬ ಆಗಮಿಸಿ ದೇವರ ಕೆರೆ ಬಳಿ ಸಮುದ್ರಕ್ಕೆ ಹೋಗಿತ್ತು. ಈ ಭಾಗದಲ್ಲಿ ಈವರೆಗೆ ಯಾವುದೇ ಅನಾಹುತ ಸಂಭವಿಸದಿದ್ದರೂ ಸೋಮವಾರ ಪ್ರಥಮ ಬಾರಿಗೆ ಅನಾಹುತ ನಡೆದಿದೆ. ಇಲ್ಲಿ ಇಬ್ಬರು ಜೀವರಕ್ಷಕರಿದ್ದರೂ ಘಟನೆ ಸಂದರ್ಭ ಒಬ್ಬರು ಮಾತ್ರ ಇದ್ದರು.