ಹೈಕಳ ಸೆಲ್ಫಿ ಹವಾ

ಹಿಂದೆಲ್ಲ ಸೆಲೆಬ್ರಿಟಿಗಳನ್ನು ನೋಡಿದಾಗ ನೆನಪಾಗುತ್ತಿದ್ದುದೇ ಆಟೋಗ್ರಾಫ್! ಕೈಯಲ್ಲಿ ಪುಸ್ತಕ, ಪೆನ್ನು ಹಿಡಿದು ಚಿತ್ರತಾರೆಯರು, ಸ್ಟಾರ್ ಕ್ರೀಡಾಪಟುಗಳಿಗೆ ಮುಗಿಬಿದ್ದು ಒಂದು ಸಹಿ ಹಾಕಿಸಿಕೊಂಡರೆ ಅದೇ ಜೀವಮಾನದ ಸಾಧನೆ. ಆದರೆ ಈಗ ಹಾಗಿಲ್ಲ. ಏನಿದ್ದರೂ ಸೆಲ್ಪಿಯದ್ದೇ ಹವಾ. ಸ್ನೇಹಿತರ ನಡುವೆ ಬಿಡದ ಸೆಲ್ಪಿ ಇನ್ನು ಸೆಲೆಬ್ರಿಟಿಗಳನ್ನು ಕಂಡರೆ ಸುಮ್ಮನಿರುತ್ತದೆಯೇ..?

| ಸುನೀಲ್ ಬಾರ್ಕೂರ್​

ಅದೊಂದು ಕಾಲೇಜು ಕ್ಯಾಂಪಸ್. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಏರ್ಪಾಡಾಗಿದೆ. ಫ್ರೆಶರ್ಸ್ ಡೇ ಅಂದ್ರೆ ಕೇಳಬೇಕೆ? ರಂಗು ರಂಗಿನ ಡ್ರೆಸ್ ತೊಟ್ಟ ಹೊಸ ಹುಡ್ಗೀರ ನಡುವೆ ತಾವೇನು ಕಮ್ಮಿ ಎಂಬಂತೆ ಮಿಂಚುತ್ತ ಮಿರಿಮಿರಿ ಸೂಟ್ ಕಟ್ ಶರ್ಟ್ ನಲ್ಲಿ ಕಣ್ಸೆಳೆಯುತ್ತಿರುವ ಸೀನಿಯರ್ ಹುಡುಗರು. ಕಾಲೇಜಿಗೆ ಬಂದ ಹೊಸ ಜೂನಿಯರ್​ಗಳನ್ನು ಕುತೂಹಲದಿಂದ ನೋಡುತ್ತ, ಕೆಲವರಿಗೆ ಅಲ್ಲೇ ಒಂದು ಅಡ್ಡ ಹೆಸರಿಟ್ಟು ತಮ್ಮೊಳಗೇ ರೇಗಿಸಿಕೊಳ್ಳುತ್ತಿದ್ದಾರೆ. ಇದೆಲ್ಲ ಸಾಲದೆಂಬಂತೆ ಹಾಸ್ಯ, ಅಪಹಾಸ್ಯ, ಕಾಲೆಳೆಯುವಿಕೆ, ಕೇಕೆ ಎಲ್ಲವೂ ಸಹಜವಾಗಿಯೇ ಅಲ್ಲಿ ಮೇಳೈಸಿದೆ.

ಜತೆಗೆ ಎಲ್ಲರ ಕೈಲಿ ಉದ್ದುದ್ದ ಸೆಲ್ಪಿ ಕೋಲುಗಳು ಬೇರೆ. ಕಣ್ಣರಳಿಸಿ, ತುಟಿ ಹೊರಳಿಸಿ, ಮೂತಿ ತಿರುಗಿಸಿ ಎಂಥದೋ ವಿಚಿತ್ರ ಎಕ್ಸ್​ಪ್ರೆಷನ್ ಕೊಡುತ್ತಾ ಚಕಚಕನೆ ಕ್ಲಿಕ್ಕಿಸುತ್ತಿದ್ದ ಸೆಲ್ಪಿಗಳು, ಗ್ರೂಪ್ಪಿಗಳು ಅಲ್ಲಿಂದಲೇ ಈ ಗುಂಪಿನಲ್ಲಿನ ಗೋವಿಂದರನ್ನೆಲ್ಲ ಟ್ಯಾಗ್ ಮಾಡಿ ತಕ್ಷಣವೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಟಕಟಕನೆ ಮಳೆಗಾಲದ ಅಣಬೆಗಳಂತೆ ಆ ಕಡೆಯಿಂದೊಂದಿಷ್ಟು ಲೈಕ್​ಗಳು, ಇನ್ನೊಂದಿಷ್ಟು ಕಾಮೆಂಟುಗಳು, ಹಲವಾರು ಶೇರ್​ಗಳು ಈ ಕ್ಷಣಗಳನ್ನು ಸಂಬಂಧಿಸಿದವರಿಗೂ, ಸಂಬಂಧವಿಲ್ಲದವರಿಗೂ ಪ್ರಾಮಾಣಿಕವಾಗಿ ತಲುಪಿಸುತ್ತಿವೆ.

ಹೌದೂರಿ ಈ ಸೋಷಿಯಲ್ ಮೀಡಿಯಾ ಅನ್ನೋದು ಜಗತ್ತನ್ನು ಎಷ್ಟು ಚಿಕ್ಕದಾಗಿಸಿದೆಯಲ್ಲ. ಅಂಚೆಯಣ್ಣನ ಪತ್ರಕ್ಕೆ ವಾರಗಟ್ಟಲೇ ಕಾಯುತ್ತಿದ್ದ ಆ ಜಮಾನಾ ಎಲ್ಲಿ? ಇಲ್ಲಿ ಸೆಕೆಂಡುಗಳಲ್ಲೇ ಪೈಪೋಟಿಗೆ ಬಿದ್ದವರಂತೆ ಸಮಾಚಾರವನ್ನು ನಿಮ್ಮಬಳಿಗೆ ಹೊತ್ತು ತರುವ ಮಿಂಚಂಚೆಗಳೆಲ್ಲಿ? ಇದೀಗ ರ್ಚಚಿಸಿದ ಸನ್ನಿವೇಶವನ್ನು ಕೆಲವೇ ವರ್ಷಗಳ ಹಿಂದಿನ ಸನ್ನಿವೇಶದೊಡನೆ ಊಹಿಸಿಕೊಳ್ಳಿ. ಆಗೆಲ್ಲ ನಾವು ಅಮೂಲ್ಯವೆನ್ನಿಸಿಕೊಳ್ಳುವ ಕ್ಷಣಗಳನ್ನು ನಮ್ಮ ಬಳಿ ಬಚ್ಚಿಟ್ಟುಕೊಂಡು ನಮ್ಮವರೊಡನೆ ಹಂಚಿಕೊಳ್ಳುವ ಪರಿಯೇ ಬೇರೆಯಾಗಿತ್ತು. ಜಾಸ್ತಿಯೆಂದರೆ ಹಿರಿಯರನ್ನು ಕುರ್ಚಿಯಲ್ಲಿ ಕೂಡಿಸಿ ಕಿರಿಯರೆಲ್ಲ ನೆಲದ ಮೇಲೋ ಅಥವಾ ಕೊಂಚ ಉದ್ದವಾಗಿರುವವರು ಈ ಹಿರಿಯರ ಹಿಂದೆ ಕತ್ತಗಲಿಸಿ ನಿಂತು ತೆಗೆದ ಗ್ರೂಪ್ ಫೋಟೊ ಲ್ಯಾಮಿನೇಟ್ ಮಾಡಿದ ಆಲ್ಬಂಗೆ ಸೇರಿಕೊಳ್ಳುತ್ತಿತ್ತು. ಇದರ ಜತೆಗೆ ನಮ್ಮನ್ನು ಪೊರೆಯುವ ಸ್ನೇಹಿತರ ಅಥವಾ ಅಕಸ್ಮಾತ್ ಭೇಟಿಯಾದ ಸೆಲೆಬ್ರಿಟಿಗಳ ಹಾಜರಿ ಹಾಕಿಕೊಳ್ಳುವ ದಾಖಲಾತಿ ಪುಸ್ತಕವೊಂದಿರುತ್ತಿತ್ತು. ಅದುವೇ ಆಟೋಗ್ರಾಫ್.

ಈ ಶತಮಾನದ ಆರಂಭದವರೆಗೆ ವಿದ್ಯಾಭ್ಯಾಸ ಮುಗಿಸಿದವರನ್ನೊಮ್ಮೆ ಅವರ ಆಟೋಗ್ರಾಫ್ ಪುಸ್ತಕದ ಬಗ್ಗೆ ಕೇಳಿ ನೋಡಿ. ಮರುಕ್ಷಣವೇ ಕಣ್ಣರಳಿಸಿ ತಮ್ಮ ನೆನಪಿನ ಬುತ್ತಿಯನ್ನು ಅವರು ಬಿಚ್ಚಿಡುವುದಂತೂ ಖರೆ. ಐವತ್ತರಿಂದ ನೂರು ಹಾಳೆಗಳ ಮಕ್ಮಲ್​ನಂತಹ ಹೊದಿಕೆಯ ಆ ಪುಟಗಳಲ್ಲಿ ಅವರ ಜೀವನದ ಆ ಮರೆಯಲಾರದ ಕ್ಷಣಗಳು ದಾಖಲಾಗಿರುತ್ತಿದ್ದವು. ಹಸ್ತಾಕ್ಷರವನ್ನು ಕೋರುತ್ತಿರುವ ತಮ್ಮ ಈ ಸ್ನೇಹಿತನ ಬಗೆಗೊಂದಿಷ್ಟು ಮೆಚ್ಚುಗೆಯ ಮಾತುಗಳೋ ಅಥವಾ ಅವರ ಮುಂದಿನ ಜೀವನಕ್ಕೆ ಶುಭಹಾರೈಕೆಗಳೋ ಹೀಗೆ ಕೆಲವು ಪದಗಳಲ್ಲೇ ಅವರಿಬ್ಬರ ಗೆಳೆತನ, ಸಂಬಂಧಗಳನ್ನು ವಿವರಿಸುವ ಶಕ್ತಿ ಈ ಆಟೋಗ್ರಾಫ್​ನಲ್ಲಿತ್ತು. ಇನ್ನು ಹಸ್ತಾಕ್ಷರವನ್ನು ದಾಖಲಿಸುವವರು ಕವಿಗಳಾಗಿದ್ದರೆ ತಮ್ಮ ಗೆಳೆಯನಿಗಾಗಿಯೇ ಒಂದು ಪುಟ್ಟ ಕವಿತೆ. ಹೀಗೆ ಅವರವರ ಭಾವಕ್ಕೆ ಅವರವರ ದೋಸ್ತಿಗೆ ತಕ್ಕಂತೆ ಎಲ್ಲ ವೈವಿಧ್ಯಗಳನ್ನು ಆ ಪುಸ್ತಕ ಬಚ್ಚಿಟ್ಟುಕೊಳ್ಳುತ್ತಿತ್ತು. ಈ ಆತ್ಮೀಯತೆ ಒಂದು ವಿಧವಾದರೆ ಅದನ್ನೇ ಹವ್ಯಾಸವನ್ನಾಗಿಸಿ ಈ ಆಟೋಗ್ರಾಫ್ ಸಂಗ್ರಹಿಸುವ ಹುಚ್ಚಿದ್ದವರು ಇನ್ನೂ ಹಲವರು. ಸೆಲೆಬ್ರಿಟಿಗಳನ್ನು ಬೆನ್ನಟ್ಟಿ ಅವರ ಹಸ್ತಾಕ್ಷರಗಳನ್ನು ಕೂಡಿ ಹಾಕಿ ಅವಕಾಶ ಸಿಕ್ಕಾಗೆಲ್ಲ ಅದನ್ನು ತಮ್ಮವರಲ್ಲಿ ತೋರಿಸಿ ತಮ್ಮ ಸಂಗ್ರಹದ ಬಗ್ಗೆ ಬೀಗುವವರ ಸಂಖ್ಯೆಗೇನೂ ಕಮ್ಮಿಯಿರಲಿಲ್ಲ.

ಟಿ.ವಿ.ಯ ಕ್ರೀಡಾ ವಾಹಿನಿಗಳಲ್ಲಿ ಬರುವ ಹಳೆಯ ಮ್ಯಾಚ್​ಗಳನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ. ಆಗಿನ ಕ್ರಿಕೆಟ್ ಕಲಿಗಳಿಗೆ ಬೌಂಡರಿ ಲೈನ್​ನಲ್ಲಿ ಫೀಲ್ಡಿಂಗ್ ಮಾಡುತ್ತಿರುವಾಗ ಓವರ್ ನಡುವಿನ ವಿರಾಮದಲ್ಲಿ ಹಸ್ತಾಕ್ಷರಕ್ಕೆ ಪೀಡಿಸುತ್ತಿರುವ ವೀಕ್ಷಕರನ್ನು ಸಂತೃಪ್ತಿಗೊಳಿಸುವುದೇ ಒಂದು ದೊಡ್ಡ ಸವಾಲು. ಟೆನ್ನಿಸ್ ಅಥವಾ ಬ್ಯಾಡ್ಮಿಂಟನ್​ನಲ್ಲೂ ಮ್ಯಾಚ್ ಮುಗಿಸಿ ವಾಪಸ್ಸಾಗುತ್ತಿರುವ ತಾರೆಗಳಿಗಂತೂ ಈ ಸಂಗ್ರಹಕಾರರು ಮುತ್ತಿಕೊಂಡು ಬೆನ್ನು ಹತಿ ್ತೂರುವುದೊಂದೇ ಬಾಕಿ. ಈ ಹುಚ್ಚು ಒಂದು ಕಿರುಕುಳವಾಗಿ ಮಾರ್ಪಟ್ಟ ಹಿನ್ನೆಲೆಯಲ್ಲಿ ಕೆಲ ಫುಟ್​ಬಾಲ್ ತಂಡಗಳು ಆಟೋಗ್ರಾಫ್ ಕೊಡುವುದನ್ನು ನಿಷೇಧಿಸಿದವು. ಈ ಹುಚ್ಚನ್ನು ವ್ಯಾವಹಾರಿಕವಾಗಿ ಬಳಸಿಕೊಂಡರು ಇನ್ನೂ ಕೆಲವರು. ದುಡ್ಡಿಗಾಗಿ ತಾರೆಗಳ ಚಿತ್ರಗಳ ಮೇಲೆ ಅವರ ಆಟೋಗ್ರಾಫ್ ಉಳ್ಳ ಚಿತ್ರಗಳನ್ನು ಮಾರುವುದಕ್ಕಾರಂಭಿಸಿ ಯಶಸ್ಸು ಕಂಡು ಅದು ಕೊನೆಗೊಂದು ಉದ್ಯಮವಾಗಿಯೂ ಬೆಳೆಯಿತು. ಆ ಜಮಾನಾದಲ್ಲಿ ಈ ಒಂದು ಟ್ರೆಂಡನ್ನೇ ಎನ್​ಕ್ಯಾಷ್ ಮಾಡಿಕೊಂಡ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮಾರ್ಕೆಟ್ ಮಾಡಲು ಈ ಹುಚ್ಚಿನ ಲಾಭ ಪಡೆದಿದ್ದುಂಟು.

ನಮ್ಮ ಕಂಪನಿಯ ಬಿಸ್ಕಿಟ್​ಗಳ ಇಷ್ಟು ರ್ಯಾಪರ್ ಸಂಗ್ರಹಿಸಿ ನಮಗೆ ಕಳಿಸಿ, ಭಾರತೀಯ ಕ್ರಿಕೆಟ್ ತಂಡದ ಸದಸ್ಯರ ಹಸ್ತಾಕ್ಷರವುಳ್ಳ ಬ್ಯಾಟ್ ಪಡೆಯಿರಿ… ಈ ರೀತಿಯ ಹಲವಾರು ಜಾಹಿರಾತುಗಳು ಆಗ ಎಲ್ಲೆಡೆ ರಾರಾಜಿಸುತ್ತಿದ್ದವು. ಇದು ಕೊನೆಗೆ ಯಾವ ಮಟ್ಟಕ್ಕೆ ಹೋಯಿತೆಂದರೆ ಆಟೋಗ್ರಾಫ್ ಸಂಗ್ರಹಕಾರರ ತಂಡಗಳು ಅಲ್ಲಲ್ಲಿ ಹುಟ್ಟಿಕೊಂಡವು. ಅಮೆರಿಕದ ಇಂತಹದೊಂದು ತಂಡವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅತ್ಯುತ್ತಮ ಮತ್ತು ಅತಿ ಕೆಟ್ಟ ಆಟೋಗ್ರಾಫ್ ನೀಡುವ ತಾರೆಗಳಿಗೆ ವಾರ್ಷಿಕ ಪ್ರಶಸ್ತಿಗಳನ್ನೂ ನೀಡಲಾರಂಭಿಸಿತು. ಬದಲಾವಣೆ ಜಗದ ನಿಯಮ ಎಂಬುದು ಎಲ್ಲರೂ ಒಪ್ಪಲೇ ಬೇಕಾದ ಮಾತು. 2005ರ ಆಸುಪಾಸಿನಲ್ಲಿ ಯಾವತ್ತು ಮೊಬೈಲ್ ಫೋನ್​ನಲ್ಲಿ ಈ ಸೆಲ್ಪಿ ಕ್ಯಾಮರಾ ಎಂಬ ಪುಟ್ಟ ಮೂರನೇ ಕಣ್ಣು ಅಡಕವಾಯ್ತೋ ಅದು ಹೊಸದೊಂದು ಲೋಕಕ್ಕೆ ರಹದಾರಿಯಾಯ್ತು. ಇದರೊಟ್ಟಿಗೆ ಮಾರ್ಕೆಟ್​ಗೆ ಲಗ್ಗೆಯಿಟ್ಟ ತರಹೇವಾರಿ ಸ್ಮಾರ್ಟ್​ಫೋನ್​ಗಳು ಜತೆಗೆ ಸೋಷಿಯಲ್ ಆಪ್​ಗಳು ಜನರ ಜೀವನ ಶೈಲಿಯನ್ನೇ ಬದಲಿಸಿಬಿಟ್ಟವು. ಈ ಸುನಾಮಿಯಲ್ಲಿ ಅನೇಕ ಸಂಪ್ರದಾಯಗಳು ಕಳೆದು ಹೋದವು. ಇಂತಹುದರಲ್ಲಿ ಈ ಆಟೋಗ್ರಾಫ್ ಪುಸ್ತಕವೂ ಒಂದು. ಬೆರಳ ತುದಿಯಲ್ಲಿ ಜಗತ್ತನ್ನೇ ಕಂಡುಕೊಂಡ ಜನರು ಸ್ಮಾರ್ಟ್​ಫೋನ್ ಹವಾಗೆ ಮಾರುಹೋದರು. ವಯಸ್ಸಿನ ಅಂತರವಿಲ್ಲದೇ ಎಲ್ಲರೂ ಕ್ಯಾಮರಾ ಕ್ಲಿಕ್ಕಿಸುವವರೇ. ಅಷ್ಟೇ ಏಕೆ ದೇಶದ ಧುರೀಣರೂ ತಮ್ಮ ಭೇಟಿಯ ಕ್ಷಣಗಳನ್ನು ಪ್ರಜೆಗಳೊಂದಿಗೆ ಹಂಚಿಕೊಳ್ಳಲು ಈ ಸೆಲ್ಪಿಗೆ ಮೊರೆ ಹೋದರು. ಅಷ್ಟಕ್ಕೂ ಈ ಸೆಲ್ಪಿಯ ಜನಪ್ರಿಯತೆಗೆ ಕಾರಣ ಬಹಳ ಸ್ಪಷ್ಟ. ಇಲ್ಲಿ ಜತೆಗಿರುವ ಸ್ನೇಹಿತನಿರಲಿ ಅಥವಾ ಒಂದು ಕ್ಷಣಮಾತ್ರಕ್ಕೆ ಭೇಟಿಯಾದ ಸೆಲೆಬ್ರಿಟಿಯೇ ಆಗಲಿ ಅವರ ಜತೆಗಿರುವ ಚಿತ್ರವನ್ನು ಹಂಚಿಕೊಂಡಿರುವ ನೀವೂ ಆ ಕ್ಷಣಕ್ಕೆ ಒಬ್ಬ ಹೀರೋ. ಸ್ಮಾರ್ಟ್​ಫೋನ್​ನಲ್ಲಿ ಚಿತ್ರಗಳನ್ನು ಕ್ಲಿಕ್ಕಿಸುವ ಅದಕ್ಕಿಂತ ಮುಖ್ಯವಾಗಿ ಎಲ್ಲರ ಜತೆಗೆ ಹಂಚಿಕೊಳ್ಳುವ ಕ್ರಮದಲ್ಲಿರುವ ಸರಳತೆ ಇದರ ಇನ್ನೊಂದು ಪ್ಲಸ್ ಪಾಯಿಂಟ್. ಇವೆಲ್ಲವುಗಳ ಜತೆಗೆ ಈಗಿನ ಇಂಟರ್​ನೆಟ್​ನ ಯುಗದಲ್ಲಿ ಜನರು ಹೆಚ್ಚು ಹೆಚ್ಚು ಮುದ್ರಿತ ಜಗತ್ತಿನಿಂದ ದ್ರಶ್ಯಪ್ರಧಾನ ಯುಗದತ್ತ ವಾಲುತ್ತಿರುವ ಹೊಸ ಟ್ರೆಂಡ್ ಬೇರೆ. ಹೀಗಾಗಿಯೇ ಇಂತಹ ಬೆಳವಣಿಗೆಗಳನ್ನು, ಬದಲಾವಣೆಗಳನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕಿದೆ.

ನಾನು ನನ್ನಿಷ್ಟದವರನ್ನು ಭೇಟಿಯಾದೆ ಎಂಬ ಖುಷಿ ಸ್ಮರಣೀಯವಾಗಿಸಲು, ಸ್ನೇಹಿತರಿಗೆ ತೋರಿಸಿ ಇನ್ನಷ್ಟು ಖುಷಿ ಪಡಲು ಆಟೋಗ್ರಾಫ್ ಅಥವಾ ಸೆಲ್ಪಿ ಸುಲಭ ಸಾಧನ. ಅಭಿಮಾನಿಗಳು ನಮ್ಮ ಜತೆ ಸೆಲ್ಪಿ ತೆಗೆದುಕೊಳ್ಳುವುದು ಪ್ರೀತಿ ತೋರಿಸಿಕೊಳ್ಳುವ ಅದ್ಭುತ ವಿಧಾನ. ಅವರಿಗೆ ಪ್ರತಿ ಉಡುಗೊರೆಯಾಗಿ ನಾವು ಅತಿಶ್ರೇಷ್ಠ ಕೆಲಸ ಮಾಡಬೇಕು. ನನಗೆ ಸೆಲ್ಪಿ ಯಾವತ್ತೂ ಕಿರಿಕಿರಿ ತರಿಸಲಿಲ್ಲ. ಕೆಲವೊಮ್ಮೆ ನಿರ್ದೇಶನದಲ್ಲಿದ್ದಾಗ ಅಭಿಮಾನಿಗಳು ಸೆಲ್ಪಿ ಅಂತ ಬಂದರೆ ಕಷ್ಟವಾಗುತ್ತೆ. ಆದ್ರೂ ಅವರು ನಮಗಾಗಿ ಕಾಯುವುದನ್ನು ಗೌರವಿಸಿ ಸೆಲ್ಪಿ ಕೊಟ್ಟಿದ್ದೇನೆ.

| ರಮೇಶ್ ಅರವಿಂದ್ ನಟ

Leave a Reply

Your email address will not be published. Required fields are marked *