ಭದ್ರಾವತಿ: ಕೌಟುಂಬಿಕ ಜೀವನಕ್ಕೆ ಸೀಮಿತವಾಗಿದ್ದ ಮಹಿಳೆಯರು ಇಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮೂಲಕ ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಈ ಮೂಲಕ ಕುಟುಂಬದ ಏಳಿಗೆಗೆ ಕಾರಣಕರ್ತರಾಗಿದ್ದಾರೆ ಎಂದು ನಗರಸಭೆ ಸದಸ್ಯ ಬಿ.ಕೆ.ಮೋಹನ್ ಹೇಳಿದರು.
ನಗರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮತ್ತು ಹಳೇನಗರ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದಿಂದ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆರ್ಥಿಕ ಸಹಾಯ ಪಡೆದ ಫಲಾನುಭವಿಗಳು ಸಕಾಲದಲ್ಲಿ ಮರುಪಾವತಿಸುವ ಮೂಲಕ ಸಂಸ್ಥೆಯನ್ನು ಸದೃಢಗೊಳಿಸುತ್ತಿದ್ದಾರೆ. ಇಂತಹ ವಹಿವಾಟುಗಳನ್ನು ಬೇರ‌್ಯಾವ ಆರ್ಥಿಕ ಸಂಸ್ಥೆಗಳಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂದರು.
ಧರ್ಮಸ್ಥಳ ಯೋಜನೆ ಬಿ.ಸಿ.ಟ್ರಸ್ಟ್‌ನ ಚಿತ್ರದುರ್ಗ ಶಾಖೆ ಪ್ರಾದೇಶಿಕ ನಿರ್ದೇಶಕಿ ಗೀತಾ ಮಾತನಾಡಿ, ಧಾರ್ಮಿಕ ಕಾರ್ಯಗಳನ್ನು ಆಡಂಬರ, ಪ್ರದರ್ಶನಕ್ಕಾಗಿ ಮಾಡದೆ ಅದನ್ನು ಭಯ, ಭಕ್ತಿ, ಅರ್ಪಣಾ ಭಾವದಿಂದ ಮಾಡಿದಾಗ ಅದರ ಫಲ ದೊರೆಯುತ್ತದೆ. ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಆಚರಿಸಿ ಪಾಲಿಸುವ ಮೂಲಕ ಮುಂದಿನ ತಲೆಮಾರಿಗೂ ತಲುಪಿಸಬೇಕು ಎಂದು ತಿಳಿಸಿದರು.
ನಗರಸಭಾ ಮಾಜಿ ಸದಸ್ಯ ಆರ್.ಕರುಣಾಮೂರ್ತಿ ಮಾತನಾಡಿ, ಡಾ. ವೀರೇಂದ್ರ ಹೆಗ್ಗಡೆ ಅವರು ಬ್ಯಾಂಕ್‌ಗಳಲ್ಲಿ ತಮ್ಮ ವೈಯುಕ್ತಿಕ ಗ್ಯಾರಂಟಿ ಮೇಲೆ ಸಾಲ ಪಡೆದು ಈ ಸಂಸ್ಥೆಯ ಮೂಲಕ ಸದಸ್ಯರಿಗೆ ನೀಡುತ್ತಿದ್ದಾರೆ. ಇದನ್ನು ಗಮನಿಸಿ ಪ್ರಾಮಾಣಿಕವಾಗಿ ಮರು ಪಾವತಿಸಬೇಕು ಎಂದು ಸಲಹೆ ನೀಡಿದರು.
ಯಶೋದಮ್ಮ, ಜಾಗೃತಿ ವೇದಿಕೆ ಜಿಲ್ಲಾ ಸದಸ್ಯ ಗೊಂದಿ ಜಯರಾಮ್, ನಿರ್ದೇಶಕ ಮುರಳಿಧರ ಶೆಟ್ಟಿ, ಬಿ.ಕೆ.ಜಗನ್ನಾಥ್, ಕಾವೇರಮ್ಮ, ಸುರೇಖಾ ರೇವಣ್ಕರ್, ಅಂಜುಮನ್ ಇಸ್ಲಾಹುಲ್ ಮುಸ್ಲಿಮೀನ್ ಕಮಿಟಿ ಅಧ್ಯಕ್ಷ ಮರ್ತುಜಾ ಖಾನ್, ಪತ್ರಕರ್ತ ಬದರಿನಾರಾಯಣ ಶ್ರೇಷ್ಠಿ ಇತರರಿದ್ದರು.