ಹಾರೂಗೇರಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಜವಳಿ ಕೈಮಗ್ಗ ತರಬೇತಿ ಕೇಂದ್ರ ಪ್ರಾರಂಭವಾಗುತ್ತಿರುವುದು ಸಂತಸವಾಗಿದೆ. ಎಲ್ಲರೂ ಕೈಮಗ್ಗ ತರಬೇತಿ ಪಡೆಯುವ ಮೂಲಕ ಸ್ವಾವಲಂಬಿ ಬದುಕು ನಡೆಸಬೇಕು ಎಂದು ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ ಹೇಳಿದರು.
ಪಟ್ಟಣದ ಬಂತಿಯವರ ಮಹಾಮನೆ ಆವರಣದಲ್ಲಿ ಕೇಂದ್ರ ಸರ್ಕಾರದ ಸಮರ್ಥ ಯೋಜನೆಯ ಜವಳಿ ಕೈಮಗ್ಗ ತರಬೇತಿಯ 2 ಬ್ಯಾಚ್ ತರಬೇತಿ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಕೈಮಗ್ಗ ಸಂಸ್ಥೆಯ ಅಧ್ಯಕ್ಷ ಅಮರನಾಥ ಬಂತಿ ಮಾತನಾಡಿ, ಕೈಮಗ್ಗ ನಶಿಸುತ್ತಿರುವ ದಿನಗಳಲ್ಲಿ ನೇಕಾರಿಕೆ ಉಳಿಸಿ, ಬೆಳೆಸುವ ಉದ್ದೇಶದಿಂದ ಕೈಮಗ್ಗ ತರಬೇತಿ ಕೇಂದ್ರ ಪ್ರಾರಂಭವಾಗುತ್ತಿರುವುದು ಹೆಮ್ಮೆಯ ವಿಷಯ. ಎಲ್ಲರೂ ಈ ಯೋಜನೆಯ ಲಾಭ ಪಡೆದುಕೊಳ್ಳಬೇಕೆಂದರು.
ಕೇಂದ್ರ ಜವಳಿ ಇಲಾಖೆ ಅಧಿಕಾರಿ (ನೇಕಾರರ ಸೇವಾ ಕೇಂದ್ರ ಬೆಂಗಳೂರು) ಪುನೀತ ಪಾಠಕ ಕೈಮಗ್ಗ ತರಬೇತಿ ಕೇಂದ್ರ ವೀಕ್ಷಿಸಿ ಶುಭ ಹಾರೈಸಿದರು.
ಪ್ರಥಮ ಹಂತದಲ್ಲಿ 30 ಜನರಿಗೆ ತರಬೇತಿ ನೀಡಲಾಗಿದೆ. ಎರಡನೇ ಹಂತದ ತರಬೇತಿ ಪ್ರಾರಂಭವಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಪುರಸಭೆ ಅಧ್ಯಕ್ಷ ವಸಂತ ಲಾಳಿ, ಡಾ.ವಿಶ್ವನಾಥ ಬಂತಿ, ವಿಠ್ಠಲ ಬಂತಿ, ಅಶೋಕ ಅರಕೇರಿ, ರಾಮು ಧರ್ಮಟ್ಟಿ, ಸಂತೋಷ ಸಿಂಗಾಡಿ, ಜಗದೀಶ ಗಡಾದ, ಚಂದ್ರಶೇಖರ ಬಂತಿ, ಅನಿಲ ಸಿಂಗಾಡಿ, ರಾಜ್ಯಶ್ರೀ ಸಂಬೋಜಿ, ಪ್ರಿಯಾಂಕಾ ಬಂತಿ, ಜಯಶ್ರೀ ಧರ್ಮಟ್ಟಿ, ವಿಜಯ ಬಂತಿ, ಭಗವಂತ ಬಂತಿ ಇತರರಿದ್ದರು. ಸುನೀಲ ಕಬ್ಬೂರು ನಿರೂಪಿಸಿದರು. ಅಮರನಾಥ ಬಂತಿ ವಂದಿಸಿದರು.