ಲಕ್ಷ್ಮೇಶ್ವರ: ಕರೊನೋತ್ತರ ಕಾಲಾವಧಿಯಲ್ಲಿ ಸ್ವಯಂ ಉದ್ಯೋಗ, ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಯಲ್ಲಿ ತೊಡಗಿರುವ ಜನರಿಗೆ ಆರ್ಥಿಕ ಸಹಾಯ ಕಲ್ಪಿಸುವ ಮೂಲಕ ಅವರನ್ನು ಮತ್ತೆ ಸ್ವಾವಲಂಬಿಗಳನ್ನಾಗಿಸುವ ನಿಟ್ಟಿನಲ್ಲಿ ಸಹಕಾರ ಸಂಘಗಳ ಪಾತ್ರ ಮುಖ್ಯವಾಗಿದೆ ಎಂದು ಮಾಜಿ ಶಾಸಕ ಎಸ್.ಎನ್. ಪಾಟೀಲ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಗದಗ ಜಿಲ್ಲಾ ಸಹಕಾರಿ ಯುನಿಯನ್, ಗದಗ ಜಿಲ್ಲೆಯ ಸಹಕಾರಿ ಇಲಾಖೆ, ಕೆ.ಸಿ.ಸಿ. ಬ್ಯಾಂಕ್ ಮತ್ತು ಕೆ.ಎಂ.ಎಫ್ ಧಾರವಾಡ ಹಾಗೂ ತಾಲೂಕಿನ ಎಲ್ಲ ಸಹಕಾರಿ ಸಂಘಗಳ ಆಶ್ರಯದಲ್ಲಿ ಸೋಮೇಶ್ವರ ರೈತರ ಸಹಕಾರಿ ನೂಲಿನ ಗಿರಣಿ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ 67ನೇ ಅಖಿಲ ಭಾರತ ಸಹಕಾರ ಸಪ್ತಾಹದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರಿ ಸಂಘಗಳು ಗ್ರಾಮೀಣ ಪ್ರದೇಶದ ಬಡ ಜನರ ಕಲ್ಪವೃಕ್ಷವಾಗಿದ್ದು, ಇವುಗಳ ಬೆಳವಣಿಗೆಗೆ ಉತ್ತಮ ಆಡಳಿತ, ಪಾರದರ್ಶಕತೆ, ಪ್ರಾಮಾಣಿಕ ಮತ್ತು ನಿಸ್ವಾರ್ಥ ಸೇವೆ ಅವಶ್ಯಕವಾಗಿದೆ. ಗ್ರಾಮಕ್ಕೆ ಶಾಲೆ, ಗ್ರಾಮ ಪಂಚಾಯಿತಿ, ಆಸ್ಪತ್ರೆ ಅವಶ್ಯವಾಗಿರುವಂತೆ ಸಹಕಾರ ಸಂಘವೂ ಮುಖ್ಯವಾಗಿದೆ. ಸಹಕಾರಿ ಕ್ಷೇತ್ರಕ್ಕೆ ವಿದ್ಯಾವಂತ ಯುವಕರು ಪ್ರವೇಶಿಸಿ ಸಹಕಾರಿ ಸಂಘದ ಸವಲತ್ತುಗಳನ್ನು ಜನರಿಗೆ ತಲುಪಿಸುವ ಆ ಮೂಲಕ ಜನಕಲ್ಯಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಸಹಕಾರಿ ಕ್ಷೇತ್ರಕ್ಕೆ ಗದಗ ಜಿಲ್ಲೆಯ ಕೊಡುಗೆ ಅಪಾರವಾಗಿದ್ದು, ತಾಲೂಕಿನಲ್ಲಿ ದಿ. ಗೂಳಪ್ಪ ಉಪನಾಳ ಅವರು ಸಹಕಾರಿ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.
ಜಿಲ್ಲಾ ಸಹಕಾರಿ ಯೂನಿಯನ್ ಸಿಇಒ ಚಂದ್ರಶೇಖರ ಕರಿಯಪ್ಪನವರ, ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಬಸವರಾಜ ನಿಡಗುಂದಿಮಠ ಮಾತನಾಡಿದರು. ಈ ವೇಳೆ ಸೋಮೇಶ್ವರ ನೂಲಿನ ಗಿರಣಿ ನಿರ್ದೇಶಕ ಬಸವರಾಜ ಉಪನಾಳ ಅಧ್ಯಕ್ಷತೆ ವಹಿಸಿದ್ದರು. ಶಂಕ್ರಪ್ಪ ಗೊರವರ, ಸಹಕಾರ ಸಂಘದ ಅಧಿಕಾರಿಗಳಾದ ಎಚ್.ಎ. ಬಂಡೆಣ್ಣವರ, ಎಂ.ವಿ. ಚುರ್ಚಿಹಾಳ, ಎಸ್.ಜಿ. ಚೋಟಗಲ್, ಬಸವರಾಜ ಜುಮ್ಮಣ್ಣವರ, ನಂದಾ ಧರ್ವಯತ ಸೇರಿ ತಾಲೂಕಿನ ಸಹಕಾರಿ ಸಂಘಗಳ ಪದಾಧಿಕಾರಿಗಳು, ನಿರ್ದೇಶಕರು ಇದ್ದರು. ನೀಲಾ ಬೊಮ್ಮನಹಳ್ಳಿ ನಿರ್ವಹಿಸಿದರು.