ಸ್ವಾಭಿಮಾನ ಜಾಗೃತಿಯಿಂದ ಮಹಿಳೆಯರಿಗೆ ಬಲ

ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಅಭಿಮತ

ಬೆಳಗಾವಿ: ಜಗತ್ತಿನಲ್ಲಿ ಮಹಿಳಾ ದಿನಾಚರಣೆ ಶುರುವಾಗಿ ಹಲವು ದಶಕ ಕಳೆದರೂ ಮಹಿಳೆಯರ ಮೇಲೆ ದೌರ್ಜನ್ಯ, ಶೋಷಣೆ ನಿಂತಿಲ್ಲ. ಸಮಾಜದಲ್ಲಿ ಮಹಿಳೆಯರಿಗೆ ಆಯ್ಕೆ ಸ್ವಾತಂತ್ರೃ ಸಿಗುತ್ತಿಲ್ಲ ಎಂದು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಬೇಸರ ವ್ಯಕ್ತಪಡಿಸಿದರು.

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಕೆ.ಎಲ್.ಇ. ಸಂಸ್ಥೆಯ ಬಿ.ಎಸ್.ಜೀರಗೆ ಸಭಾಂಗಣದಲ್ಲಿ ಶುಕ್ರವಾರ ಕೆಎಲ್‌ಇ ಸಂಸ್ಥೆಯ ಸ್ತ್ರೀ ಶಕ್ತಿ ಸಂಘ ಆಯೋಜಿಸಿದ್ದ ಮಹಿಳಾ ಸಮಾವೇಶದಲ್ಲಿ ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಸಿಗಬೇಕಾದ ಸ್ಥಾನಮಾನ ಸಿಗುತ್ತಿಲ್ಲ. ಎಷ್ಟೋ ದೇಶಗಳಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಕೂಡ ಸಿಕ್ಕಿಲ್ಲ ಎಂದರು.

ಜಾಗತೀಕರಣದ ಯುಗದಲ್ಲಿ ಮಹಿಳೆಯರು ಯಾವುದರಲ್ಲೂ ಹಿಂದೆ ಇಲ್ಲ. ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಪೈಲೆಟ್, ನ್ಯಾಯಾಧೀಶೆ ಕೂಡ ಆಗಿದ್ದಾರೆ. ಪುರುಷಗಿಂತ ಉನ್ನತ ಸ್ಥಾನದಲ್ಲಿ ಸಾಧನೆ ಮಾಡಿರುವ ಸಾಕಷ್ಟು ಮಹಿಳೆಯರು ಸಮಾಜದಲ್ಲಿ ಇದ್ದಾರೆ. ಆದರೆ ಸಮಾಜ ಅವರಿಗೆ ಸಮಾನ ಸ್ವಾತಂತ್ರೃ ಕೊಟ್ಟಿಲ್ಲ. ಇವತ್ತು ಮಹಿಳೆ ಎಲ್ಲವನ್ನೂ ಹೋರಾಟದ ಮೂಲಕವೇ ಪಡೆದುಕೊಳ್ಳುತ್ತಿದ್ದಾಳೆ ಎಂದು ವಿಷಾದ ವ್ಯಕ್ತಪಡಿಸಿದರು.

ಮಹಿಳೆಯರು ಆರ್ಥಿಕವಾಗಿ ಬಲಿಷ್ಠವಾಗಬೇಕು. ಸ್ವಾಭಿಮಾನದಿಂದ ದುಡಿಯಲು ಮುಂದಾದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಪುರುಷ ಪ್ರಧಾನ ಸಮಾಜ ತಾನಾಗಿಯೇ ಹಿಂದೆ ಸರಿಯುತ್ತದೆ. ಅತ್ಯಾಚಾರದಂತಹ ಪ್ರಕರಣಗಳ ವಿರುದ್ಧ ಮಹಿಳೆಯರು ಒಗ್ಗಟ್ಟಿನಿಂದ ಹೋರಾಡಬೇಕು. ಬೇರೆ ಕಡೆಗಳಲ್ಲಿ ಹೋಲಿಕೆ ಮಾಡಿದರೆ ಕರ್ನಾಟಕ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಪ್ರಮಾಣ ಕಡಿಮೆ ಇದೆ ಎಂದರು.
12ನೇ ಶತಮಾನದಲ್ಲಿ ಸಮಾಜದ ಸಮಾನತೆ ಸಂದೇಶ ನೀಡಿದ್ದ ಬಸವಣ್ಣವರ ತತ್ವಗಳನ್ನು ಕೆಎಲ್‌ಇ ಸಂಸ್ಥೆಯಲ್ಲಿ ಪಾಲಿಸಿಕೊಂಡು ಬರುತ್ತಿದ್ದೇವೆ. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಕೆಎಲ್‌ಇ ಸಂಸ್ಥೆಯು ವಿಶೇಷ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದೇವೆ ಎಂದು ಹೇಳಿದರು.

ಗುಲಾಬಿ ಗ್ಯಾಂಗ್ ಸಂಸ್ಥಾಪಕಿ ಸಂಪತ್ ಪಾಲ್ ಮಾತನಾಡಿ, ದೇಶ ಸೇವೆಯಲ್ಲಿ ನಿರತರಾದ ಸೈನಿಕರಿಗೆ ತಾಯಂದಿರ ಆಶೀರ್ವಾದವಿದೆ. ಮಹಿಳೆ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ. ಮಹಿಳೆ ಒಂದು ಮಗುವಿಗೆ ಜನ್ಮ ನೀಡಿ ಅದಕ್ಕೆ ಸಂಸ್ಕೃತಿ ಕಲಿಸಿ ಸಮಾಜದಲ್ಲಿ ಒಳ್ಳೆಯ ಪ್ರಜೆಯಾಗಿ ಮಾಡುವಲ್ಲಿ ಮಹಿಳೆಯ ಪಾತ್ರ ವಿಶೇಷವಾಗಿದೆ. ಮದುವೆಯಾಗಿ ಅತ್ತೆಯ ಮನೆಗೆ ಹೋಗಿ ಆಕೆಯೊಂದಿಗೆ ಜಗಳವಾಡುತ್ತಾಳೆ. ನಂತರ ವಯಸ್ಸಾದ ಮೇಲೆ ಆಕೆ ಸೊಸೆಯೊಂದಿಗೆ ಜಳಗವಾಡುತ್ತಾಳೆ. ನಾರಿಗೆ ನಾರಿಯೇ ವೈರಿಯಾಗಿರುತ್ತಾಳೆ. ಬೇರಾರೂ ಅಲ್ಲ ಎಂದರು.

ಈ ಮೊದಲು ಬಾಲ್ಯ ವಿವಾಹ ಹೆಚ್ಚಾಗುತ್ತಿದ್ದು, ಇದರಿಂದ ಮಹಿಳೆ ಗುಲಾಮ ಪದ್ಧತಿ ಅನುಸರಿಸುವ ಪರಿಸ್ಥಿತಿ ಹೆಚ್ಚಿತ್ತು. ಆದರೆ, ಇದೀಗ ಮಹಿಳೆ ಜಾಗೃತಳಾಗಿದ್ದಾಳೆ. ಈಗಲೂ ಕೆಲವು ಕಡೆ ಬಾಲ್ಯ ವಿವಾಹಗಳು ನಡೆಯುತ್ತಿವೆ. ಶೋಷಣೆಗಳು ನಡೆಯುತ್ತಿದ್ದು, ಮಹಿಳೆಯರು ಸ್ವಯಂ ಪ್ರೇರಣೆಯಿಂದ ಗಟ್ಟಿ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.

ಯಾವುದೇ ಪಕ್ಷ ಕಟ್ಟಲು ಗುಲಾಬಿ ಗ್ಯಾಂಗ್ ಸ್ಥಾಪನೆ ಮಾಡಿಲ್ಲ. ಮಹಿಳೆಯರ ಶೋಷಣೆ, ದೌರ್ಜನ್ಯದ ವಿರುದ್ಧ ಹಾಗೂ ಮಹಿಳೆಯ ಹಕ್ಕುಗಳ ರಕ್ಷಣೆಗಾಗಿ ಗುಲಾಬಿ ಗ್ಯಾಂಗ್ ಮೂಲಕ ಹೋರಾಟ ನಡೆಸುತ್ತಿದ್ದೇನೆ. ಲಖನೌನಲ್ಲಿ ಅನ್ಯಾಯಕ್ಕೊಳಗಾದ ಮಹಿಳೆಯರಿಗೆ ನ್ಯಾಯ ಕಲ್ಪಿಸಲು ಗುಲಾಬಿ ಸೀರೆ ಹಾಕಿಕೊಂಡು ಉಗ್ರ ಹೋರಾಟ ನಡೆಸಿದ ನಂತರ ಸರ್ಕಾರಿ ಅಧಿಕಾರಿಗಳು,ರಾಜಕಾರಣಿಗಳು ನಮ್ಮ ಮಾತು ಕೇಳುತ್ತಿದ್ದಾರೆ ಎಂದರು.

ದೇಶದ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಲಾಗಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ, ಮಹಿಳೆಯರು ಹಕ್ಕಿಗಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ಇದೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಬ್ಯಾಂಕ್ ಪಾಸ್ ಬುಕ್, ಎಟಿಎಂಗಳು ತನ್ನ ಪತಿಯ ಹತ್ತಿರ ಇರುತ್ತವೆ. ಅವಳಿಗೆ ಯಾವುದೇ ನಿರ್ಧಾರ ಕೈಗೊಳ್ಳಲು ಪುರುಷರು ಸ್ವಾತಂತ್ರೃ ನೀಡಿಲ್ಲ. ಶೇ.50ರಷ್ಟು ಮೀಸಲಾತಿ ಎಲ್ಲಿದೆ? ಎಲ್ಲವನ್ನು ಹೋರಾಟ ಮಾಡಿಯೇ ಪಡೆದುಕೊಳ್ಳಬೇಕಾಗಿದೆ ಎಂದರು.

ಮಹಿಳೆಯರು ಜಾಗೃತರಾಗಬೇಕು, ತಮ್ಮ ಸುತ್ತಮುತ್ತಲಿನ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೆ ಅವರ ಪರವಾಗಿ ಧ್ವನಿ ಎತ್ತಿದರೆ ಮಾತ್ರ ಸಮಾಜ ಹೆದರುತ್ತದೆ. ಇಲ್ಲದಿದ್ದರೆ ದೌರ್ಜನ್ಯ ನಿರಂತರವಾಗಿ ನಡೆಯುತ್ತಲೇ ಇರುತ್ತದೆ ಎಂದು ಎಚ್ಚರಿಸಿದರು. ಸಂಘದ ಅಧ್ಯಕ್ಷೆ ಆಶಾತಾಯಿ ಕೋರೆ, ಪ್ರೀತಿ ಕೋರೆ,ಕೆಎಲ್‌ಇ ಸಂಸ್ಥೆಯ ಸಿಬ್ಬಂದಿ ವರ್ಗ ಇದ್ದರು.

ಕೆಎಲ್‌ಇ ಸಂಸ್ಥೆಯಲ್ಲಿನ ಸಿ ಮತ್ತು ಡಿ ದರ್ಜೆಯ ಮಹಿಳಾ ನೌಕರರ ಹೆಣ್ಣು ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಕೆಎಲ್‌ಇ ಸಂಸ್ಥೆ ವಹಿಸಿಕೊಳ್ಳಲಿದೆ. ಎಂಬಿಬಿಎಸ್, ಇಂಜಿನಿಯರಿಂಗ್ ಸೇರಿದಂತೆ ಯಾವುದೇ ಉನ್ನತ ಶಿಕ್ಷಣ ಪಡೆಯಲು ಅವರು ಮುಂದಾದರೆ ಖರ್ಚು ವೆಚ್ಚಗಳನ್ನು ನಾವೇ ಭರಿಸುತ್ತೇವೆ.

| ಡಾ.ಪ್ರಭಾಕರ ಕೋರೆ, ರಾಜ್ಯಸಭೆ ಸದಸ್ಯ ಹಾಗೂ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ