More

  ಟಿ20 ವಿಶ್ವಕಪ್​ಗೆ ಭಾರತ ಮಹಿಳೆಯರ ತಂಡ ಪ್ರಕಟ, ರಾಜ್ಯದ ವೇದಾ, ರಾಜೇಶ್ವರಿಗೆ ಸ್ಥಾನ, 16 ವರ್ಷದ ರಿಚಾ ಹೊಸಮುಖ

  ಮುಂಬೈ: ಕರ್ನಾಟಕದ ಬ್ಯಾಟುಗಾರ್ತಿ ವೇದಾ ಕೃಷ್ಣಮೂರ್ತಿ ಹಾಗೂ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಫೆಬ್ರವರಿ 21 ರಿಂದ ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಮಹಿಳಾ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬಂಗಾಳದ ಯುವ ಬ್ಯಾಟುಗಾರ್ತಿ ರಿಚಾ ಘೋಷ್ ತಂಡದಲ್ಲಿ ಸ್ಥಾನ ಪಡೆದಿರುವ ಹೊಸ ಮುಖ.

  ಹರ್ವನ್​ಪ್ರೀತ್ ಕೌರ್ ಸಾರಥ್ಯದ 15 ಸದಸ್ಯರ ಭಾರತ ತಂಡವನ್ನು ಭಾನುವಾರ ಮುಂಬೈನಲ್ಲಿ ಪ್ರಕಟಿಸಲಾಯಿತು. ಇನ್ನು 15 ವರ್ಷದ ಹರಿಯಾಣದ ಶಾಲಾ ಬಾಲಕಿ ಶಫಾಲಿ ವರ್ಮಗೆ ಇದು ಚೊಚ್ಚಲ ವಿಶ್ವಕಪ್ ಟೂರ್ನಿಯಾಗಿದೆ. ಇತ್ತೀಚೆಗಷ್ಟೇ ನಡೆದ ಚಾಲೆಂಜರ್ಸ್ ಟ್ರೋಫಿ ಟಿ20 ಟೂರ್ನಿಯಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ರಿಚಾ ಗಮನಸೆಳೆದಿದ್ದರು.

  ‘ಕಳೆದ ಒಂದು ವರ್ಷದಲ್ಲಿ 6 ಆಟಗಾರ್ತಿಯರು ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ. 2017ರ ಏಕದಿನ ವಿಶ್ವಕಪ್ ಬಳಿಕ ಮಹಿಳಾ ಕ್ರಿಕೆಟ್​ನಲ್ಲಿ ಸಾಕಷ್ಟು ಬದಲಾವಣೆ ಆಯಿತು. ಪ್ರಸಕ್ತ ತಂಡದಲ್ಲಿ ಹೊಸ ಆಟಗಾರ್ತಿಯರಿಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ಮಹಿಳಾ ತಂಡದ ಆಯ್ಕೆ ಸಮಿತಿಯ ಚೇರ್ಮನ್ ಹೇಮಲತಾ ಕಲಾ ತಿಳಿಸಿದರು.

  ಇದೇ ವೇಳೆ ಜನವರಿ 31 ರಿಂದ ಆಸ್ಟ್ರೇಲಿಯಾದಲ್ಲೇ ನಡೆಯಲಿರುವ ಮಹಿಳಾ ತ್ರಿಕೋನ ಸರಣಿಗೂ 16 ಸದಸ್ಯರ ಭಾರತ ತಂಡ ಪ್ರಕಟಿಸಲಾಯಿತು. ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿದ ತಂಡವನ್ನೇ ತ್ರಿಕೋನ ಸರಣಿಗೆ ಆಯ್ಕೆ ಮಾಡಿದ್ದು, ಜುಹಾನ್ ಪರ್ವೀನ್​ಗೆ 16ನೇ ಆಟಗಾರ್ತಿಯಾಗಿ ಅವಕಾಶ ನೀಡಲಾಗಿದೆ.

  ರಾಜ್ಯದ ಇಬ್ಬರಿಗೆ ಅವಕಾಶ: ಪ್ರತಿಷ್ಠಿತ ಟೂರ್ನಿಗೆ ಕರ್ನಾಟಕದ ಇಬ್ಬರು ಆಟಗಾರ್ತಿಯರು ಸ್ಥಾನಗಿಟ್ಟಿಸಿಕೊಂಡಿದ್ದಾರೆ. 2016ರಲ್ಲಿ ತವರಿನಲ್ಲಿ ನಡೆದ ವಿಶ್ವಕಪ್​ನಲ್ಲಿ ಕರ್ನಾಟಕದ ಮೂವರು ಚುಟುಕು ಸಮರದಲ್ಲಿ ಆಡಿದ್ದರು. ವೇದಾ, ರಾಜೇಶ್ವರಿ ಜತೆಗೆ ವಿಆರ್ ವನಿತಾ ಆಡಿದ್ದರು. ಆದರೆ, ಈ ಬಾರಿ ವನಿತಾ ಸ್ಥಾನ ಉಳಿಸಿಕೊಳ್ಳಲು ವಿಫಲರಾಗಿದ್ದಾರೆ. ಕಳೆದ ವೆಸ್ಟ್ ಇಂಡೀಸ್ ಪ್ರವಾಸಕ್ಕೆ

  ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ವಿಫಲವಾಗಿದ್ದ ರಾಜೇಶ್ವರಿ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಮುಸುಕಾಗಿತ್ತು. ಆದರೆ, ಚಾಲೆಂಜರ್ಸ್ ಟ್ರೋಫಿಯಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸುವ ಮೂಲಕ ಆಯ್ಕೆಗಾರರ ಗಮನಸೆಳೆದಿದ್ದರು. ಅನುಜಾ ಪಾಟೀಲ್ ಹಾಗೂ ಮಾನ್ಸಿ ಜೋಷಿಯನ್ನು ಹಿಂದಿಕ್ಕಿ ಸ್ಥಾನ ಪಡೆದಿದ್ದಾರೆ.

  ವಿಶ್ವಕಪ್ ತಂಡ

  ಹರ್ವನ್​ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದನಾ, ಶಫಾಲಿ ವರ್ಮ, ಜೇಮಿಮಾ ರೋಡ್ರಿಗಸ್, ಹರ್ಲೀನ್ ಡಿಯೊಲ್, ದೀಪ್ತಿ ಶರ್ಮ, ವೇದಾ ಕೃಷ್ಣಮೂರ್ತಿ, ರಿಚಾ ಘೋಷ್, ತಾನಿಯಾ ಭಾಟಿಯಾ, ಪೂನಂ ಯಾದವ್, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ಶಿಖಾ ಪಾಂಡೆ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ.

  ಕಿರಿಯ ಆಟಗಾರ್ತಿಗೆ ಒಲಿದ ಅದೃಷ್ಟ

  ಇದುವರೆಗೂ ರಾಷ್ಟ್ರೀಯ ತಂಡದ ಪರ ಆಡದ ಬಂಗಾಳದ 16 ವರ್ಷದ ಆಟಗಾರ್ತಿ ರಿಚಾ ಘೋಷ್ ಅಚ್ಚರಿಯ ರೀತಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕಳೆದ ವರ್ಷ ಬಂಗಾಳ 19 ವಯೋಮಿತಿ ತಂಡದಲ್ಲಿ ಆಡಿದ್ದ ರಿಚಾ, ಚಾಲೆಂಜರ್ ಟ್ರೋಫಿ ಟೂರ್ನಿಯಲ್ಲಿ ಭಾರತ ಬಿ ಪರ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದರು.

  ಪಂದ್ಯವೊಂದರಲ್ಲಿ 26 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಇದ್ದ 36 ರನ್ ಸಿಡಿಸಿದ್ದರು. ಮತ್ತೊಂದೆಡೆ, 4 ತಿಂಗಳ ಹಿಂದಷ್ಟೇ ಅಂತಾರಾಷ್ಟ್ರೀಯ ಟಿ20ಗೆ ಪದಾರ್ಪಣೆ ಮಾಡಿದ್ದ ಹರಿಯಾಣದ ಮೂಲದ ಶೆಫಾಲಿ ವರ್ಮ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡ ಕಿರಿಯ ಆಟಗಾರ್ತಿ ಎನಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅರ್ಧಶತಕ ಸಿಡಿಸಿದ ಭಾರತದ ಕಿರಿಯರ ಆಟಗಾರ್ತಿ ಎನಿಸಿಕೊಂಡಿದ್ದರು. ಇದರೊಂದಿಗೆ ಸಚಿನ್ ಹೆಸರಿನಲ್ಲಿದ್ದ 30 ವರ್ಷದ ದಾಖಲೆಯನ್ನು ಹಿಂದಿಕ್ಕಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts