ಹೊಸನಗರ: ತಾಲೂಕಿನ ಎಲ್.ಗುಡ್ಡೇಕೊಪ್ಪ ಗ್ರಾಮದಲ್ಲಿ ಸೋಮವಾರ ಮನೆಯೊಂದರ ಮೇಲೆ ತಹಸೀಲ್ದಾರ್ ರಶ್ಮಿ ಹಾಲೇಶ್ ದಾಳಿ ನಡೆಸಿ ನಕಲಿ ಹಕ್ಕುಪತ್ರಗಳು, ಅರಣ್ಯ ಇಲಾಖೆ ಎನ್‌ಒಸಿ, ಸೀಲ್ಗಳು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅನೇಕ ದಿನಗಳಿಂದ ಬರುತ್ತಿದ್ದ ಮಾಹಿತಿ ಆಧರಿಸಿ ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ರಾಜೇಂದ್ರ ಎಂಬುವವನ ಮನೆ ಮೇಲೆ ದಾಳಿ ನಡೆಸಿದೆ. ನೂರಾರು ನಕಲಿ ಹಕ್ಕುಪತ್ರಗಳು, ಅರಣ್ಯ ಇಲಾಖೆ ಎನ್‌ಒಸಿ, ತಾಲೂಕು ಕಚೇರಿ, ಗ್ರಾಪಂ, ಸೊಸೈಟಿ ವಿವಿಧ ಬ್ಯಾಂಕ್‌ಗಳ ನಕಲಿ ಸೀಲ್ಗಳು ಪತ್ತೆಯಾಗಿವೆ. ನಕಲಿ ಹಕ್ಕುಪತ್ರದ ಜಾಲ ಕಾರ್ಯನಿರ್ವಹಿಸುತ್ತಿದೆಯೇ, ಎಷ್ಟು ವರ್ಷದಿಂದ ಈ ಅಕ್ರಮ ನಡೆಯುತ್ತಿದೆ, ಈವರೆಗೆ ಹಂಚಿಕೆಯಾಗಿರುವ ನಕಲಿ ಹಕ್ಕುಪತ್ರಗಳ ಮಾಹಿತಿ ಇನ್ನಷ್ಟೇ ಕಲೆಹಾಕಬೇಕಿದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ. ಶಿರಸ್ತೇದಾರ ಮಂಜುನಾಥ, ಪಿಎಸ್‌ಐ ಶಂಕರಗೌಡ ಪಾಟೀಲ್, ಚಿರಾಗ್, ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.