ಬ್ರಿಟನ್​ ವಶದಲ್ಲಿದ್ದ ತೈಲ ಟ್ಯಾಂಕರ್​ನಲ್ಲಿ ಸಿಲುಕಿದ್ದ 24 ಭಾರತೀಯರ ಬಿಡುಗಡೆ

ಲಂಡನ್​: ಗಿಬ್ರಾಲ್ಟರ್​ ಸರ್ಕಾರದ ವಶದಲ್ಲಿದ್ದ ಇರಾನ್​ನ ತೈಲ ಟ್ಯಾಂಕರ್​ನಲ್ಲಿ ಸಿಲುಕಿದ್ದ 24 ಭಾರತೀಯ ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ವಿ. ಮುರಳೀಧರನ್​ ತಿಳಿಸಿದ್ದಾರೆ.

ಯೂರೋಪಿಯನ್​ ಒಕ್ಕೂಟದ ನಿಯಾಮಾವಳಿಗಳನ್ನು ಉಲ್ಲಂಘಿಸಿ ಸಿರಿಯಾಗೆ ತೈಲ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಜುಲೈ 4 ರಂದು ಗಿಬ್ರಾಲ್ಟರ್​ ಸರ್ಕಾರ ಬ್ರಿಟನ್​ ನೆರವಿನೊಂದಿಗೆ ವಿಎಲ್​ಸಿಸಿ ಗ್ರೇಸ್​ 1 ಹೆಸರಿನ ತೈಲ ಟ್ಯಾಂಕರ್​ ಅನ್ನು ಮತ್ತು ಅದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ವಶಕ್ಕೆ ಪಡೆದಿತ್ತು. ಈ ಹಡಗಿನಲ್ಲಿ 24 ಭಾರತೀಯರು ಕಾರ್ಯ ನಿರ್ವಹಿಸುತ್ತಿದ್ದರು. ಇವರನ್ನು ಬಿಡಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿತ್ತು. ಇದರ ಫಲವಾಗಿ ಗಿಬ್ರಾಲ್ಟರ್​ ಸರ್ಕಾರ ಭಾರತೀಯ ಸಿಬ್ಬಂದಿಯನ್ನು ಬಿಡುಗಡೆ ಮಾಡಿದೆ. ಜತೆಗೆ ಹಡಗನ್ನೂ ಬಿಡುಗಡೆ ಮಾಡಲಾಗಿದೆ.

ಬ್ರಿಟನ್​ ಮತ್ತು ಗಿಬ್ರಾಲ್ಟರ್​ ಸರ್ಕಾರದ ಕ್ರಮಕ್ಕೆ ಪ್ರತಿಯಾಗಿ ಇರಾನ್​ ಸರ್ಕಾರ ಬ್ರಿಟನ್​ಗೆ ಸೇರಿದ ತೈಲ ಟ್ಯಾಂಕರ್​ ಅನ್ನು ಹಾರ್ಮುಜ್ ಜಲಸಂಧಿ ಬಳಿ ವಶಕ್ಕೆ ಪಡೆದಿತ್ತು. ಈ ತೈಲ ಟ್ಯಾಂಕರ್​ನಲ್ಲಿ 18 ಭಾರತೀಯರು ಸಿಲುಕಿದ್ದು, ಅವರ ಬಿಡುಗಡೆಗಾಗಿ ಪ್ರಯತ್ನ ನಡೆಯುತ್ತಿದೆ.

ನಮ್ಮ ಬಿಡುಗಡೆಗಾಗಿ ಪ್ರಯತ್ನಿಸಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ತೈಲ ಟ್ಯಾಂಕರ್​ನ ಕ್ಯಾಪ್ಟನ್​ ಬಿಡುಗಡೆಯ ನಂತರ ಹೇಳಿಕೆ ನೀಡಿದ್ದಾರೆ.