ಗಣರಾಜ್ಯೋತ್ಸವಕ್ಕೆ ನಟಸಾರ್ವಭೌಮ VS ಸೀತಾರಾಮ?

ಬೆಂಗಳೂರು: ‘ಪವರ್ ಸ್ಟಾರ್’ ಪುನೀತ್ ರಾಜ್​ಕುಮಾರ್ ಅಭಿನಯದ ಯಾವ ಚಿತ್ರವು ಈ ವರ್ಷ ತೆರೆಕಂಡಿಲ್ಲ. 2017ರ ಕೊನೆಯಲ್ಲಿ ಅವರ ‘ಅಂಜನಿಪುತ್ರ’ ತೆರೆಕಂಡಿದ್ದು ಬಿಟ್ಟರೆ, ಈ ವರ್ಷ ‘ನಟಸಾರ್ವಭೌಮ’ ಸಿನಿಮಾ ಚಿತ್ರೀಕರಣ ನಡೆದಿತ್ತು. ಆದರೆ, ಅಪು್ಪ ಅಭಿಮಾನಿಗಳ ಪಾಲಿಗೆ 2019 ಹೀಗಿರುವುದಿಲ್ಲ. ಚಿತ್ರೀಕರಣ ಮುಗಿಸಿಕೊಂಡಿರುವ ‘ನಟಸಾರ್ವಭೌಮ’ ಬಳಗ, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬಿಜಿಯಾಗಿದ್ದು, ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಜನವರಿ 24ರಂದು ತೆರೆಗೆ ಬರುವುದಾಗಿ ರಿಲೀಸ್ ಡೇಟ್ ಘೋಷಣೆ ಮಾಡಿಕೊಳ್ಳಲಾಗಿದೆ. ಇದೇ ವೇಳೆ ನಿಖಿಲ್​ಕುಮಾರ್ ಅಭಿನಯದ ‘ಸೀತಾರಾಮ ಕಲ್ಯಾಣ’ ಕೂಡ ಬಿಡುಗಡೆಯಾಗುವ ನಿರೀಕ್ಷೆ ಇದೆ.

ವಿಶೇಷವೆಂದರೆ, ಈ ಎರಡೂ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವುದು ರಚಿತಾ ರಾಮ್ ಈ ಮೂಲಕ ಒಂದೇ ವಾರದಲ್ಲಿ ರಚಿತಾ ಕಡೆಯಿಂದ ಡಬಲ್ ಧಮಾಕಾ ಸಿಗಲಿದೆ. ಸಾಮಾನ್ಯವಾಗಿ ಪುನೀತ್ ರಾಜ್​ಕುಮಾರ್ ಸಿನಿಮಾಗಳನ್ನು ಗುರುವಾರ ರಿಲೀಸ್ ಮಾಡುವಂತಹ ಪರಿಪಾಠ ಮೊದಲಿನಿಂದಲೂ ರೂಢಿಯಲ್ಲಿದೆ. ಅಂತೆಯೇ ‘ನಟಸಾರ್ವಭೌಮ’ 2019ರ ಜ.24ರಂದು ಗುರುವಾರ ತೆರೆಗೆ ಬರಲಿದೆ. ಅತ್ತ ನಿಖಿಲ್ ಸಿನಿಮಾ ಜ.25ರಂದು ಬಿಡುಗಡೆ ಆಗಲು ಪ್ಲಾ್ಯನ್ ಮಾಡಿಕೊಂಡಿದೆ. ಡಿ.10ರಂದು ‘ಸೀತಾರಾಮ ಕಲ್ಯಾಣ’ವನ್ನು ಸೆನ್ಸಾರ್ ಮಂಡಳಿ ಸದಸ್ಯರು ವೀಕ್ಷಣೆ ಮಾಡಲಿದ್ದಾರೆ. ಜ.22ರಂದು ನಿಖಿಲ್ ಜನ್ಮದಿನವಾಗಿದ್ದು, ಅಂದೇ ದೊಡ್ಡದಾಗಿ ಪ್ರಿ-ರಿಲೀಸ್ ಇವೆಂಟ್ ಮಾಡುವ ನಿರೀಕ್ಷೆ ಇಟ್ಟುಕೊಂಡಿದೆ ಚಿತ್ರತಂಡ. ಇನ್ನು, ‘ನಟಸಾರ್ವಭೌಮ’ದಲ್ಲಿ ಪುನೀತ್-ರಚಿತಾ ಜತೆಗೆ ಅನುಪಮಾ ಪರಮೇಶ್ವರನ್ ಕೂಡ ನಟಿಸಿದ್ದು, ಪವನ್ ಒಡೆಯರ್ ನಿರ್ದೇಶನ ಮಾಡಿದ್ದಾರೆ. ರಾಕ್​ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ. ದೊಡ್ಡ ತಾರಾಬಳಗವನ್ನೇ ಹೊಂದಿರುವ ‘ಸೀತಾರಾಮ ಕಲ್ಯಾಣ’ಕ್ಕೆ ಹರ್ಷ ನಿರ್ದೇಶನ ಮಾಡಿದ್ದು, ಅನಿತಾ ಕುಮಾರಸ್ವಾಮಿ ನಿರ್ವಣದ ಹೊಣೆ ಹೊತ್ತಿದ್ದಾರೆ.