400 ಚಿತ್ರಮಂದಿರಗಳಲ್ಲಿ ಸೀತಾರಾಮ

ಬೆಂಗಳೂರು: ನಿಖಿಲ್​ಕುಮಾರ್ ನಟನೆಯ ‘ಸೀತಾರಾಮ ಕಲ್ಯಾಣ’ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಜ.25ರಂದು ದೇಶಾದ್ಯಂತ ಅದ್ದೂರಿಯಾಗಿ ಚಿತ್ರವನ್ನು ತೆರೆಕಾಣಿಸುವ ಉದ್ದೇಶ ಚಿತ್ರತಂಡದ್ದು. ಈ ಹಿಂದೆ ರಿಲೀಸ್ ಆದ ನಿಖಿಲ್ ಅಭಿನಯದ ‘ಜಾಗ್ವಾರ್’ ಚಿತ್ರವೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಇದೀಗ ಅದೇ ಹಾದಿಯಲ್ಲಿ ‘ಸೀತಾರಾಮ ಕಲ್ಯಾಣ’ ಕೂಡ ಸಾಗಿದೆ. ದೇಶಾದ್ಯಂತ 400ಕ್ಕೂ ಅಧಿಕ ಪರದೆಗಳು ಈ ಸಿನಿಮಾಗಾಗಿ ಮೀಸಲಾಗಿವೆಯಂತೆ!

ಸ್ಯಾಂಡಲ್​ವುಡ್​ನ ಜನಪ್ರಿಯ ವಿತರಕ ಸಂಸ್ಥೆಯಾದ ‘ಜಯಣ್ಣ ಕಂಬೈನ್ಸ್’ ಅಡಿಯಲ್ಲಿ ‘ಸೀತಾರಾಮ’ ತೆರೆಕಾಣುತ್ತಿದೆ. ಕರ್ನಾಟಕದಲ್ಲಿ ಅಂದಾಜು 300 ಮತ್ತು ಹೊರರಾಜ್ಯಗಳಲ್ಲಿ 100ಕ್ಕೂ ಅಧಿಕ ಪರದೆಗಳ ಮೇಲೆ ಸಿನಿಮಾ ರಿಲೀಸ್ ಮಾಡಬೇಕು ಎಂಬುದು ನಿರ್ವಪಕರ ಉದ್ದೇಶ. ಎ. ಹರ್ಷ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಫ್ಯಾಮಿಲಿ ಸೆಂಟಿಮೆಂಟ್​ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆಯಂತೆ. ಎಚ್.ಡಿ. ಕುಮಾರಸ್ವಾಮಿ ನಿರ್ವಣದ ಈ ಹಿಂದಿನ ಸಿನಿಮಾಗಳಾದ ‘ಚಂದ್ರ ಚಕೋರಿ’, ‘ಸೂರ್ಯವಂಶ’ ಮಾದರಿಯಲ್ಲೇ ಈ ಬಾರಿ ಕೌಟುಂಬಿಕ ಮೌಲ್ಯಗಳಿಗೆ ಹೆಚ್ಚು ಒತ್ತು ನೀಡಲಾಗಿದೆಯಂತೆ.

ನಿಖಿಲ್ ಜತೆ ಮೊದಲ ಬಾರಿ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಜತೆಗೆ ರವಿಶಂಕರ್, ಶರತ್​ಕುಮಾರ್, ಭಾಗ್ಯಶ್ರೀ, ಮಧು, ಚಿಕ್ಕಣ್ಣ, ನಯನಾ, ಶಿವರಾಜ್ ಕೆ.ಆರ್. ಪೇಟೆ, ಆದಿತ್ಯ ಮೆನನ್ ಸೇರಿ 130ಕ್ಕೂ ಅಧಿಕ ಕಲಾವಿದರು ‘ಸೀತಾರಾಮ’ ಬಳಗದಲ್ಲಿದ್ದಾರೆ. ಚಿತ್ರದ ಹಾಡುಗಳಿಗೆ ಅನೂಪ್ ರುಬೆನ್ಸ್ ಸಂಗೀತ ನೀಡಿದ್ದು, ಈಗಾಗಲೇ ರಿಲೀಸ್ ಆಗಿರುವ ಎರಡು ಹಾಡುಗಳು ಕೇಳುಗರ ಮೆಚ್ಚುಗೆಗೆ ಪಾತ್ರವಾಗಿವೆ. ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮವನ್ನು ಶನಿವಾರ ಮೈಸೂರಿನಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿದ್ದು, ಟ್ರೇಲರ್ ಹಾಗೂ ಸಿನಿಮಾದ ಎಲ್ಲ ಹಾಡುಗಳನ್ನು ಬಿಡುಗಡೆ ಮಾಡಲಾಗುತ್ತಿದೆ.