ಫ್ಯಾಕ್ಟ್​ ಚೆಕ್​: ಅಮೆಜಾನ್​ ಕಾಡ್ಗಿಚಿನಿಂದ ಎನ್ನಲಾದ ವೈರಲ್​ ಆದ ಮಂಗನ ಹೃದಯವಿದ್ರಾವಕ ಫೋಟೊ ಭಾರತಕ್ಕೆ ಸಂಬಂಧಿಸಿದ್ದು

ನವದೆಹಲಿ: ವಿಶ್ವದ ಅತಿದೊಡ್ಡ ಅರಣ್ಯವಾಗಿರುವ ‘ಅಮೆಜಾನ್’​ ಹಿಂದೆಂದೂ ಕಾಣದಂತಹ ಭೀಕರ ಕಾಡ್ಗಿಚ್ಚಿಗೆ ತುತ್ತಾಗಿದೆ. ಸರ್ಕಾರದ ನಿರ್ಲಕ್ಯದ ಬಗ್ಗೆ ವಿಶ್ವಾದ್ಯಂತ ಪರಿಸರ ಪ್ರೇಮಿಗಳು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಅಮೆಜಾನ್​ ಕಾಡ್ಗಿಚ್ಚಿಗೆ ಸಂಬಂಧಪಟ್ಟ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವುಗಳ ನಡುವೆ ನಕಲಿ ಫೋಟೊಗಳು ಹರಿದಾಡುತ್ತಿವೆ.

ಅಮೆಜಾನ್​ನಲ್ಲಿ ಸಂಭವಿಸಿರುವ ಭೀಕರ ಕಾಡ್ಗಿಚ್ಚಿಗೆ ಬ್ರೆಜಿಲ್​ನ ಅತಿದೊಡ್ಡ ನಗರವಾಗಿರುವ ಸಾವೊ ಪೌಲೊ ಸುತ್ತಲೂ ದಟ್ಟ ಹೊಗೆ ಆವರಿಸಿ, ಹಗಲಿನಲ್ಲಿಯೇ ಕತ್ತಲು ಆವರಿಸಿದ್ದು, ವಿಶ್ವದಾದ್ಯಂತ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.

ಕಾಡ್ಗಿಚ್ಚು ಸಂಭವಿಸಿ ಮೂರು ವಾರಗಳು ಕಳೆದಿದ್ದು, ಇದಕ್ಕೆ ಸಂಬಂಧಪಟ್ಟ ಫೋಟೊ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹೆಚ್ಚು ಶೇರ್​ ಆಗುತ್ತಿದ್ದು, ನೋಡಲು ಹೃದಯ ಬಿರಿಯುವಂತಿದೆ. ಆದರೆ, ಕೆಲ ಫೋಟೊಗಳು ಹತ್ತು ವರ್ಷಗಳ ಹಿಂದಿನದ್ದು ಎಂದು ಹೇಳಲಾಗಿದೆ.

ವಿಶೇಷವಾಗಿ ಮಂಗವೊಂದು ತನ್ನ ಮೃತ ಮಗುವಿನ ದೇಹವನ್ನು ತಬ್ಬಿಕೊಂಡು ರೋದಿಸುತ್ತಿರುವ ಫೋಟೊ ಹೆಚ್ಚಾಗಿ ಶೇರ್​ ಆಗುತ್ತಿದೆ. ಸಾಕಷ್ಟು ಟ್ವಿಟ್ಟಿಗರು ಫೋಟೊವಿನೊಂದಿಗೆ ಅಮೆಜಾನ್​ಗಾಗಿ ಪಾರ್ಥನೆ ಸಲ್ಲಿಸುವಂತೆ ಕೋರುತ್ತಿದ್ದಾರೆ.

ಆದರೆ, ಮಂಗನಿಗೆ ಸಂಬಂಧಿಸಿದ ಫೋಟೊ 2017ರಲ್ಲಿ ಭಾರತದ ಫೋಟೊಗ್ರಾಫರ್​ ಅವಿನಾಶ್​ ಲೋಧಿಗೆ ಎಂಬುವರು ಮಧ್ಯಪ್ರದೇಶದ ಜಬಲ್ಪುರದಲ್ಲಿ ತೆಗೆದಿರುವ ಫೋಟೊ ಆಗಿದೆ. ಜಬಲ್ಪುರದಲ್ಲಿರುವ ಮಂಗಗಳ ಬುಡಕಟ್ಟುವಿನಲ್ಲಿ ತೆಗೆದಿರುವ ಫೋಟೊ ಇದಾಗಿದೆ ಎಂದು ತಿಳಿಸಿದ್ದಾರೆ.

ಫೋಟೊ ಬಗ್ಗೆ ಮಾತನಾಡಿರುವ ಅವಿನಾಶ್​ ಲೋಧಿ, ಈ ಫೋಟೊ ನನ್ನ ಹೃದಯಕ್ಕೆ ಹತ್ತಿರವಾದದ್ದು, ಏಪ್ರಿಲ್​ನಲ್ಲಿ ಜಬಲ್ಪುರದಲ್ಲಿ ಈ ಫೋಟೊವನ್ನು ತೆಗೆದಿದ್ದೆ. ಅಲ್ಲಿಯವರೆಗೆ ಸಾಕಷ್ಟು ಫೋಟೊಗಳನ್ನು ತೆಗೆದಿದ್ದೆ. ಆದರೆ, ಪ್ರಾಣಿಗಳ ಭಾವನೆಗಳನ್ನು ವ್ಯಕ್ತಪಡಿಸುವ ಫೋಟೊವನ್ನು ತೆಗೆದಿರಲಿಲ್ಲ ಎಂದಿದ್ದಾರೆ. ಇದೇ ವೇಳೆ ಫೋಟೊ ಬಗ್ಗೆ ವಿವರಿಸಿದ ಅವರು ಪ್ರಜ್ಞೆಯಿಲ್ಲದೇ ಬಿದ್ದಿದ ತನ್ನ ಮಗುವನ್ನು ನೋಡಿ ತಾಯಿ ಕೋತಿ ರೋದಿಸುತ್ತಿರುವುದು ಚಿತ್ರದಲ್ಲಿದೆ ಎಂದಿದ್ದಾರೆ.

ಅಮೆಜಾನ್​ ಪ್ರದೇಶದಲ್ಲಿ ಆಗಸ್ಟ್​ 2015ರಿಂದ ಸುಮಾರು 9,500ಕ್ಕಿಂತ ಹೆಚ್ಚು ಕಾಡ್ಗಿಚ್ಚುಗಳು ಸಂಭವಿಸಿವೆ. ಕಳೆದ ವರ್ಷದಿಂದ ಈ ಪ್ರಮಾಣದಲ್ಲಿ ಇನ್ನೂ ಹೆಚ್ಚಳವಾಗಿದ್ದು, ಶೇ. 83 ತಲುಪಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *