ಹೆಂಡತಿ ದೇಶ ಬಿಡುವುದನ್ನು ತಡೆಯಲು ಈತ ಮಾಡಿದ್ದನ್ನು ಕೇಳಿದ್ರೆ ಶಾಕ್‌ ಆಗೋದು ಖಂಡಿತ, ಪೊಲೀಸರೇ ಒಂದು ಕ್ಷಣ ದಂಗು!

ನವದೆಹಲಿ: ತನ್ನ ಹೆಂಡತಿ ಫಿದಾಯಿನ್‌ ಮತ್ತು ಆಕೆ ಬಾಂಬ್‌ ಸ್ಫೋಟಿಸಲು ದೆಹಲಿ ಏರ್‌ಪೋರ್ಟ್‌ಗೆ ತೆರಳುತ್ತಿದ್ದಾಳೆ ಎಂದು ಆ. 8ರಂದು ಸುಳ್ಳು ಕರೆಯನ್ನು ಮಾಡಿದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸ್‌ ವಿಶೇಷ ಘಟಕ ಬಂಧಿಸಿದೆ.

ಪೊಲೀಸರ ತನಿಖೆ ವೇಳೆ ತನ್ನ ಹೆಂಡತಿಯು ದೇಶವನ್ನು ಬಿಡುವುದನ್ನು ತಡೆಯಲೆಂದು ಸುಳ್ಳು ಕರೆ ಮಾಡಿದ್ದ ಎಂದು ತಿಳಿದು ಬಂದಿದೆ. ಆರೋಪಿಯನ್ನು 29 ವರ್ಷದ ನಸೀರುದ್ದಿನ್ ಎಂದು ಗುರುತಿಸಲಾಗಿದ್ದು, ಬಾವ್ನಾ ಪ್ರದೇಶದಲ್ಲಿ ಬಂಧಿಸಲಾಗಿದೆ.

ಆ. 8ರಂದು ಮಾಡಿದ್ದ ಕರೆಯನ್ನು ಆಧರಿಸಿದ ಅಧಿಕಾರಿಗಳು ಇಂದಿರಾ ಗಾಂಧಿ ಇಂಟರ್‌ ನ್ಯಾಷನಲ್‌ ಏರ್‌ಪೋರ್ಟ್‌ನಲ್ಲಿ ತಾತ್ಕಾಲಿಕವಾಗಿ ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿದ್ದರು.
ನಸೀರುದ್ದಿನ್‌ ಹೆಂಡತಿ ರಫಿಯಾ ಅವರು ಮಧ್ಯ ಪ್ರಾಚ್ಯದ ಗಲ್ಫ್‌ ರಾಷ್ಟ್ರಕ್ಕೆ ತೆರಳಿ ಉದ್ಯೋಗ ಮಾಡಲು ನಿರ್ಧರಿಸಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು. ಈ ವೇಳೆ ಆಕೆಯನ್ನು ತಡೆಯಲು ಮುಂದಾದ ಆತ ಪೊಲೀಸರಿಗೆ ಕರೆ ಮಾಡಿ ದುಬೈ ಅಥವಾ ಸೌದಿ ಅರೇಬಿಯಾಕ್ಕೆ ತೆರಳು ವಿಮಾನದಲ್ಲಿ ನನ್ನ ಪತ್ನಿ ಬಾಂಬ್‌ ಸ್ಫೋಟಿಸಲು ಬರುತ್ತಿದ್ದಾಳೆ ಎಂದು ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಆರೋಪಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಚೆನ್ನೈನಲ್ಲಿ ಮ್ಯಾನುಫ್ಯಾಕ್ಚರಿಂಗ್ ಕಂಪನಿಯನ್ನು ಹೊಂದಿರುವ ನಸೀರುದ್ದೀನ್ ರಫಿಯಾ ಎಂಬಾಕೆಯನ್ನು ಮದುವೆಯಾಗಿದ್ದ. ಯಾವಾಗ ಹೆಂಡತಿಯನ್ನು ದೇಶ ಬಿಟ್ಟು ಹೋಗದಂತೆ ತಡೆಯಲು ಸಾಧ್ಯವಾಗಲಿಲ್ಲವೋ ಆಗ ಆಕೆ ಬಾಂಬರ್‌ ಎಂದು ಬಿಂಬಿಸುವ ಸುಳ್ಳು ಕರೆ ಮಾಡುವ ಯೋಜನೆ ರೂಪಿಸಿದ್ದ. (ಏಜೆನ್ಸೀಸ್)

Leave a Reply

Your email address will not be published. Required fields are marked *