More

    ಮೈಸೂರಿನಲ್ಲಿ ಜೂ.3, 4 ರಂದು ಬೀಜ ಉತ್ಸವ

    ಮೈಸೂರು: ದೇಸಿಯ ಬೀಜ ವೈವಿಧ್ಯದ ಮಹತ್ವದ ಬಗ್ಗೆ ರೈತರು ಮತ್ತು ಗ್ರಾಹಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಸಹಜ ಸಮೃದ್ಧ ಸಂಸ್ಥೆಯು ಸಹಜ ಸೀಡ್ಸ್ ಸಹಯೋಗದಲ್ಲಿ ನಗರದ ನಂಜರಾಜೇ ಬಹದ್ದೂರು ಛತ್ರದಲ್ಲಿ ಜೂ.3, 4 ರಂದು ಬೀಜ ಉತ್ಸವ ಮತ್ತು ಆಹಾರ ಮೇಳ ಹಮ್ಮಿಕೊಳ್ಳಲಾಗಿದೆ.

    ‘ಬೀಜ ಉತ್ಸವವು ನಮ್ಮ ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ಪುನರುಜ್ಜೀವನಗೊಳಿಸಲು ಮತ್ತು ನಮ್ಮ ಬೀಜ ಪರಂಪರೆಯ ವೈಭವವನ್ನು ತೋರುವ ಕಾರ್ಯಕ್ರಮವಾಗಿದೆ. ಸ್ಥಳೀಯ ಆಹಾರ ಸಂಸ್ಕೃತಿಗಳ ಪರಿಚಯ ಮಾಡಿಕೊಡುವ ಉದ್ದೇಶ ಹೊಂದಿದೆ’ ಎಂದು ಸಹಜ ಸಮೃದ್ಧ ಸಂಸ್ಥೆಯ ಸಂಸ್ಥಾಪಕ ಕೃಷ್ಣಪ್ರಸಾದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಎರಡು ದಿನಗಳ ಬೀಜ ಮೇಳದಲ್ಲಿ ರಾಜ್ಯದ 30ಕ್ಕೂ ಹೆಚ್ಚಿನ ಬೀಜ ಸಂರಕ್ಷಕರ ಗುಂಪುಗಳು ಪಾಲ್ಗೊಳ್ಳಲಿವೆ. ವಿವಿಧ ದೇಸಿ ತಳಿಗಳನ್ನು ಬೀಜ ಮೇಳದಲ್ಲಿ ಪ್ರದರ್ಶಿಸಲಾಗುತ್ತಿದ್ದು, 1000ಕ್ಕೂ ಹೆಚ್ಚಿನ ದೇಸಿ ಧಾನ್ಯ, ತರಕಾರಿ, ಕಾಳು, ಗೆಡ್ಡೆ ಗೆಣಸು, ಸೊಪ್ಪು ಮತ್ತು ಹಣ್ಣಿನ ತಳಿಗಳನ್ನು ಪ್ರದರ್ಶಿಸಲಾಗುವುದು. ಗುಣ ಮಟ್ಟದ ಭತ್ತ, ಸಿರಿಧಾನ್ಯ ಮತ್ತು ತರಕಾರಿ ಬೀಜಗಳು ಮಾರಾಟಕ್ಕೆ ಸಿಗಲಿವೆ. ಕೆಂಪು ಬಣ್ಣದ ಸಿದ್ದು ಹಲಸು ಮತ್ತು ಇತರೆ ಹಣ್ಣಿನ ಗಿಡಗಳು ಮಾರಾಟಕ್ಕೆ ಲಭ್ಯವಿವೆ. ರೈತ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಭತ್ತದ ತಳಿಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

    ಧಾರವಾಡದ ಮಹಿಳಾ ಸಂಘಗಳು ರಾಗಿ, ಸಾವೆ, ಹಾರಕ,ಬರಗು, ನವಣೆಯ ವಿವಿಧ ತಳಿಯ ಬೀಜ ಮತ್ತು ಸಿರಿಧಾನ್ಯ ಅಕ್ಕಿಯನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ತರಲಿವೆ. ಮೈಸೂರಿನ ಜನತೆಗೆ ದೇಸೀ ಸೊಗಡಿನ ಆಹಾರಗಳನ್ನು ಪರಿಚಯಿಸಲು ಉತ್ತರ ಕರ್ನಾಟಕದ ಮಹಿಳೆಯರು ಸಾಂಪ್ರದಾಯಿಕ ಅಡುಗೆಗಳ ಜೊತೆ ಬರಲಿದ್ದಾರೆ. ಬಾಯಿ ನೀರೂರಿಸುವ ಸಾವೆ ರೊಟ್ಟಿ ಮೇಳದ ಆಕರ್ಷಣೆಯಾಗಲಿದೆ ಎಂದು ತಿಳಿಸಿದ್ದಾರೆ.

    ವಿವಿಧ ಸಾವಯವ ಮಳಿಗೆಗಳು, ರೈತ ಉತ್ಪಾದಕರ ಗುಂಪುಗಳು ಬೇಳೆ ಕಾಳುಗಳು, ಹಣ್ಣು ಹಂಪಲು ಮಾರಾಟಕ್ಕೆ ತರಲಿವೆ. ಅಪರೂಪದ ಬೀಜ, ಹಣ್ಣು, ಕಾಯಿ ಸೇರಿದಂತೆ ಕೃಷಿ ವೈವಿಧ್ಯದ ಉತ್ಪನ್ನಗಳು ಪ್ರದರ್ಶನಕ್ಕೆ ಬರಲಿವೆ. ನೈಸರ್ಗಿಕವಾಗಿ ಬೆಳೆದ ಮಾವು ಮಾರಾಟಕ್ಕೆ ಬರುತ್ತಿದೆ. ಬೀಜ ಸಂರಕ್ಷಣೆ ಮತ್ತು ಸಾವಯವ ಬೀಜೋತ್ಪಾದನೆಯ ಬಗ್ಗೆ ಜೂ. 4 ರಂದು ಬೆಳಗ್ಗೆ 10.30 ಕ್ಕೆ ತರಬೇತಿ ಏರ್ಪಡಿಸಲಾಗಿದೆ. ತರಬೇತಿ ಉಚಿತವಾಗಿದ್ದು, ನೋದಣಿ ಕಡ್ಡಾಯವಾಗಿದೆ ಎಂದರು.

    ಗ್ರೀನರಿ ಮೈಸೂರು ಸಂಘಟನೆಯು ಬೀಜಮೇಳದಲ್ಲಿ ಕಾಡಿನ ಗಿಡಗಳು, ಬೀಜಗಳು, ಔಷಧಿಗಳ ಸಸ್ಯಗಳ ವಿಸ್ಮಯ ಲೋಕವನ್ನು ಪರಿಚಯ ಮಾಡಲಿದೆ. ಇವುಗಳ ಬಗ್ಗೆ ಅರಿವು ಮೂಡಿಸುವ ಜೊತೆಗೆ ಆಸಕ್ತ ಪರಿಸರ ಪ್ರಿಯರಿಗೆ ಬೀಜ ಮತ್ತು ಗಿಡಗಳನ್ನು ಕನಿಷ್ಠ ಬೆಲೆಯಲ್ಲಿ ಮಾರಾಟ ಮಾಡಲಿದೆ. ಅಪರೂಪದ ಗಿಡಗಳಾದ ಅಂಟುವಾಳ, ಬೆಣ್ಣೆಹಣ್ಣು, ರಕ್ತ ಚಂದನ ನೋನಿ, ಸೀಮಾರೂಬಾ, ಲಕ್ಷ್ಮಣಫಲ ಮುಂತಾದ ಗಿಡಗಳ ಬೀಜಗಳು ದೊರಕಲಿವೆ ಎಂದು ತಿಳಿಸಿದ್ದಾರೆ.

    ಬೀಜದುಂಡೆಯ ಪರಿಕಲ್ಪನೆಯನ್ನು ಇತ್ತೀಚಿಗೆ ಕಾಡಿನಲ್ಲಿ ಹಾಗೂ ಗುಡ್ಡಗಳಲ್ಲಿ ಮರಗಿಡ ಬೆಳೆಸಲು ಬಳಸಲಾಗುತ್ತಿದೆ. ಈ ಕಾರ್ಯಕ್ರಮವನ್ನು ಅದ್ಭುತವಾಗಿ ಮಾಡಿ ರಾಜ್ಯದ ಗಮನ ಸೆಳೆದಿರುವ ಚಿಕ್ಕನಾಯಕನಹಳ್ಳಿಯ ನೆರಳು ಸಂಘಟನೆಯ ಯುವಜನರು, ಮೈಸೂರಿನ ಮಕ್ಕಳಿಗೆ ಬೀಜದುಂಡೆ ತಯಾರಿಸುವ ಕೌಶಲ್ಯ ಕಲಿಸಿಕೊಡಲಿದ್ದಾರೆ. ಮೇಳದ ಕುರಿತ ಹೆಚ್ಚಿನ ಮಾಹಿತಿಗೆ ಮೊ: 9880908608 ಸಂಪರ್ಕಿಸಬಹುದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts