More

    ಸಮಕಾಲೀನ ಸಂದರ್ಭದಲ್ಲಿ ಧರ್ಮದ ಈ ಪರಿ ನೋಡಾ…

    ಸಮಕಾಲೀನ ಸಂದರ್ಭದಲ್ಲಿ ಧರ್ಮದ ಈ ಪರಿ ನೋಡಾ...

    ‘ಧರ್ಮನಿರಪೇಕ್ಷ’ ಎಂಬ ಪರಿಕಲ್ಪನೆಯನ್ನು ‘ಸೆಕ್ಯುಲರ್’ ಎಂಬುದಕ್ಕೆ ಪರ್ಯಾಯವಾಗಿ ಬಳಸಲಾಗುತ್ತಿದೆ. ಆಕ್ಸ್​ಫರ್ಡ್ ನಿಘಂಟಿನ ಪ್ರಕಾರ ‘ಸೆಕ್ಯುಲರಿಸಮ್ ಎಂದರೆ ದೇವರು ಅಥವಾ ಸ್ವರ್ಗ ನರಕಗಳ ಭವಿಷ್ಯದ ಅವಸ್ಥೆಯಲ್ಲಿ ನಂಬಿಕೆಯಿಟ್ಟು ಅದರಿಂದ ಪಡೆವ ಎಲ್ಲ ತೀರ್ವನಗಳಿಂದ ಹೊರತಾದ, ಮಾನವನ ಒಳಿತು, ನೈತಿಕತೆಯನ್ನು ಮಾತ್ರ ಆಧರಿಸಿರಬೇಕೆಂಬ ತತ್ತ್ವ. ಚೇಂಬರ್ಸ್ ನಿಘಂಟಿನಲ್ಲಿ ‘ಸೆಕ್ಯುಲರಿಸಮ್ ಎಂದರೆ ಸರ್ಕಾರ, ಶಿಕ್ಷಣ, ಸಾರ್ವಜನಿಕ ಸಂಸ್ಥೆಗಳು ಇತ್ಯಾದಿಯೆಲ್ಲ ಧರ್ಮದಿಂದ ಮುಕ್ತವಾಗಿರಬೇಕೆಂಬ ನಿಲವು. ಇದು ಪಾಶ್ಚಾತ್ಯರು ನೀಡುವ ವಿವರಣೆ. ಇದಕ್ಕೆ ತನ್ನದೇ ಆದ ಇತಿಹಾಸವಿದೆ. ಯುರೋಪಿನಲ್ಲಿ ರಿನೈಸಾನ್ಸ್ ಕಾಲದವರೆಗೂ ಪ್ರಭುತ್ವ ಧರ್ಮದ ಅಡಿಯಾಳಾಗಿತ್ತು. ಸುದೀರ್ಘ ಹೋರಾಟದ ನಂತರ ರಾಜ್ಯಶಕ್ತಿ ಧರ್ಮಗುರುಗಳ ಹಿಡಿತದಿಂದ ಬಿಡಿಸಿಕೊಳ್ಳಲು ಸಾಧ್ಯವಾಯಿತು. ಇಲ್ಲಿ ಒಂದು ಸಂಗತಿಯನ್ನು ಗಮನಿಸಬೇಕು. ಈ ಹೋರಾಟ ಮೂಲತಃ ಧರ್ಮದ ವಿರುದ್ಧವಲ್ಲ; ಹೋರಾಟದ ಮುಂಚೂಣಿಯಲ್ಲಿದ್ದವರಿಗೂ ಧಾರ್ವಿುಕ ಶ್ರದ್ಧೆಯಿತ್ತು. ಆದರೆ ಅವರು ಹೋರಾಡಿದ್ದು ಧರ್ಮದ ಸಾಂಸ್ಥಿಕ ವ್ಯವಸ್ಥೆಯ ವಿರುದ್ಧ. ಯಾವುದೇ ಧರ್ಮವೂ ಹಿಂಸೆ, ಶೋಷಣೆಯನ್ನು ಪ್ರತಿಪಾದಿಸುವುದಿಲ್ಲ. ಆದರೆ ಧರ್ಮದ ನೇತೃತ್ವ ವಹಿಸಿದ ‘ಧರ್ಮಗುರು’ಗಳು ತಮ್ಮ ಹಿತಾಸಕ್ತಿಗಾಗಿ ಜನರ ಧಾರ್ವಿುಕ ನಂಬಿಕೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಸಾಮಾನ್ಯಜನರ ನಡುವೆ ಹಿಂಸೆ, ದ್ವೇಷ, ಅಸಹನೆ, ಶೋಷಣೆ ಇವುಗಳಿಗೆ ಹಾದಿಮಾಡಿಕೊಡುತ್ತಾರೆ. ಸಾಮಾಜಿಕವಾಗಿ ತಮ್ಮ ‘ಅಧಿಕಾರ’ ಸ್ಥಾಪಿಸಲು ‘ಪ್ರಭುತ್ವ’ದ ಆಶ್ರಯ ಪಡೆಯುತ್ತಾರೆ. ಈ ಹಿನ್ನೆಲೆಯಲ್ಲಿ ಅಲ್ಲಿ ‘ಧರ್ಮನಿರಪೇಕ್ಷತೆ’ಯ ವ್ಯಾಖ್ಯಾನವಿದೆ.

    ಆದರೆ ಭಾರತೀಯ ಧರ್ಮನಿರಪೇಕ್ಷ ಪರಿಕಲ್ಪನೆಯಲ್ಲಿ ಯಾವುದೇ ಧರ್ಮದ ಅಥವಾ ಧಾರ್ವಿುಕ ಆಚರಣೆಯ ನಿರಾಕರಣೆಯಿಲ್ಲ; ಸರ್ಕಾರ ಯಾವೊಂದು ಧರ್ಮದ ಪರ ಅಲ್ಲ ಎಂಬ ಅರ್ಥದಲ್ಲಿ ಧರ್ಮನಿರಪೇಕ್ಷ ಎನಿಸಿದ್ದರೂ, ಭಾರತದ ಸಂವಿಧಾನ ಎಲ್ಲ ನಾಗರಿಕರಿಗೂ ತಮ್ಮ ಧರ್ಮಗಳನ್ನು, ವ್ಯಕ್ತಿಯಾಗಿ ಮತ್ತು ಸಮುದಾಯವಾಗಿ ಆಚರಿಸಲು, ಬೋಧಿಸಲು ಹಾಗೂ ಪ್ರಚುರಪಡಿಸಲು ಅವಕಾಶ ಮಾಡಿಕೊಟ್ಟಿದೆ. ಆದರೆ ಜಾತಿ, ಮತ, ಜನಾಂಗ, ಲಿಂಗ ಮತ್ತು ಧರ್ಮ ಆಧಾರಿತ ಭೇದಗಳೇನೇ ಇದ್ದರೂ ಎಲ್ಲ ನಾಗರಿಕರೂ ಭಾರತದ ಸಂವಿಧಾನದ ದೃಷ್ಟಿಯಲ್ಲಿ ಸಮಾನರು.

    ಮನುಷ್ಯನ ಕುತೂಹಲ, ಭಯಕ್ಕೆ ಕಾರಣವಾದ ಪ್ರಕೃತಿಯ ಅತೀತ ಶಕ್ತಿಯ ಎದುರಿಗೆ ಹುಟ್ಟುವ ವಿಧೇಯತೆಯಿಂದ ಧರ್ಮಗಳು ರೂಪುಗೊಳ್ಳುತ್ತವೆ. ಈ ‘ವಿಧೇಯತೆ’ಯೇ ಮುಂದೆ ಧರ್ಮದ ಪ್ರಧಾನ ಲಕ್ಷಣವಾಯಿತು. ಎಲ್ಲ ಬಗೆಯ ಪ್ರಶ್ನೆಗಳಿಗೆ ಮೀರಿದ ಪ್ರಶ್ನಾತೀತ ನೆಲೆ ಧರ್ಮಕ್ಕೆ ಪ್ರಾಪ್ತವಾಯಿತು. ಆಧುನಿಕ ಸಂದರ್ಭದಲ್ಲಿಯೂ ಧರ್ಮಗಳು ಇದೇ ಬಗೆಯ ಶರಣಾಗತಿಯ ‘ವಿಧೇಯತೆ’ಯನ್ನು ಬಯಸುತ್ತವೆ; ಯಾವ ಹಂತದಲ್ಲಿಯೂ ಪ್ರತಿರೋಧವನ್ನು, ಪ್ರಶ್ನೆಯನ್ನು ಬಯಸದ ಧರ್ಮಗಳು ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲು ನಿರಂತರ ಪ್ರಯತ್ನಿಸುತ್ತಿರುತ್ತವೆ. ಆದರೆ ಮನುಷ್ಯನ ಒಳಿತನ್ನು ಬಯಸುವ ನಿಜವಾದ ಧರ್ಮ ತನ್ನ ಚಲನಶೀಲತೆ ಕಾಪಾಡಿಕೊಂಡದ್ದು, ಅರ್ಥಪೂರ್ಣವಾದದ್ದು ಇದರ ವಿರುದ್ಧ ಸಿಡಿದೆದ್ದ ದಂಗೆಕೋರರಿಂದ. ಬುದ್ಧ, ಬಸವಣ್ಣ, ಮಾರ್ಟಿನ್ ಲೂಥರ್ ಹೀಗೆ ದಂಗೆಯೆದ್ದವರು. ಆದರೆ ಹೀಗೆ ದಂಗೆಯೇಳುವುದು ಸುಲಭವಲ್ಲ; ಇಂತಹ ಹೊತ್ತಿನಲ್ಲಿ ಧರ್ಮದ ನಿಷ್ಠಾವಂತ ಜಡ ಅನುಯಾಯಿಗಳು ಸಂಘಟಿತರಾಗಿ ಭಿನ್ನಮತೀಯರನ್ನು ಸದೆಬಡಿಯಲು ಪ್ರಯತ್ನಿಸುತ್ತಾರೆ. ಧರ್ಮದ ಅಸ್ತಿತ್ವವಿರುವುದೇ ಅಂಧ ಅನುಯಾಯಿಗಳ ‘ವಿಧೇಯತೆ’ಯಲ್ಲಿಯೇ ಹೊರತು ಅರ್ಥಪೂರ್ಣ ಸಂವಾದ ನಡೆಸಲು ಬಯಸುವ ಸಂವೇದನಾಶೀಲ ಮನಸ್ಸುಗಳಿಂದಲ್ಲ.

    ಧರ್ಮವಾಗಲೀ, ವಿಜ್ಞಾನವಾಗಲೀ ಮಾನವಕುಲವನ್ನು ಪೊರೆಯುವ ಶಕ್ತಿಯುಳ್ಳಂಥವು. ಶತಶತಮಾನಗಳಿಂದ ನಮ್ಮಲ್ಲಿ ಧಾರ್ವಿುಕ ನಂಬಿಕೆಗಳು ಗಾಢವಾಗಿ ಉಳಿದುಬಂದಿವೆ. ಈ ನಂಬಿಕೆ ಅಸಹಾಯಕ ಮನಸ್ಸುಗಳಿಗೆ ಆಸರೆ ಒದಗಿಸಿದೆ. ತಮ್ಮ ತಮ್ಮ ನಂಬಿಕೆಗಳಿಗನುಗುಣವಾಗಿ ಧಾರ್ವಿುಕ ಆಚರಣೆಗಳೂ ರೂಢಿಗೆ ಬಂದಿವೆ. ಸಗಣಿಗೆ ಗರಿಕೆ ಸಿಕ್ಕಿಸಿದರೆ ಬೆನಕನಾಗಿ ಪೂಜಾರ್ಹವಾಗುವ ಬಗೆ ವಿಸ್ಮಯಕಾರಿ. ನಂಬಿಕೆಯಿರುವವನಿಗೆ ಯಾವ ಕಲ್ಲೂ ದೇವರಾಗಬಲ್ಲುದು. ದಿನನಿತ್ಯದ ಕಾಯಕವೇ ಪೂಜೆಯಾಗಬಲ್ಲುದು. ಮನಸ್ಸಿನಂತೆ ಮಹದೇವ. ಸಂಕಟ ಸಮಯದಲ್ಲಿ ಅತೀತ ಶಕ್ತಿಯ ಬಗೆಗಿನ ಇಂತಹ ನಂಬಿಕೆ ಭರವಸೆಯ ಬೆಳಕಾಗಿ ದಾರಿ ತೋರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಹೀಗಾಗಿಯೇ ಆಧುನಿಕ ಜಗತ್ತಿನಲ್ಲಿಯೂ ಧರ್ಮದ ಪ್ರಭಾವಕ್ಕೆ ಕುಂದು ಬಂದಿಲ್ಲ; ಅಥವಾ ಬಾಹ್ಯ ಒತ್ತಡಗಳಲ್ಲಿ ಸಿಲುಕಿ ಆತ್ಮಶಕ್ತಿ ಕಳೆದುಕೊಳ್ಳುತ್ತಿರುವ ಆಧುನಿಕ ಮನಸ್ಸುಗಳಿಗೆ ಧರ್ಮ ಒಂದು ರೀತಿಯ ಸಿದ್ಧೌಷಧವಾಗಿಯೂ ಚಾಲನೆಯಲ್ಲಿದೆ. ಧರ್ಮ ಹೀಗೆ ನಮ್ಮ ಭಾವಜಗತ್ತನ್ನು ಪೋಷಿಸಿದರೆ ವಿಜ್ಞಾನ ನಮ್ಮ ಭವಜಗತ್ತಿಗೆ ಅನೇಕ ಸವಲತ್ತುಗಳನ್ನು ಒದಗಿಸಿಕೊಡುವುದರ ಮೂಲಕ ಬದುಕನ್ನು ಹೆಚ್ಚು ಸುಖಕರವಾಗಿಸಿದೆ. ಆದರೆ ಹೀಗೆ ಮಾನವನ ಬದುಕಿಗೆ ಉಪಯುಕ್ತವಾದ ಧರ್ಮವಾಗಲೀ, ವಿಜ್ಞಾನವಾಗಲೀ ಅಧಿಕಾರ ಪಿಪಾಸುಗಳ ಕೈಯಲ್ಲಿ ಸಿಲುಕಿದಾಗ ಅವು ಭಯಾನಕ ರೂಪ ತಳೆದು ಮಾನವನ ವಿನಾಶಕ್ಕೆ ಕಾರಣವಾಗುವುದನ್ನು ಇತಿಹಾಸ ತಿಳಿಸಿಕೊಡುತ್ತದೆ. ವರ್ತಮಾನದಲ್ಲಿ ಹೀಗೆ ಧರ್ಮ ಹಾಗೂ ವಿಜ್ಞಾನ ಮೂಲ ಆಶಯಗಳಿಂದ ದೂರವಾಗಿ ಭಯಾನಕ ರೂಪ ತಾಳಿವೆಯೇ? ಧರ್ಮ ಮೂಲನೆಲೆಯಲ್ಲಿ ಇತ್ಯಾತ್ಮಕವಾದರೂ ಅದು ‘ಸಾಂಸ್ಥಿಕ ರೂಪ’ ಪಡೆದಾಗ ಅಧಿಕಾರದ ಅಮಲು ಅದನ್ನು ಆವರಿಸುತ್ತದೆ.

    ವ್ಯವಸ್ಥೆ ವಿರುದ್ಧದ ಪ್ರತಿಭಟನೆಗೆ ಎರಡು ಮಾದರಿಗಳಿವೆ. ಹೊಟ್ಟೆ, ಬಟ್ಟೆಗಳಿಗೆ ತೊಂದರೆಯಾದಾಗ ಮನುಷ್ಯ ವ್ಯವಸ್ಥೆಯನ್ನು ನಾಶ ಮಾಡಲು ಪ್ರಯತ್ನಿಸುತ್ತಾನೆ. ಕಾರ್ಲ್ ಮಾರ್ಕ್ಸನ ಚಿಂತನೆಗಳಲ್ಲಿ ಇದನ್ನು ಗುರ್ತಿಸಬಹುದು. ಆದರೆ ಮನುಷ್ಯರು ಸಿಡಿದೇಳಲು ಹೊಟ್ಟೆ, ಬಟ್ಟೆಗೆ ಸಂಬಂಧಿಸಿಲ್ಲದ ಪ್ರೇರಣಾ ಕಾರಣಗಳೂ ಇರುತ್ತವೆ. ಕೆಳವರ್ಗಗಳಲ್ಲಿ ಬದುಕುತ್ತಿರುವ ಜನರಿಗೆ ಬದುಕು ಹೇಗೆ ಅಸಹನೀಯವಾಗುತ್ತದೆಯೋ ಹಾಗೆಯೇ ಎಲ್ಲ ಬಗೆಯ ಸವಲತ್ತು ಪಡೆದ ಜನಸಮುದಾಯಕ್ಕೂ ಮಾನಸಿಕವಾಗಿ ಉಸಿರು ಕಟ್ಟುವ ಸ್ಥಿತಿ ಉಂಟಾಗುತ್ತದೆ. ಇದು ಎಲ್ಲ ಸಂವೇದನಾಶೀಲರಿಗೂ ಅನುಭವಕ್ಕೆ ಬರುವ ಸಂಗತಿ. ಅದು ಸಹಜವಾಗಿಯೇ ಕ್ರಾಂತಿಗೆ ಕಾರಣವಾಗುತ್ತದೆ. ನಮ್ಮ ಕಾಲದಲ್ಲಿ ಸುತ್ತಮುತ್ತ ಸಂಭವಿಸುತ್ತಿರುವ ಘಟನೆಗಳು ಹೀಗೆ ನಮ್ಮ ಉಸಿರು ಕಟ್ಟಿಸುತ್ತಿದೆಯಲ್ಲವೇ? ಕನ್ನಡ ಮನಸ್ಸು ಧರ್ಮವನ್ನು ಸೃಜನಶೀಲ ನೆಲೆಯಲ್ಲಿ ಗ್ರಹಿಸಿ ವ್ಯಾಖ್ಯಾನಿಸಿರುವ ರೀತಿ ಧರ್ಮವನ್ನು ಜಡವಾಗಲು ಬಿಡದೆ ಅದನ್ನು ಚಲನಶೀಲವಾಗಿರಿಸಲು ಮಾಡಿದ ಪ್ರಯತ್ನಗಳೆಂಬಂತೆ ತೋರುತ್ತದೆ. ಜಿನಾಗಮವನ್ನು ಪ್ರತಿಪಾದಿಸಲು ಬರೆದ ತನ್ನ ‘ಆದಿಪುರಾಣ’ದಲ್ಲಿ ‘ಅರಿವುದು ಧರ್ಮಮುಮಂ ಕಾವ್ಯಧರ್ಮಮುಮಂ’ ಎಂದು ಹೇಳುವುದರ ಮೂಲಕ ಧರ್ಮವನ್ನು ಅದರ ಜಡಸ್ವರೂಪದಲ್ಲಲ್ಲದೆ ಸೃಜನಶೀಲ ನೆಲೆಯಲ್ಲಿ ಗ್ರಹಿಸಬೇಕೆಂದು ಸೂಚಿಸುವ ಪಂಪ ಧಾರ್ವಿುಕ ಚೌಕಟ್ಟಿನಲ್ಲಿ ಮನುಷ್ಯನ ಮೂಲಭೂತ ಪ್ರವೃತ್ತಿಗಳಾದ ‘ಭೋಗ’ ಮತ್ತು ‘ಅಧಿಕಾರ’ಗಳ ಬಗ್ಗೆ ವಿಶ್ಲೇಷಿಸುತ್ತಾನೆ. ಆದಿಪುರಾಣದಲ್ಲಿ ಪಂಪ ಎರಡು ಕತೆಗಳನ್ನು ಹೇಳುತ್ತಾನೆ. ಮೊದಲನೆಯದು ಆದಿನಾಥ ಪುರುದೇವನ ಕತೆ. ಒಂದು ಜೀವ ಇಹದ ಬದುಕನ್ನು ಉತ್ಕಟವಾಗಿ ಅನುಭವಿಸುತ್ತ ಆ ಅನುಭವಗಳ ತುತ್ತತುದಿಯಲ್ಲಿ ‘ಅರಿವು’ ಪಡೆಯುವ ಭೋಗನಿರಸನದ ತೀರ್ಥಂಕರನ ಕತೆ. ಮತ್ತೊಂದು ಭರತ ಚಕ್ರವರ್ತಿಯ ದಿಗ್ವಿಜಯದ ಅಧಿಕಾರ ಹಂಬಲದ ಕತೆ. ಜಗತ್ತನ್ನೇ ಗೆದ್ದುಬಂದ ಭರತ ಕಡೆಗೆ ತನ್ನ ತಮ್ಮ ಬಾಹುಬಲಿಯನ್ನು ಗೆಲ್ಲುವ ಸೆಣಸಿನಲ್ಲಿ ಸೋಲುತ್ತಾನೆ. ಗೆದ್ದ ಬಾಹುಬಲಿ ಈ ಅಧಿಕಾರದ ಹಂಬಲ ‘ಸೋದರರೊಳ್ ಸೋದರರಂ / ಕಾದಿಸುವುದು ಸುತನ ತಂದೆಯೆಡೆಯೊಳ್ ಬಿಡದು / ಉತ್ಪಾದಿಸುವುದು ಕೋಪಮನ್ ಅಳವು / ಈ ದೊರೆತೆನೆ ತೊಡರ್ವದೆಂತೊ ರಾಜ್ಯಶ್ರೀಯೊಳ್’ ಎಂದು ಪರಿಭಾವಿಸಿ ಎಲ್ಲವನ್ನೂ ಅಣ್ಣನಿಗೊಪ್ಪಿಸಿ ವಿರಾಗಿಯಾಗುತ್ತಾನೆ. ಆತ್ಮಸಂಯಮವಿರದ ಭೋಗ, ಸೌಹಾರ್ದ ಸಂಬಂಧಗಳನ್ನು ಹದಗೆಡಿಸುವ ಅಧಿಕಾರಲಾಲಸೆ ನಮ್ಮ ಸಂಕಟಗಳಿಗೆ ಕಾರಣ. ಇದನ್ನು ಮೀರಲು ನೆರವು ನೀಡಬೇಕೆಂಬುದು ನಮ್ಮ ಬದುಕಿನಲ್ಲಿ ಧರ್ಮದ ಪಾತ್ರ. ‘ಧರ್ಮಂ ಪ್ರಧಾನಂ, ಅರ್ಥಂ ಧರ್ವಂಘ್ರಿಪ ಫಲಂ, ಅದರ್ಕೆ ರಸಮದು ಕಾಮಂ’- ಇದು ಪಂಪನ ನಿಲವು. ಆದರೆ ನಮ್ಮ ಸಂದರ್ಭದಲ್ಲಿ ಧರ್ಮದ ಪ್ರತಿನಿಧಿಗಳೆನ್ನಿಸಿಕೊಂಡವರು ಭೋಗ ಹಾಗೂ ಅಧಿಕಾರದ ಬೆನ್ನುಹತ್ತಿ ಹೋಗುತ್ತಿರುವಂತೆ ತೋರುತ್ತಿದೆ.

    ಕನ್ನಡ ಭಕ್ತಿಸಾಹಿತ್ಯವಂತೂ ಪ್ರಭುತ್ವವನ್ನು ನಿರಾಕರಿಸುವ ನೆಲೆಯಲ್ಲಿಯೇ ರೂಪುಗೊಂಡಿದೆ. ದೇವಮಂದಿರಗಳು ಅಧಿಕಾರ ಕೇಂದ್ರಗಳಾಗಿ ಶೋಷಣೆಗೆ ದಾರಿ ಮಾಡಿಕೊಟ್ಟಾಗ ಅವುಗಳನ್ನು ನಿರಾಕರಿಸಿ ಮಾನವನ ಆತ್ಮಸ್ವಾತಂತ್ರ್ಯವನ್ನು ಎತ್ತಿಹಿಡಿಯಲಾಯಿತು. ನಮ್ಮ ಸಾಮಾಜಿಕ ಬದುಕಿನಲ್ಲಿ ಧರ್ಮವನ್ನು ಅಧ್ಯಾತ್ಮದ ಸಾಧನವಾಗಿ ಮಾತ್ರ ಪರಿಭಾವಿಸಿಲ್ಲ, ಅದಕ್ಕೆ ಭಾವನಾತ್ಮಕ ಬೆಸುಗೆಯೂ ಇದೆ. ಇದನ್ನೇ ಧರ್ವಂಧರು ಅಸ್ತ್ರವನ್ನಾಗಿ ಬಳಸಿಕೊಳ್ಳುವುದು.

    ಧರ್ಮ ಸಮಕಾಲೀನ ಸಂದರ್ಭದಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕ ವಲಯಗಳೊಡನೆ ಹೊಂದಿರುವ ಸಂಬಂಧಗಳ ಸ್ವರೂಪವನ್ನು ವೈಚಾರಿಕ ನೆಲೆಯಲ್ಲಿ ಆಧುನಿಕ ಕನ್ನಡ ಸಾಹಿತ್ಯ ವಿಶ್ಲೇಷಿಸಿದೆ. ಧರ್ಮ ಅಫೀಮು ಇದ್ದಹಾಗೆ ಎಂಬುದು ಈ ಚಿಂತನೆಯ ಒಂದು ನೆಲೆ; ಧರ್ಮ ಮೂಲಭೂತವಾದಿ ಕೋಮುವಾದಿಯ ರೂಪಧಾರಣೆ ಮಾಡುವ ಅಪಾಯ ಇನ್ನೊಂದು ಬಗೆಯ ಗ್ರಹಿಕೆ; ಧರ್ಮದ ಹೆಸರಿನಲ್ಲಿ ಸಂಪ್ರದಾಯವಾದಿ ಮನಸ್ಸುಗಳು ಹಿಂಸೆಗೆ ಕಾರಣವಾಗುತ್ತಿರುವುದು ಅದರ ಮತ್ತೊಂದು ನೆಲೆ. ಧರ್ಮದ ವಾಣಿಜ್ಯೀಕರಣದ ಬಗ್ಗೆಯೂ ಕನ್ನಡ ಸಂವೇದನಾಶೀಲ ಮನಸ್ಸು ಮೊದಲಿನಿಂದಲೂ ಚಿಂತಿಸಿ ಪ್ರತಿಭಟಿಸಿದೆ. ನಿರಸನ ಪ್ರಕ್ರಿಯೆ ಧರ್ಮದ ಪ್ರಧಾನ ನೆಲೆ; ಅಧಿಕಾರ ನಿರಸನ, ಅಹಂಕಾರ ನಿರಸನ, ಅತಿಭೋಗ ನಿರಸನ ಆತ್ಮೋನ್ನತಿಗೆ ಹಾದಿ; ‘ಬತ್ತಲಾಗದೆ ಬಯಲು ಸಿಕ್ಕದಿಲ್ಲಿ’ (ಗೋಪಾಲಕೃಷ್ಣ ಅಡಿಗ). ಆದರೆ ಈಗ ನಿರಸನದ ಬದಲು ಸಂಚಯನ ಧಾರ್ವಿುಕ ವಲಯವನ್ನು ಆವರಿಸಿಕೊಂಡಿದೆ. ಮಾನವಕುಲದ ಅಭ್ಯುದಯಕ್ಕೆ ಕಾರಣವಾಗಬಹುದಾದ ‘ಆತ್ಮಶಕ್ತಿ’ಯ ಚಿಂತನೆಗಿಂತಲೂ ಅಧಿಕ ಸಂಪತ್ತು ಸಂಚಯಿಸುವುದು ಮಠಗಳ ಗುರಿಯಾದಂತೆ ತೋರುತ್ತಿದೆ. ಅದನ್ನು ರಕ್ಷಿಸಿಕೊಳ್ಳಲು ಪ್ರಭುತ್ವದ ನೆರವು ಅಗತ್ಯ. ರಾಜಕೀಯದಲ್ಲಿಯೂ ಸಂಪತ್ತಿನ ಸಂಚಯನವೇ ಏಕೈಕ ಗುರಿಯಾಗಿರುವುದನ್ನು ಗಮನಿಸಬೇಕು. ಇದನ್ನೇ ಜನತೆಯೂ ಅನುಸರಿಸುತ್ತಿದೆ.

    ಅಲ್ಲಮನ ವಚನವೊಂದು ಇಲ್ಲಿ ನನಗೆ ನೆನಪಾಗುತ್ತಿದೆ; ‘ಹೊರವೇಷದ ವಿಭೂತಿ ರುದ್ರಾಕ್ಷಿಯನು ಧರಿಸಿಕೊಂಡು / ವೇದಶಾಸ್ತ್ರ ಪುರಾಣ ಆಗಮದ ಬಹುಪಾಠಿಗಳು / ಅನ್ನ ಹೊನ್ನು ವಸ್ತ್ರವ ಕೊಡುವವನ ಬಾಗಿಲ ಕಾಯುವ / ಮಣ್ಣ ಪುತ್ಥಳಿಯಂತಹ ನಿತ್ಯನಿಯಮದ ಹಿರಿಯರುಗಳು/ ಅದೆಂತೆಂದೆಡೆ: / ವೇದವೃದ್ಧಾ ವಯೋವೃದ್ಧಾಃ ಶಾಸ್ತ್ರಾವೃದ್ಧಾ ಬಹುಶ್ರುತಾಃ / ಇತ್ಯೇತೇ ಧನವೃದ್ಧಸ್ಯ ದ್ವಾರೇ ತಿಷ್ಠಂತಿ ಕಿಂಕರಾಃ! ಎಂಬುದಾಗಿ / ಎಲ್ಲ ಹಿರಿಯರು ಲಕ್ಷ್ಮಿಯ ದ್ವಾರಪಾಲಕರು ಗುಹೇಶ್ವರಾ (1645, ಅಲ್ಲಮಪ್ರಭುದೇವರ ವಚನ ಸಂಪುಟ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ).

    (ಲೇಖಕರು ಖ್ಯಾತ ವಿಮರ್ಶಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts