ಶೇ.100 ರಷ್ಟು ಮತದಾನಕ್ಕೆ ಯತ್ನ

ಎನ್.ಆರ್.ಪುರ: ಮತದಾನ ನಮ್ಮ ಹಕ್ಕಾಗಿದ್ದು ಸಮಾಜದ ಕಟ್ಟಕಡೆ ವ್ಯಕ್ತಿಯೂ ಮತದಾನದಿಂದ ವಂಚಿತಾರಗಬಾರದು ಎಂದು ಸೆಕ್ಟರ್ ಅಧಿಕಾರಿ ಇಒ ಕೆ.ಹೊಂಗಯ್ಯ ಹೇಳಿದರು.

ಅರಳಿಕೊಪ್ಪ ಗ್ರಾಮದ ದಿವ್ಯಕಾರುಣ್ಯ ಬುದ್ಧಿಮಾಂದ್ಯ ಆಶ್ರಮದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮತದಾನ ನಮಗೆ ಸಿಕ್ಕ ಸಂವಿಧಾನದ ಹಕ್ಕು. ಅವಿದ್ಯಾವಂತರು, ವಯೋವೃದ್ಧರು ಮತದಾನದಲ್ಲಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಚುನಾವಣಾ ಆಯೋಗ ಸಾರಿಗೆ ವ್ಯವಸ್ಥೆ ಮಾಡಿದೆ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ತಾಲೂಕು ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಎನ್.ಎಲ್.ಮನೀಷ್ ಮಾತನಾಡಿ, ಮತದಾನ ಮಹತ್ವ ಕುರಿತು ಸ್ವೀಪ್ ಸಮಿತಿ ಮೂಲಕ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದಕ್ಕೆ ಉತ್ತಮ ಸ್ಪಂದನೆ ದೊರಕುತ್ತಿದೆ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಮತದಾನವನ್ನು ಹಬ್ಬದ ರೀತಿಯಲ್ಲಿ ಆಚರಿಸಬೇಕು ಎಂದರು.

ಅಂಗವಿಕಲ, ವಯೋವೃದ್ಧಿಗೆ ವಾಹನ ವ್ಯವಸ್ಥೆ: ದಿವ್ಯಕಾರುಣ್ಯದಲ್ಲಿರುವ 50ಕ್ಕೂ ಅಧಿಕ ಮತದಾನ ಮಾಡುವ ವಯೋವೃದ್ಧರು, ಅಂಗವಿಲಕಲರನ್ನು ಚುನಾವಣಾ ಅಧಿಕಾರಿಗಳೊಂದಿಗೆ ರ್ಚಚಿಸಿ ಒಂದೆರಡು ಆಟೋ ವ್ಯವಸ್ಥೆ ಮಾಡಿ ಮತಗಟ್ಟೆಗಳಿಗೆ ಕರೆದುಕೊಂಡು ಹೋಗಿ ಮತದಾನದ ನಂತರ ವಾಪಸ್ ಆಶ್ರಮಕ್ಕೆ ಬಿಡುವ ವ್ಯವಸ್ಥೆ ಮಾಡಲಾಗುವುದು ಎಂದು ಸೆಕ್ಟರ್ ಅಧಿಕಾರಿ ಕೆ.ಹೊಂಗಯ್ಯ ತಿಳಿಸಿದರು. ತಕ್ಷಣ ದೂರವಾಣಿ ಮೂಲಕ ಸಿಡಿಪಿಒ ಜತೆ ಮಾತನಾಡಿ, ಸಾರಿಗೆ ವ್ಯವಸ್ಥೆ ಹಾಗೂ ಅಂಗವಿಕಲರು ಮತದಾನ ಮಾಡಲು ಅನುಸರಿಸಬೇಕಾದ ಕ್ರಮ ಕೈಗೊಳ್ಳಲು ಒಮ್ಮೆ ಈ ಆಶ್ರಮಕ್ಕೆ ಭೇಟಿ ನೀಡುವಂತೆ ಸೂಚಿಸಿದರು. ಸಾರಿಗೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ನಿಗದಿತ ಫಾರಂನಲ್ಲಿ ಮಾಹಿತಿ ಭರ್ತಿ ಮಾಡಿ ಕಳಿಸಲು ಆಶ್ರಮದ ಮುಖ್ಯಸ್ಥ ಆನಂದಸ್ವಾಮಿ ಸೂಚಿಸಿದರು.