ಕಾರ್ಯದರ್ಶಿ ಮೇಲೆ ಹಲ್ಲೆ, ದೂರು ದಾಖಲು

ಖಾನಾಪುರ: ತಾಲೂಕಿನ ಹಲಕರ್ಣಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸಿದ್ರಾಮ ಕಾಂಬಳೆ ಎಂಬುವರು ತಮ್ಮ ಮೇಲೆ ಗಾಂಧಿನಗರ ಗ್ರಾಮದ ಸಂಜಯ ಬಡಿಗೇರ ಎಂಬಾತ ಮಂಗಳವಾರ ಸಂಜೆ ಹಲ್ಲೆ ನಡೆಸಿದ್ದಾರೆ ಎಂದು ಅವರು ಖಾನಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಗ್ರಾಪಂ ವತಿಯಿಂದ ಗಾಂಧಿ ನಗರದಲ್ಲಿ ಕೈಗೊಂಡ ಕಾಮಗಾರಿ ಪರಿಶೀಲನೆಗೆ ತೆರಳಿದ್ದಾಗ ಸಂಜಯ ತಮ್ಮ ಮೇಲೆ ದೈಹಿಕ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಹಾಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ಕಾರ್ಯದರ್ಶಿ ಸಿದ್ರಾಮ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಖಾನಾಪುರ ಠಾಣೆ ಪೊಲೀಸರು ಸಂಜಯ ವಿರುದ್ಧ ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿ ಹಲ್ಲೆ ನಡೆಸಿದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.