ಮೀನುಗಾರರಿಗೆ ಆರ್ಥಿಕ ಚೈತನ್ಯ ತುಂಬಿದ ಕಾಂಗ್ರೆಸ್

ಕಳಸ: ದೇಶದ ಪ್ರತಿಯೊಬ್ಬ ಭಾರತೀಯನಿಗೂ ಆರ್ಥಿಕ, ಶೈಕ್ಷಣಿಕವಾಗಿ ಚೈತನ್ಯ ತುಂಬಿದ ಪಕ್ಷ ಕಾಂಗ್ರೆಸ್ ಎಂದು ಅಖಿಲ ಭಾರತ ಮೀನುಗಾರರ ರಾಷ್ಟ್ರೀಯ ಕಾರ್ಯದರ್ಶಿ ಸಭಾಪತಿ ಹೇಳಿದರು.

ಪಟ್ಟಣದ ರೋಟರಿ ಭವನದಲ್ಲಿ ಮಂಗಳವಾರ ಕಳಸ ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಬೂತ್ ಅಧ್ಯಕ್ಷರು ಮತ್ತು ಏಜೆಂಟರ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬ್ಯಾಂಕ್​ಗಳು ಬಂಡವಾಳಶಾಹಿಗಳ ಕೈಯಲ್ಲಿದ್ದಂತಹ ಸಂದರ್ಭ ರಾಷ್ಟ್ರೀಕರಣ ಮಾಡಿ ಮ್ಯಾನೇಜರ್​ಗಳೇ ಜನರ ಬಳಿಗೆ ಹೋಗಿ ಸಾಲ ಕೊಡುವಂತೆ ಮಾಡಿ ಪ್ರತಿಯೊಬ್ಬರಲ್ಲೂ ಆರ್ಥಿಕ ಚೈತನ್ಯ ಮೂಡುವಂತೆ ಮಾಡಿದ್ದು ಇಂದಿರಾ ಗಾಂಧಿ. ರಾಜಧನ ರದ್ದು, ಭೂ ಸುಧಾರಣೆ, ಶೈಕ್ಷಣಿಕ ಕ್ರಾಂತಿ, ಮಹಿಳೆಯರಿಗೆ ಆರ್ಥಿಕ ಚೈತನ್ಯ ಹೀಗೆ ಹಲವು ಕಾರ್ಯಕ್ರಮ ರೂಪಿಸಿದ್ದು ಕಾಂಗ್ರೆಸ್ ಎಂದರು.

ಬಿಜೆಪಿಗೆ ಹಿಂದು, ಬಂಧು, ಗೋಮಾತೆ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಜಾತಿ, ಧರ್ಮ, ದೇವರ ಹೆಸರಲ್ಲಿ ರಾಜಕೀಯ ಮಾಡಿ ದೇಶವನ್ನು ಒಡೆದಾಳುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಎಐಸಿಸಿ ಸದಸ್ಯ ಅಮೃತ್ ಶೆಣೈ ಮಾತನಾಡಿ, ಜೈಹಿಂದ್ ಎಂದು ಘೊಷಣೆ ಕೂಗಿ ದೇಶ ದ್ರೋಹ, ಕಾನೂನು ಉಲ್ಲಂಘನೆ ಮಾಡುವುದು ಬಿಜೆಪಿ ಕೆಲಸ. ಇಲ್ಲಿನ ಸಂಸದರು ಚುನಾವಣೆಯಲ್ಲಿ ಗೆದ್ದ ಬಳಿಕ ಈ ಕಡೆ ಮುಖಹಾಕಿಲ್ಲ. ಕ್ಷೇತ್ರದ ಅಭಿವೃದ್ಧಿ ಕಡೆ ಗಮನಹರಿಸಿಲ್ಲ ಎಂದು ಆರೋಪಿಸಿದರು.