ಡೈರಿಯಲ್ಲಿ ಸಂಕೇತಾಕ್ಷರ

ಬೆಂಗಳೂರು: ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ಹಗರಣ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ಎಸಿಬಿಯಿಂದ (ಭ್ರಷ್ಟಾಚಾರ ನಿಗ್ರಹ ದಳ) ದಾಳಿಗೊಳಗಾದ ಖಾಸಗಿ ವ್ಯಕ್ತಿ ರಾಜೇಶ್ ವ್ಯಕ್ತಿಯೊಬ್ಬರಿಂದ 63 ಲಕ್ಷ ರೂ.ಗೆ ಫ್ಲಾ್ಯಟ್ ಖರೀದಿಸಿ ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಶುಕ್ರವಾರ ಎಸಿಬಿ ಅಧಿಕಾರಿಗಳು ಚೆಕ್ ಡಿಸ್ಕೌಂಟರ್ ರಾಜೇಶ್ ಎಂಬಾತನ ಕಾಟನ್​ಪೇಟೆ ನಿವಾಸಕ್ಕೆ ದಾಳಿ ನಡೆಸಿದ್ದರು. ಈ ಸುದ್ದಿ ಮಾಧ್ಯಮದಲ್ಲಿ ಪ್ರಕಟವಾಗಿರುವುದನ್ನು ಗಮನಿಸಿದ ವ್ಯಕ್ತಿಯೊಬ್ಬರು, ತಮ್ಮ 2 ಫ್ಲಾ್ಯಟ್​ನ್ನು 63 ಲಕ್ಷ ರೂ.ಗೆ ಖರೀದಿಸಿದ್ದ ರಾಜೇಶ್ ಹಣ ನೀಡದೆ ವಂಚಿಸಿದ್ದಾನೆ ಎಂದು ಆರೋಪಿಸಿ ಎಸಿಬಿ ಅಧಿಕಾರಿಗಳಿಗೆ ಶನಿವಾರ (ಮೇ18) ದೂರು ನೀಡಿದ್ದಾರೆ.

ವ್ಯಕ್ತಿಯೊಬ್ಬರು ವರ್ತರಿನಲ್ಲಿ 2 ಫ್ಲ್ಯಾಟ್‌ ಮಾರಾಟಕ್ಕೆ ಇಟ್ಟಿದ್ದರು. 2018ರಲ್ಲಿ 63 ಲಕ್ಷ ರೂ.ಗೆ ರಾಜೇಶ್ ಈ ಫ್ಲಾ್ಯಟ್​ಗಳನ್ನು ಖರೀದಿಸಿದ್ದ. ಹಣ ನೀಡುವುದಾಗಿ ಫ್ಲಾ್ಯಟ್ ಮಾಲೀಕರನ್ನು ನಂಬಿಸಿದ್ದ ರಾಜೇಶ್, 1 ಫ್ಲಾ್ಯಟ್ ಪತ್ನಿಯ ಹೆಸರಿಗೆ ಹಾಗೂ ಮತ್ತೊಂದು ಫ್ಲಾ್ಯಟ್ ಅನ್ನು ಸಹೋದರನ ಹೆಸರಿಗೆ ರಿಜಿಸ್ಟರ್ ಮಾಡಿಸಿದ್ದ. ನಂತರ ಫ್ಲಾ್ಯಟ್ ಮಾಲೀಕರನ್ನು ಕಬ್ಬನ್​ಪೇಟೆಯ ಶ್ರೀ ಬನಶಂಕರಿ ಮಹಿಳಾ ಕೋ-ಆಪರೇಟಿವ್ ಸೊಸೈಟಿಗೆ ಕರೆದುಕೊಂಡು ಹೋಗಿ ಫ್ಲಾ್ಯಟ್ ಮಾಲೀಕರ ತಾಯಿ ಜಯಮ್ಮ ಎಂಬುವರ ಹೆಸರಿನಲ್ಲಿ ಎರಡು ಖಾತೆಗಳನ್ನು ತೆರೆದಿದ್ದ. ಮಾಲೀಕರ ಮುಂದೆಯೇ ಬ್ಯಾಂಕ್​ನಲ್ಲಿ ಚೆಕ್​ಗಳನ್ನು ಸಿದ್ಧಪಡಿಸಿ, ಸೇಲ್​ಡೀಡ್ ಆದ ನಂತರ ಸದ್ಯದಲ್ಲೇ ನಿಮ್ಮ ಬ್ಯಾಂಕ್ ಖಾತೆಗೆ 63 ಲಕ್ಷ ರೂ. ಜಮಾ ಆಗುತ್ತದೆ ಎಂದು ಹೇಳಿದ್ದ. ಆದರೆ, ಇದಾದ ನಂತರ ಹಣವನ್ನೂ ಹಾಕದೆ, ಅವರಿಂದ ಖರೀದಿಸಿದ ಫ್ಲಾ್ಯಟ್​ಗಳನ್ನೂ ಹಿಂತಿರುಗಿಸದೆ ವಂಚಿಸಿದ್ದ.

ಪ್ರಕರಣವನ್ನೇ ಮುಚ್ಚಿಸಿದ್ದ: ಈ ಬಗ್ಗೆ ಫ್ಲಾ್ಯಟ್ ಮಾಲೀಕರು ವರ್ತರು ಪೊಲೀಸ್ ಠಾಣೆಯಲ್ಲಿ ರಾಜೇಶ್ ವಿರುದ್ಧ ದೂರು ನೀಡಿದ್ದರು. ಆದರೆ, ತನ್ನ ಅಧಿಕಾರ ಹಾಗೂ ಹಣ ಬಲ ಬಳಸಿಕೊಂಡ ರಾಜೇಶ್ ಈ ಪ್ರಕರಣವನ್ನು ಮುಚ್ಚಿ ಹಾಕಿಸಿದ್ದ. ಇದಾದ ನಂತರ ವಂಚನೆಗೊಳಗಾದ ಫ್ಲಾ್ಯಟ್ ಮಾಲೀಕರು ಏನೂ ಮಾಡಲಾಗದೆ ಸುಮ್ಮನಿದ್ದರು. ಶನಿವಾರ ಎಸಿಬಿ ಕಚೇರಿಗೆ ಬಂದು ತಮಗಾಗಿರುವ ವಂಚನೆ ಬಗ್ಗೆ ತಿಳಿಸಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ರಾಜೇಶ್ ಪ್ಲ್ಯಾಟ್‌ ಮಾಲೀಕರಿಗೆ ವಂಚಿಸಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಎಸಿಬಿ ಹಿರಿಯ ಅಧಿಕಾರಿಯೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಫ್ಲಾ್ಯಟ್ ಮಾಲೀಕರು ನ್ಯಾಯಾಲಯಕ್ಕೆ ಹೋಗಿ ನಮಗೆ ರಾಜೇಶ್ ಹಣ ನೀಡಲಿಲ್ಲ ಎಂದು ದೂರು ನೀಡಲು ಅವಕಾಶಗಳಿತ್ತು. ಆದರೆ, ರಾಜೇಶ್ ಪ್ರಭಾವಿಯಾದ ಹಿನ್ನೆಲೆಯಲ್ಲಿ ಆತನ ವಿರುದ್ಧ ಹೋರಾಟ ಮಾಡಲು ಹಿಂದೇಟು ಹಾಕಿದ್ದರು ಎನ್ನಲಾಗಿದೆ.

ನೂರಾರು ಕೋಟಿ ರೂ. ವರ್ಗಾವಣೆ

ಬನಶಂಕರಿ ಮಹಿಳಾ ಕೋ-ಆಪರೇಟಿವ್ ಸೊಸೈಟಿಯಲ್ಲಿದ್ದ ಟಿಡಿಆರ್​ಗೆ ಸಂಬಂಧಿಸಿದ ನೂರಾರು ದಾಖಲೆಗಳನ್ನು ಈಗಾಗಲೇ ಜಪ್ತಿ ಮಾಡಿದ್ದೇವೆ. ಅವುಗಳನ್ನು ಪರಿಶೀಲಿಸಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್​ನಿಂದ ವರ್ಗಾವಣೆಯಾದ ಹಣದ ಬಗ್ಗೆ ಮಾಹಿತಿ ಕಲೆ ಹಾಕಲಾಗುವುದು. ಬ್ಯಾಂಕ್​ನಿಂದ ನೂರಾರು ಕೋಟಿ ರೂ. ವರ್ಗಾವಣೆಯಾಗಿರುವ ಬಗ್ಗೆ ಸಾಕ್ಷ್ಯ ಕಲೆ ಹಾಕಿದ್ದೇವೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಡಿಕೋಡ್ ಮಾಡಬೇಕು…

ಕಬ್ಬನ್​ಪೇಟೆಯ ಶ್ರೀ ಬನಶಂಕರಿ ಮಹಿಳಾ ಕೋ-ಆಪರೇಟಿವ್ ಸೊಸೈಟಿ ಹಾಗೂ ರಾಜೇಶ್ ನಿವಾಸದ ಮೇಲೆ ಶನಿವಾರವೂ ದಾಳಿ ಮುಂದುವರಿದಿದೆ. ಶುಕ್ರವಾರ ರಾಜೇಶ್ ಮನೆಯಲ್ಲಿ ಪತ್ತೆಯಾದ ಡೈರಿಯಲ್ಲಿ ಟಿಡಿಆರ್ ಪ್ರಕರಣದಲ್ಲಿ ಹಣ ಪಡೆದ ಕೆಲ ಸರ್ಕಾರಿ ಅಧಿಕಾರಿಗಳ ಹೆಸರುಗಳು ಹಾಗೂ ಅವರು ಪಡೆದ ಹಣದ ಪ್ರಮಾಣದ ಬಗ್ಗೆ ಉಲ್ಲೇಖಿಸಲಾಗಿದೆ. ಡೈರಿಯಲ್ಲಿ ರಾಜೇಶ್ ಕೆಲ ಕೋಡ್​ವರ್ಡ್​ಗಳನ್ನು ಉಲ್ಲೇಖಿಸಿದ್ದಾನೆ. ಈ ಬಗ್ಗೆ ರಾಜೇಶ್​ನ್ನು ವಿಚಾರಣೆ ನಡೆಸಿ ಕೋಡ್​ವರ್ಡ್ ಗಳನ್ನು ಡಿಕೋಡ್ ಮಾಡಿಸಬೇಕು ಎಂದು ಎಸಿಬಿ ಅಧಿಕಾರಿಗಳು ವಿಜಯವಾಣಿಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *