ತಾಲೀಮಿಗೆ ಎರಡನೇ ತಂಡ ಸೇರ್ಪಡೆ

ಮೈಸೂರು: ದಸರಾ ಗಜಪಡೆ ಸೇರಿಕೊಂಡ ಎರಡನೇ ತಂಡದ ಆನೆಗಳು ಶನಿವಾರದಿಂದ ಕ್ಯಾಪ್ಟನ್ ಅರ್ಜುನನೊಂದಿಗೆ ತಾಲೀಮಿನಲ್ಲಿ ಭಾಗವಹಿಸಿದವು. ಮೊದಲ ತಂಡದಲ್ಲಿ ಆರು ಆನೆಗಳು ಬಂದಿದ್ದು, ಎರಡನೇ ತಂಡದಲ್ಲೂ ಆರು ಆನೆಗಳು ಸೇರಿಕೊಂಡವು.

ಅರ್ಜುನನ ಜತೆಗೆ ಮುಂದಿನ ಉತ್ತರಾಧಿಕಾರಿ ಎಂದು ಬಿಂಬಿಸಲಾಗುತ್ತಿರುವ ಧನಂಜಯನಿಗೂ 300 ಕೆ.ಜಿ.ಯ ಮರಳು ತುಂಬಿದ ಮೂಟೆಗಳನ್ನು ಹಾಕಿ ತಾಲೀಮು ನಡೆಸಲಾಯಿತು.

ಎರಡನೇ ತಂಡದಲ್ಲಿ ಬಂದ ಆನೆಗಳನ್ನು ತೂಕ ಹಾಕಿದ್ದು, ಅಭಿಮನ್ಯು 4930 ಕೆ.ಜಿ.ತೂಗುವ ಮೂಲಕ ಬಲ ಹೆಚ್ಚಿಸಿಕೊಂಡಿದ್ದಾನೆ. ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತಿದ್ದ ಬಲರಾಮ 4910 ಕೆ.ಜಿ.ತೂಗಿ ಎರಡನೇ ಸ್ಥಾನದಲ್ಲಿದ್ದಾನೆ. ಉಳಿದಂತೆ ಪ್ರಶಾಂತ 4,650 ಕೆ.ಜಿ., ದ್ರೋಣ 3900 ಕೆ.ಜಿ., ಕಾವೇರಿ 2,830 ಕೆ.ಜಿ., ವಿಜಯ 2,790 ಕೆ.ಜಿ. ತೂಕ ಇವೆ.

ಸದಾ ಮೊದಲ ತಂಡದಲ್ಲಿ ಆಗಮಿಸುತ್ತಿದ್ದ ಅಭಿಮನ್ಯು, ಬಲರಾಮ ಆನೆಗಳು ರಾಮನಗರದಲ್ಲಿ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರಿಂದ ತಡವಾಗಿ ಎರಡನೇ ತಂಡದಲ್ಲಿ ಸೇರಿಕೊಂಡವು.