ಇಂದೋರ್: ಪ್ರಮುಖ ಆಟಗಾರರ ಗೈರಿನಲ್ಲೂ ಏಷ್ಯಾಕಪ್ ಗೆಲುವಿನ ಲಯವನ್ನು ಪ್ರವಾಸಿ ಆಸ್ಟ್ರೆಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕಾಯ್ದುಕೊಂಡಿರುವ ಭಾರತ ತಂಡ ಇದೀಗ ಸರಣಿ ವಶಪಡಿಸಿಕೊಳ್ಳಲು ಸಜ್ಜಾಗಿದೆ. ಹೋಳ್ಕರ್ ಸ್ಟೇಡಿಯಂನಲ್ಲಿ ಭಾನುವಾರ ಎರಡನೇ ಏಕದಿನ ಪಂದ್ಯ ನಡೆಯಲಿದ್ದು, ಕೆಎಲ್ ರಾಹುಲ್ ಪಡೆ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ. ಅತ್ತ ಆಸ್ಟ್ರೆಲಿಯಾಕ್ಕೆ ಸರಣಿ ಜೀವಂತವಿಡಲು ಗೆಲ್ಲಲೇಬೇಕಾದ ಒತ್ತಡ ಎದುರಾಗಿದೆ.
ತವರಿನ ವಿಶ್ವಕಪ್ಗೆ ಮುನ್ನ ವಿಶ್ವಾಸ ವೃದ್ಧಿಸುವಂತ ನಿರ್ವಹಣೆ ಭಾರತ ತಂಡದಿಂದ ಬರುತ್ತಿದೆ. ಇದರ ಜತೆಗೆ ಹಲವು ಪ್ಲಸ್ ಪಾಯಿಂಟ್ಗಳು ಕಾಣಿಸುತ್ತಿವೆ. ವೇಗಿಗಳ ಭರ್ಜರಿ ಬೌಲಿಂಗ್, ಅಗ್ರ ಕ್ರಮಾಂಕದ ರನ್ಪ್ರವಾಹ ಇದರಲ್ಲಿ ಪ್ರಮುಖವಾದವುಗಳು. ಸೂರ್ಯಕುಮಾರ್ ಸಕಾಲದಲ್ಲಿ ಲಯ ಕಂಡುಕೊಂಡಂತಿದೆ. ಇದರ ನಡುವೆ ಕೆಲ ಹಿನ್ನಡೆಗಳೂ ಇವೆ. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವ ಶ್ರೇಯಸ್ ಅಯ್ಯರ್ ಅವರಿಂದ ಇನ್ನೂ ದೊಡ್ಡ ಇನಿಂಗ್ಸ್ ಬಂದಿಲ್ಲ. ಗಾಯ ಮರುಕಳಿಸಿದ ಕಾರಣ ಏಷ್ಯಾಕಪ್ನಲ್ಲಿ ಕೆಲ ಪಂದ್ಯಗಳನ್ನು ತಪ್ಪಿಸಿಕೊಂಡ ಶ್ರೇಯಸ್, ವಿಶ್ವಕಪ್ನಲ್ಲಿ 4ನೇ ಕ್ರಮಾಂಕಕ್ಕೆ ಪ್ರಮುಖ ಆಕಾಂಯಾಗಿದ್ದಾರೆ. ವಿಶ್ವಕಪ್ ತಂಡಕ್ಕೆ ಸೇರುವ ರೇಸ್ನಲ್ಲಿರುವ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ರಿಂದ ಇನ್ನಷ್ಟು ಪರಿಣಾಮಕಾರಿ ಬೌಲಿಂಗ್ ಕೂಡ ನಿರೀಸಲಾಗುತ್ತಿದೆ. ಇನ್ನು ಬೌಲಿಂಗ್ ಆಲ್ರೌಂಡರ್ ಆಗಿ ಸ್ಥಾನ ಪಡೆದಿರುವ ಶಾರ್ದೂಲ್ ಠಾಕೂರ್ ಮೊಹಾಲಿಯಲ್ಲಿ 10 ಓವರ್ಗಳಲ್ಲಿ 78 ರನ್ ನೀಡಿ ದುಬಾರಿ ಎನಿಸಿದ್ದರು. ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವುದನ್ನು ಸಮರ್ಥಿಸುವಂಥ ನಿರ್ವಹಣೆ ಅವರಿಂದ ಬರಬೇಕಿದೆ.
ರಾಜ್ಕೋಟ್ನಲ್ಲಿ ನಡೆಯಲಿರುವ ಕೊನೇ ಪಂದ್ಯಕ್ಕೆ ಭಾರತದ ಪ್ರಮುಖ ಆಟಗಾರರು ಮರಳಲಿದ್ದಾರೆ. ಅದೇ ರೀತಿ ಆಸೀಸ್ಗೂ ಕೊನೇ ಪಂದ್ಯದವರೆಗೆ ಕೆಲ ಪ್ರಮುಖ ಆಟಗಾರರ ಗೈರು ಕಾಡುವ ಸಾಧ್ಯತೆಗಳಿವೆ. ಆದರೆ ಕೊನೇ ಪಂದ್ಯದಲ್ಲಿ ಪೂರ್ಣ ಸಾಮರ್ಥ್ಯ ಪ್ರದರ್ಶಿಸುವ ಮುನ್ನ ಸರಣಿ ಜೀವಂತವಿಡುವ ಒತ್ತಡವೂ ಪ್ಯಾಟ್ ಕಮ್ಮಿನ್ಸ್ ಬಳಗದ ಮೇಲಿದೆ. ಮೊಹಾಲಿಯಲ್ಲಿ ಡೇವಿಡ್ ವಾರ್ನರ್ ಉತ್ತಮ ಆರಂಭ ಒದಗಿಸಿದ್ದರೂ, ನಂತರ ಆಸೀಸ್ ಬ್ಯಾಟಿಂಗ್ ಕ್ರಮಾಂಕ ಲಯ ತಪ್ಪಿತ್ತು.
ಟೀಮ್ ನ್ಯೂಸ್:
ಭಾರತ: ಮೊಹಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಅವರಿಬ್ಬರು ಸರಣಿಯಲ್ಲಿ 2 ಪಂದ್ಯ ಮಾತ್ರ ಆಡಲಿದ್ದಾರೆ ಎಂದು ಮೊದಲೇ ಸುಳಿವು ನೀಡಲಾಗಿತ್ತು. ಇದರನ್ವಯ ಮೊದಲ ಪಂದ್ಯದಲ್ಲಿ ಸಿರಾಜ್ಗೆ ವಿಶ್ರಾಂತಿ ನೀಡಿರುವುದರಿಂದ ಈ ಬಾರಿ ಅವರು ಮರಳಿದರೆ, ಬುಮ್ರಾಗೆ ವಿಶ್ರಾಂತಿ ನೀಡಬಹುದು. ವಾಷಿಂಗ್ಟನ್ ಸುಂದರ್ಗಾಗಿ ಋತುರಾಜ್ ಗಾಯಕ್ವಾಡ್ ಸ್ಥಾನ ಬಿಟ್ಟುಕೊಡುವ ಸಾಧ್ಯತೆ ಇದ್ದು, ಆಗ ಇಶಾನ್ ಕಿಶನ್ ಆರಂಭಿಕರಾಗಬಹುದು.
ಆಸ್ಟ್ರೆಲಿಯಾ: ಫಿಟ್ನೆಸ್ ಸಮಸ್ಯೆ ಹೊಂದಿರುವ ಮಾರ್ಕಸ್ ಸ್ಟೋಯಿನಿಸ್ ಈ ಬಾರಿ ಹೊರಗುಳಿದರೆ, ಆರನ್ ಹಾರ್ಡಿ ಅಥವಾ ಜೋಶ್ ಹ್ಯಾಸಲ್ವುಡ್ ಆಡಬಹುದು. ಅಲೆಕ್ಸ್ ಕ್ಯಾರಿ ವಿಕೆಟ್ ಕೀಪರ್ ಆಗಿ ತಂಡಕ್ಕೆ ಮರಳುವ ನಿರೀಕ್ಷೆ ಇದ್ದು, ಆಗ ಮ್ಯಾಥ್ಯೂ ಶಾರ್ಟ್ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಮಿಚೆಲ್ ಸ್ಟಾರ್ಕ್, ಗ್ಲೆನ್ ಮ್ಯಾಕ್ಸ್ವೆಲ್ ಈ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ.
ಆರಂಭ: ಮಧ್ಯಾಹ್ನ 1.30
ನೇರಪ್ರಸಾರ: ಸ್ಪೋರ್ಟ್ಸ್18, ಜಿಯೋಸಿನಿಮಾ.
ನಂ. 1 ಪಟ್ಟ ಕಾಯ್ದುಕೊಳ್ಳುವ ಸವಾಲು
ಮೊಹಾಲಿಯಲ್ಲಿ ಗೆಲ್ಲುವ ಮೂಲಕ ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ನಂ. 1 ಪಟ್ಟಕ್ಕೇರಿದ ಭಾರತ, ಎಲ್ಲ 3 ಮಾದರಿಯ ರ್ಯಾಂಕಿಂಗ್ನಲ್ಲಿ ಏಕಕಾಲದಲ್ಲಿ ಅಗ್ರಸ್ಥಾನಕ್ಕೇರಿದ ಅಪರೂಪದ ಸಾಧನೆ ಮಾಡಿದೆ. ಭಾರತ ಈಗ ಏಕದಿನ ನಂ. 1 ಪಟ್ಟವನ್ನು ಕಾಯ್ದುಕೊಳ್ಳಬೇಕಾದರೆ 2ನೇ ಪಂದ್ಯದಲ್ಲೂ ಗೆಲ್ಲಬೇಕಾಗಿದೆ. ಆಗ ತವರಿನ ವಿಶ್ವಕಪ್ನಲ್ಲಿ ನಂ. 1 ತಂಡವಾಗಿ ಅಭಿಯಾನ ಆರಂಭಿಸಬಹುದು. ಇಂದೋರ್ನಲ್ಲಿ ಸೋತರೆ ಭಾರತ ಮತ್ತೆ ನಂ. 1 ಪಟ್ಟವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಲಿದೆ. ಆಗ ಕೊನೇ ಪಂದ್ಯದಲ್ಲಿ ಗೆದ್ದರೆ ಮತ್ತೆ ನಂ. 1 ಪಟ್ಟಕ್ಕೇರುವ ಅವಕಾಶವೂ ಭಾರತಕ್ಕೆ ಇರಲಿದೆ. ಒಂದು ವೇಳೆ ಭಾರತ ಕೊನೇ 2 ಪಂದ್ಯದಲ್ಲೂ ಸೋತರೆ, ಪಾಕಿಸ್ತಾನಕ್ಕೆ ವಿಶ್ವಕಪ್ನಲ್ಲಿ ನಂ. 1 ತಂಡವಾಗಿ ಕಣಕ್ಕಿಳಿಯುವ ಅವಕಾಶ ಸಿಗಲಿದೆ. ಆಸೀಸ್ಗೆ ಈಗ ನಂ. 1 ಪಟ್ಟಕ್ಕೇರುವ ಅವಕಾಶ ಇಲ್ಲದಾಗಿದೆ. ಯಾಕೆಂದರೆ ಸರಣಿ ಕ್ಲೀನ್ಸ್ವೀಪ್ ಮಾಡಿದರೆ ಮಾತ್ರ ಆಸೀಸ್ಗೆ ಅಗ್ರಪಟ್ಟ ಒಲಿಯುತ್ತಿತ್ತು. 2012ರಲ್ಲಿ ದಣ ಆಫ್ರಿಕಾ ಏಕಕಾಲದಲ್ಲಿ ಎಲ್ಲ 3 ಪ್ರಕಾರದಲ್ಲಿ ನಂ. 1 ರ್ಯಾಂಕ್ಗೆ ಏರಿದ ಮೊದಲ ತಂಡವೆನಿಸಿದ್ದರೆ, ಭಾರತ ಈಗ ಆ ಸಾಧನೆಯನ್ನು ಸರಿಗಟ್ಟಿದೆ.
ಇಂದೋರ್ನಲ್ಲೂ ಮಳೆ ಭೀತಿ
ಮಳೆ ಸದ್ಯಕ್ಕೆ ಟೀಮ್ ಇಂಡಿಯಾದ ಬೆನ್ನುಬಿಡುವಂತೆ ಕಾಣಿಸುತ್ತಿಲ್ಲ. ಏಷ್ಯಾಕಪ್ನಲ್ಲಿ ಕಾಡಿದ ಬಳಿಕ ಮೊಹಾಲಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದ ವೇಳೆಯೂ ಮಳೆ ಕೆಲಕಾಲ ಅಡಚಣೆ ತಂದಿತ್ತು. ಇದೀಗ ಇಂದೋರ್ನಲ್ಲೂ ಭಾನುವಾರ ಸಂಜೆಯ ವೇಳೆ ಮಳೆಯಾಗುವ ಭೀತಿ ಇದೆ. ಆದರೆ ಪಂದ್ಯ ರದ್ದಾಗುವ ಸಾಧ್ಯತೆ ಇಲ್ಲ.
ಬ್ಯಾಟಿಂಗ್ ಸ್ನೇಹಿ ಪಿಚ್
ಇಂದೋರ್ನ ಹೋಳ್ಕರ್ ಕ್ರೀಡಾಂಗಣ ಕಿರಿದಾದ ಬೌಂಡರಿ ಹೊಂದಿದ್ದು, ಈ ವರ್ಷ ಜನವರಿಯಲ್ಲಿ ಭಾರತ ಇಲ್ಲಿ ಕಿವೀಸ್ ವಿರುದ್ಧ ಏಕದಿನ ಪಂದ್ಯ ಆಡಿದಾಗ ರೋಹಿತ್ ಶರ್ಮ, ಶುಭಮಾನ್ ಗಿಲ್ ಶತಕ ಸಿಡಿಸಿದ್ದರು ಮತ್ತು ಭಾರತ 9 ವಿಕೆಟ್ಗೆ 385 ರನ್ ಪೇರಿಸಿತ್ತು. ಈ ಸಲವೂ ಅದೇ ರೀತಿ ರನ್ಪ್ರವಾಹದ ನಿರೀಕ್ಷೆ ಇದೆ.
ವಿಶ್ವಕಪ್ನಿಂದ ಚಾಹಲ್ ಹೊರಕ್ಕೆ, ಪತ್ನಿ ಧನಶ್ರೀಗೆ ಸಿಕ್ಕಿತು ಚಾನ್ಸ್!